ಗ್ಯಾರಂಟಿ ಯೋಜನೆಗಳಿಗೆ ತಾತ್ವಿಕ ಒಪ್ಪಿಗೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ನಮ್ಮದು ನುಡಿದಂತೆ ನಡೆಯುವ ಸರ್ಕಾರ. ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಐದೂ ಗ್ಯಾರಂಟಿ ಯೋಜನೆಗಳಿಗೆ ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ನಡೆಸಿದ ಮೊದಲ ಸಚಿವ ಸಂಪುಟ ಸಭೆಯ ತೀರ್ಮಾನಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ಗಯಳನ್ನು ಉಚಿತವಾಗಿ ನೀಡಲು ಮಾಹೆಯಾನ 1200 ಕೋಟಿ ರೂ.ಗಳ ಅನುದಾನದ ಅಗತ್ಯವಿದೆ. ಪ್ರತಿ ಮನೆಯ ಒಡತಿಗೆ ಮಾಸಿಕ 2000 ರೂ., ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ ಅಕ್ಕಿ, ಈ ವರ್ಷ ನಿರುದ್ಯೋಗಿ ಪದವೀಧರರಿಗೆ ಎರಡು ವರ್ಷಗಳವರೆಗೆ 3,000 ರೂ.ಗಳನ್ನು ಹಾಗೂ ಡಿಪ್ಲೊಮಾ ಪಾಸಾದವರಿಗೆ 1500 ರೂ.ಗಳನ್ನು ಯುವನಿಧಿಯಡಿ ನೀಡಲಾಗುವುದು. ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡುವ ಕರ್ನಾಟಕದ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲಾಗುವುದು. ಇವುಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿಸ್ತೃತ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು. ಈ ಐದು ಯೋಜನೆಗಳಿಗೆ ಪ್ರಾಥಮಿಕ ಅಂದಾಜಿನ ಪ್ರಕಾರ 50,000 ಕೋಟಿ ರೂ.ಗಳ ಅಗತ್ಯವಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಇಂದಿರಾ ಕ್ಯಾಂಟೀನ್ ಗಳ ಮಾಹಿತಿಯನ್ನೂ ಪಡೆಯಲಾಗುತ್ತಿದ್ದು, ಇವುಗಳನ್ನು ಪುನರಾಂಭಿಸಲಾಗುವುದು ಎಂದರು.
ಅಧಿವೇಶನ:
ಇದೇ 22 ರಿಂದ 24 ರವರೆಗೆ ಮೂರು ದಿನಗಳ ಕಾಲ ಅಧಿವೇಶನವನ್ನು ಕರೆಯಲಾಗುವುದು ಎಂದು ಮಾಹಿತಿ ನೀಡಿದ ಮುಖ್ಯಮಂತ್ರಿಗಳು ಜುಲೈ ಮಾಹೆಯಲ್ಲಿ ಆಯವ್ಯಯ ಮಂಡಿಸಲಾಗುವುದು ಎಂದು ತಿಳಿಸಿದರು.
165 ಭರವಸೆಗಳಲ್ಲಿ 158 ಭರವಸೆಗಳ ಈಡೇರಿಕೆ
ನಮ್ಮ ಹಿಂದಿನ ಅವಧಿಯಲ್ಲಿ ನಮ್ಮ ಸರ್ಕಾರ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಲಾಗಿತ್ತು. ನಾವು ಕೊಟ್ಟ ಮಾತಿನಂತೆಯೇ ನಡೆದಿದ್ದೇವೆ. ನಾವು ನೀಡಿದ ಭರವಸೆಗಳನ್ನು ಈಡೇರಿಸುವ ಜೊತೆಗೆ ಇಂದಿರಾ ಕ್ಯಾಟೀನ್, ಸಾಲಮನ್ನಾ, ವಿದ್ಯಾಸಿರಿ, ಶೂ ಭಾಗ್ಯ, ಪಶು ಭಾಗ್ಯ ಸೇರಿದಂತೆ ಹೊಸ 30 ಯೋಜನೆಗಳನ್ನು ಜಾರಿಗೊಳಿಸಲಾಗಿತ್ತು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಗ್ಯಾರಂಟಿಗಳ ಈಡೇರಿಕೆಗೆ 50 ಸಾವಿರ ಕೋಟಿ ರೂ.ಅಗತ್ಯ
ನಾವು ಈಗ ನೀಡಿರುವ ಗ್ಯಾರಂಟಿ ಭರವಸೆಗಳು ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸುತ್ತದೆ ಎಂದು ಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ, ರಾಜ್ಯದ ಆರ್ಥಿಕ ದಿವಾಳಿ, ರಾಜ್ಯವನ್ನು ಸಾಲಗಾರ ಮಾಡಲಾಗುವುದೆಂದು ಪ್ರಧಾನ ಮಂತ್ರಿಗಳು ಮನ್ ಕೀ ಬಾತ್ ನಲ್ಲಿ ಹೇಳಿದ್ದಾರೆ, ಗ್ಯಾರೆಂಟಿಗಳನ್ನು ಈಡೇರಿಸಲು ತಕ್ಷಣದ ಲೆಕ್ಕಾಚಾರದ ಪ್ರಕಾರ 50 ಸಾವಿರ ಕೋಟಿ ಬೇಕಾಗುತ್ತದೆ ಎಂದರು. ವಾರ್ಷಿಕವಾಗಿ ಈ ಮೊತ್ತವನ್ನು ಹೊಂದಾಣಿಕೆ ಮಾಡುವುದು ಅಸಾಧ್ಯವೇನಲ್ಲ ಎಂದು ಮುಖ್ಯಮಂತ್ರಿಗಳು ಪ್ರತಿಪಾದಿಸಿದರು.
ಕಟ್ಟುನಿಟ್ಟಾಗಿ ತೆರಿಗೆಯ ವಸೂಲಾತಿ
ನಮ್ಮ ರಾಜ್ಯದ ಆಯವ್ಯಯದ ಒಟ್ಟು ಗಾತ್ರ 3.10 ಲಕ್ಷ ಕೋಟಿ ರೂ. ಪ್ರತಿ ವರ್ಷ ಇದರ ಗಾತ್ರ ಶೇ. 10 ರಷ್ಟು ಹೆಚ್ಚುತ್ತದೆ. ಜುಲೈನಲ್ಲಿ 3,25,000 ಕೋಟಿ ರೂ. ಗಳ ಗಾತ್ರದ ಆಯವ್ಯಯ ಮಂಡಿಸಲಾಗುವುದು. ತೆರಿಗೆಯ ವಸೂಲಾತಿಯನ್ನು ಕಟ್ಟುನಿಟ್ಟಾಗಿ ಮಾಡುವ ಮೂಲಕ ಹೆಚ್ಚುವರಿಯಾಗಿ 15,000 ಕೋಟಿ ರೂ. ಸಂಗ್ರಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಈ ಸಾಲಿನ ಬಜೆಟ್ ನಲ್ಲಿ ರಾಜ್ಯಕ್ಕೆ 15ನೇ ಹಣಕಾಸು ಆಯೋಗದಿಂದ ಕೇವಲ 50 ಸಾವಿರ ಕೋಟಿ ಬರುವುದಾಗಿ ಹೇಳಲಾಗಿದೆ. ವಾಸ್ತವವಾಗಿ ಕರ್ನಾಟಕಕ್ಕೆ 1 ಲಕ್ಷ ಕೋಟಿ ರೂ.ಗಳು ಬರಬೇಕಿತ್ತು. ಕೇಂದ್ರದಿಂದ ರಾಜ್ಯಕ್ಕೆ ಬರುವ ಪಾಲನ್ನು ದೊರಕಿಸಿಕೊಳ್ಳುವಲ್ಲಿ ಹಿಂದಿನ ಸರ್ಕಾರ ಬೇಜವಾಬ್ದಾರಿತನ ತೋರಿದೆ. ಕರ್ನಾಟಕದಿಂದ ಸುಮಾರು 4 ಲಕ್ಷ ಕೋಟಿ ರೂ. ತೆರಿಗೆಸಂಗ್ರಹವಾಗುತ್ತದೆ ಎಂದು ವಿವರಿಸಿದರು.
15ನೇ ಹಣಕಾಸು ಆಯೋಗದ ಮಧ್ಯಂತರ ವರದಿಯಂತೆ ಕರ್ನಾಟಕಕ್ಕೆ 5495 ಕೋಟಿ ರೂ. ವಿಶೇಷ ಸಹಾಯಧನ ಬರಬೇಕಾಗಿತ್ತು. ಅದನ್ನು ಪಡೆದುಕೊಳ್ಳಲು ರಾಜ್ಯದ ಸಂಸದರು, ಹಿಂದಿನ ಸರ್ಕಾರ ವಿಫಲವಾಗಿದೆ ಎಂದರು.
ಆರ್ಥಿಕವಾಗಿ ದಿವಾಳಿಯಾಗದೇ ಜನರಿಗೆ ನೀಡಿರುವ ಗ್ಯಾರೆಂಟಿಗಳ ಈಡೇರಿಕೆ
ಮನ್ ಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಭಾರತದ ಮೇಲಿನ ಸಾಲ 52,11,000 ಕೋಟಿ ರೂ. ಇತ್ತು. ಈಗ ದೇಶದ ಮೇಲಿನ ಸಾಲ 155 ಲಕ್ಷ ಕೋಟಿ ರೂ.ಆಗಿದೆ. ಕಳೆದ 9 ವರ್ಷದಲ್ಲಿ 102 ಲಕ್ಷ ಕೋಟಿ ಸಾಲ ಮಾಡಲಾಗಿದೆ. 2018ರ ನಮ್ಮ ಸರ್ಕಾರದ ಅವಧಿಯವರೆಗೆ ರಾಜ್ಯದ ಮೇಲೆ 2,42,000 ಕೋಟಿ ಸಾಲ ಇತ್ತು. ನಮ್ಮ ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮಾಡಿದ ಸಾಲ 1,16,000 ಕೋಟಿ ರೂ. ಗಳಾಗಿತ್ತು. ಈಗ 2023-24ರಲ್ಲಿ ತಿಳಿಸಿರುವಂತೆ 5,64,000 ಕೋಟಿ ಸಾಲ ರಾಜ್ಯದ ಮೇಲಿದೆ. ಅಂದರೆ ಅವರ 4 ವರ್ಷದ ಅವಧಿಯಲ್ಲಿ 3,22,000 ಕೋಟಿ ಸಾಲ ಪಡೆದಿದ್ದಾರೆ. ಈ ರೀತಿಯ ಆರ್ಥಿಕ ಪರಿಸ್ಥಿತಿ ರಾಜ್ಯದಲ್ಲಿದೆ. ನಮ್ಮ ಸರ್ಕಾರ ಆರ್ಥಿಕ ದಿವಾಳಿಯಾಗಲು ಬಿಡದಂತೆ, ಜನರಿಗೆ ನೀಡಿರುವ ಗ್ಯಾರೆಂಟಿಗಳನ್ನು ಈಡೇರಿಸುತ್ತೇವೆ ಎಂದರು.
ಕಟ್ಟುನಿಟ್ಟಿನ ಕ್ರಮ
2023-24ರಲ್ಲಿ ಸಾಲದ ಮೇಲಿನ ಬಡ್ಡಿ ಹಾಗೂ ಅಸಲು ತೀರಿಸಲು 56 ಸಾವಿರ ಕೋಟಿ ರೂ.ಗಳ ಅಗತ್ಯವಿದೆ. ತೆರಿಗೆ ಸಂಗ್ರಹ, ಅನಗತ್ಯ ವೆಚ್ಚಗಳ ನಿಯಂತ್ರಣ, ಬಡ್ಡಿಯನ್ನು ಕಡಿಮೆ ಮಾಡುವುದು, ಸಾಲ ತೆಗೆದುಕೊಳ್ಳದೇ ಇರುವುದು, ಇನ್ನೂ ಹೆಚ್ಚಿನ ಕ್ರಮಗಳ ಮೂಲಕ ರಾಜ್ಯದ ಆರ್ಥಿಕ ಪರಿಸ್ಥಿತಿಗೆ ಹೊರೆಯಾಗದೆ ನೂತನ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ