Kannada NewsLatestUncategorized

*ಜಿಲ್ಲೆಯಲ್ಲಿ ಬಿತ್ತನೆ ಬೀಜ ವಿತರಣೆಗೆ ಕ್ರಮ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮುಂಗಾರು ಹಂಗಾಮಿಗೆ ಅನುಕೂಲವಾಗುವಂತೆ ಜಿಲ್ಲೆಯಲ್ಲಿ ರೈತ ಸಂಪರ್ಕ ಕೇಂದ್ರಗಳು ಸೇರಿದಂತೆ ಒಟ್ಟು 170 ಕೇಂದ್ರಗಳ ಮೂಲಕ ಬಿತ್ತನೆ ಬೀಜ ವಿತರಣೆಯನ್ನು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ.

ಮಾನ್ಯ ಮುಖ್ಯಮಂತ್ರಿಗಳ ವಿಡಿಯೋ ಸಂವಾದದ ಬಳಿಕ ಅಧಿಕಾರಿಗಳ ಸಭೆಯನ್ನು ನಡೆಸಿದ ಅವರು, ಯಾವುದೇ ಕಾರಣಕ್ಕೂ ರೈತರಿಗೆ ಅನಾನುಕೂಲ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಮುಂಗಾರು ಹಂಗಾಮಿನಲ್ಲಿ ಆಶಾದಾಯಕ ಮಳೆಯಾಗುವ ನೀರಿಕ್ಷೆಗಳಿದ್ದು, ಈ ಹಿನ್ನೆಲೆಯಲ್ಲಿ ಮುಂಗಾರು ಹಂಗಾಮಿಗೆ ಜಿಲ್ಲೆಗೆ ಅವಶ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಪೂರಕ ಪರಿಕರಗಳ ದಾಸ್ತಾನು ಮಾಡಲಾಗಿದೆ.

ಈ ಹಿನ್ನಲೆಯಲ್ಲಿ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಿಗೆ ಶಿಫಾರಸ್ಸು ಮಾಡಿದ ತಳಿಗಳನ್ನು ರಿಯಾಯತಿದರದಲ್ಲಿ ವಿತರಿಸಲು ಅಶ್ಯವಿರುವ ಪ್ರಮಾಣದಷ್ಟು ಬೀಜದ ದಾಸ್ತಾನು ಮಾಡಲಾಗಿದೆ. ಜಿಲ್ಲೆಯ 35 ರೈತ ಸಂಪರ್ಕ ಕೇಂದ್ರಗಳ ಮೂಲಕ ಹಾಗೂ 135 ಹೆಚ್ಚುವರಿ ವಿತರಣಾ ಕೇಂದ್ರಗಳ ಮೂಲಕ ಪ್ರಮುಖ ಬೆಳೆಗಳ ಬಿತ್ತನೆ ಬೀಜಗಳನ್ನು ಸಹಾಯಧನದಲ್ಲಿ ವಿತರಿಸಲಾಗುವುದು.

ಮುಂಗಾರು ಹಂಗಾಮಿಗೆ ಸದ್ಯ ಅವಶ್ಯವಿರುವ ಡಿ.ಎ.ಪಿ, ಯೂರಿಯಾ ಹಾಗು ಕಾಂಪ್ಲೆಕ್ಸ ರಸಗೊಬ್ಬರಗಳನ್ನು ದಸ್ತಾನು ಮಾಡಲಾಗಿದ್ದು ರೈತರು ವಿವೇಚನೆಯಿಂದ ಸಮತೋಲನ ರಸಗೊಬ್ಬರಗಳನ್ನು ಅಧಿಕೃತ ಮಾರಾಟಗಾರರಿಂದ ಪಿಓಎಸ್ ಮೂಲಕ ತಮ್ಮ ದಾಖಲೆಗಳನ್ನು ನೀಡಿ ಖರೀದಿಸಲು ಕೋರಲಾಗಿದೆ.

ರೈತ ಬಾಂಧವರು ಹೆಚ್ಚಿನತಾಂತ್ರಿಕ ಮಾಹಿತಿಯನ್ನು ಹತ್ತಿರದರೈತ ಸಂಪರ್ಕಕೇಂದ್ರ/ ಕೃಷಿ ವಿಜ್ಞಾನ ಕೇಂದ್ರ/ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಭೇಟಿ ನೀಡಿ ಪಡೆದುಕೊಳ್ಳಬೇಕು ಎಂದು ನಿತೇಶ್ ಪಾಟೀಲ, ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.

ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜಗಳ ಸಮರ್ಪಕವಾಗಿ ವಿತರಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದಲ್ಲದೇ ಗೊಬ್ಬರ ಹಾಗೂ ಕೀಟನಾಶಕಗಳ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದರು.

ಬೆಳೆ ಪರಿಹಾರ ವಿತರಣೆಗೆ ಕ್ರಮ:

ರಾಜ್ಯ ಸರಕಾರವು ಶೀಘ್ರದಲ್ಲೇ “ಪರಿಹಾರ ಪೋರ್ಟಲ್” ತೆರೆದು ಬೆಳೆಹಾನಿ ವಿವರ ಭರ್ತಿಗೆ ಅವಕಾಶ ಕಲ್ಪಿಸಲಿದೆ. ಆದ್ದರಿಂದ ಜಿಲ್ಲೆಯಲ್ಲಿ ಇತ್ತೀಚಿನ ಮಳೆಯಿಂದ ಉಂಟಾಗಿರುವ ಬೆಳೆಹಾನಿಗೆ ಸಂಬಂಧಿಸಿದಂತೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದರು.

ಯಾವುದೇ ಜನ-ಜಾನುವಾರುಗಳ ಪ್ರಾಣಹಾನಿ ಸಂಭವಿಸಿದಲ್ಲಿ 24 ಗಂಟೆಗಳಲ್ಲಿ ನಿಯಮಾವಳಿ ಪ್ರಕಾರ ಪರಿಹಾರವನ್ನು ಒದಗಿಸಬೇಕು ಎಂದು ಉಪ ವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರರಿಗೆ ಸೂಚನೆ ನೀಡಿದರು.

ಶಿಥಿಲ ಶಾಲಾ ಕೊಠಡಿಗಳ ಪರಿಶೀಲನೆಗೆ ಸೂಚನೆ:

ಮಳೆಗಾಲ ಆರಂಭಗೊಳ್ಳುತ್ತಿರುವುದರಿಂದ ಜಿಲ್ಲೆಯಲ್ಲಿ ಶಿಥಿಲ ಗೊಂಡಿರುವ ಶಾಲಾ ಕೊಠಡಿಗಳನ್ನು ಪರಿಶೀಲಿಸಬೇಕು. ಒಂದು ವೇಳೆ ಶಿಥಿಲಗೊಂಡಿರುವ ಕಟ್ಟಡಗಳಿದ್ದರೆ ಅವುಗಳ ದುರಸ್ತಿ ಮಾಡಬೇಕು ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬೆಳಗಾವಿ ನಗರದಲ್ಲಿ ಮಳೆಗಾಲದಲ್ಲಿ ಪ್ರಮುಖ ರಸ್ತೆಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಕಸ ತೆಗೆದು ಸ್ವಚ್ಛತೆ ಮಾಡಬೇಕು.
ಶಿಥಿಲಗೊಂಡಿರುವ ಸೇತುವೆ, ರಸ್ತೆಗಳ ದುರಸ್ತಿ ಮಾಡಬೇಕು. ಯಾವುದೇ ರೀತಿಯ ಅನಾಹುತ ಆಗದಂತೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಅಪಾಯದ ಮಟ್ಟ ತಲುಪುವ ಕೆರೆಕಟ್ಟೆಗಳ ಮೇಲೆ ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಅಧಿಕಾರಿಗಳಿಗೆ ಹೇಳಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್ ಉಪಸ್ಥಿತರಿದ್ದರು. ಉಪ ವಿಭಾಗಾಧಿಕಾರಿ ಬಲರಾಮ್ ಚವಾಣ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ, ಮಹಾನಗರ ಪಾಲಿಕೆ ಆಯುಕ್ತರಾದ ಡಾ.ರುದ್ರೇಶ್ ಘಾಳಿ ಸೇರಿದಂತೆ ಕೃಷಿ, ತೋಟಗಾರಿಕೆ, ನೀರಾವರಿ, ಆಹಾರ, ಆರೋಗ್ಯ, ಪಶುಪಾಲನೆ, ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

https://pragati.taskdun.com/siddaramaiahpressmeetpre-monsoon-rains52-death/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button