Latest

*ಜಿಲ್ಲಾಧಿಕಾರಿಗಳು, ಸಿಇಒಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಖಡಕ್ ಸೂಚನೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹಿಂದಿನ ಸರಕಾರದ ಅವಧಿಯಲ್ಲಿ ನಿಮ್ಮ ಕೆಲಸ ವೈಖರಿ ಸರಿ ಇರಲಿಲ್ಲ. ರಾಜ್ಯದ ಜನ ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಮಳೆ, ಪ್ರವಾಹದಿಂದ ಸಾಕಷ್ಟು ಬೆಳೆ ನಷ್ಟವಾಗಿದೆ. ಹಲವಾರು ಮಂದಿ ಪ್ರಾಣ ಕಳೆದುಕೊಂಡರು. ಮನೆ ಮಠ ಇಲ್ಲದೇ ನಿರ್ಗತಿಕರಾದರು. ಆದರೆ ನಿಮ್ಮಲ್ಲಿ ಸಾಕಷ್ಟು ಮಂದಿ ಈ ಅನಾಹುತ ಸಂದರ್ಭದಲ್ಲಿ ಸರಿಯಾಗಿ ಸ್ಪಂದಿಸಲಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ವಿಡಿಯೋ ಸಂವಾದದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಸರಕಾರಕ್ಕೆ ಉತ್ತಮ ಹೆಸರು ತರುವುದು, ಬಿಡುವುದು ನಿಮ್ಮ ಕೈಯಲ್ಲೇ ಇದೆ. ನೀವು ಸರಿಯಾಗಿ ಕೆಲಸ ಮಾಡಿದರೆ ಸರಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ನಮ್ಮ ಸರಕಾರ ನಿಮ್ಮಿಂದ ಉತ್ತಮ ಕೆಲಸ ಬಯಸುತ್ತದೆ. ಸರಿಯಾಗಿ ಕೆಲಸ ಮಾಡದಿದ್ದರೆ ನಾವು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ನಾವು ಕಠಿಣ ಕ್ರಮ ತೆಗೆದುಕೊಳ್ಳಲು ಅವಕಾಶ ಕೊಡಬೇಡಿ. ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ. ರೈತರಿಗೆ ಅಗತ್ಯ ವಸ್ತುಗಳು ಪೂರೈಕೆ ಆಗುವಂತೆ ನೋಡಿಕೊಳ್ಳಿ. ಸಂಬಂಧ ಪಟ್ಟ ಇಲಾಖೆಗಳಲ್ಲಿ ಶೋಷಣೆ ಆಗದಂತೆ ನೋಡಿಕೊಳ್ಳಿ. ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಮಾರೋಪಾದಿಯಲ್ಲಿ ಕೆಲಸ ಮಾಡಿ. ಸರಕಾರಕ್ಕೆ ಉತ್ತಮ ಹೆಸರು ಬರುವಂತೆ ಕೆಲಸ ಮಾಡಿ ಎಂದು ಸೂಚಿಸಿದರು.

ರಾಜ್ಯ ಆಡಳಿತದಲ್ಲಿ ನಿಮ್ಮ ಸೇವೆಯ ತೂಕವೇ ಹೆಚ್ಚು. ನಿಮ್ಮ ಸೇವೆ ಅಮೂಲ್ಯ. ಆದರೆ ಕಳೆದ ಮೂರುವರೆ ವರ್ಷದ ಡಬಲ್ ಎಂಜಿನ್ ಸರಕಾರದ ಆಳ್ವಿಕೆಯಲ್ಲಿ ಉತ್ತಮ ಆಡಳಿತ ಎಂಬುದು ಮಾಯವಾಗಿ, ಭ್ರಷ್ಟಾಚಾರದ ರಾಜಧಾನಿ ಎಂಬ ಕಳಂಕ ಬಂದಿದೆ.

ದೇಶ ಮಾತ್ರವಲ್ಲ. ಇಡೀ ಜಗತ್ತು ಬೆಂಗಳೂರು ಮೂಲಕ ಭಾರತವನ್ನು ನೋಡುತ್ತಿದೆ. ಅನ್ಯ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ಸಂಪನ್ಮೂಲ, ಪ್ರತಿಭೆ, ಆಳ್ವಿಕೆ ಮಾದರಿ ಆದದ್ದು. ದೇವರಾಜ ಅರಸು, ವೀರೇಂದ್ರ ಪಾಟೀಲರ ಕಾಲದಿಂದ ಸಿದ್ದರಾಮಯ್ಯನವರ ಸರಕಾರದ ಅವಧಿವರೆಗೂ ಕರ್ನಾಟಕದ ಆಡಳಿತ ಯಾರೊಬ್ಬರೂ ಬೆರಳು ತೋರಿಸದಷ್ಟು ಉತ್ತಮವಾಗಿತ್ತು.

ರಾಜಕೀಯ ದ್ವೇಷದಿಂದ ನನ್ನ ಮೇಲೆ ಸಿಬಿಐ ಸೇರಿದಂತೆ ತನಿಖಾ ಸಂಸ್ಥೆಗಳನ್ನು ಪ್ರಯೋಗ ಮಾಡಲಾಗಿದೆ. ಚುನಾವಣೆ ಸಮಯದವರೆಗೂ ಈ ಕಾಟ ತಪ್ಪಲಿಲ್ಲ. ಆದರೆ ಜನ ನಮ್ಮ ಪರ ನಿಂತಿದ್ದಾರೆ.

ಡಬಲ್ ಇಂಜಿನ್ ಸರಕಾರ ಇದ್ದರೂ, 26 ಬಿಜೆಪಿ ಎಂಪಿಗಳು ಇದ್ದರೂ, ರಾಜ್ಯದವರೇ ಕೇಂದ್ರದಲ್ಲಿ ಹಣಕಾಸು ಸಚಿವರಾಗಿದ್ದರೂ ನಮಗೆ ಅನ್ಯಾಯವಾಗಿದೆ. ಆಡಳಿತ ವಿಫಲವಾಗಿದೆ. ಕೇಂದ್ರ ಸರಕಾರ ಏನೆಲ್ಲ ಪ್ರಯೋಗ ಮಾಡಿದರೂ ಜನ ನಮ್ಮ ಮೇಲೆ ಪ್ರೀತಿ, ವಿಶ್ವಾಸ ಇಟ್ಟಿದ್ದಾರೆ.

ಇದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ನಾವು ಉತ್ತಮ ಆಡಳಿತ, ಸರಕಾರ ನೀಡಲು ಬದ್ಧರಾಗಿದ್ದೇವೆ. ಅದರಲ್ಲಿ ನಿಮ್ಮ ಪಾಲೂ ಇದೆ.

ರಾಜ್ಯಕ್ಕೆ ಅಂಟಿರುವ ಕಳಂಕವನ್ನು ತೊಳೆದು ಹಾಕಲು ನೀವು ನಮ್ಮ ಜತೆ ಕೈ ಜೋಡಿಸಬೇಕು. ರಾಜ್ಯದಲ್ಲಿ ಬದಲಾವಣೆ ಕಾಣುವಂತಹ ಆಳ್ವಿಕೆ ನೀಡಬೇಕು. ನಿಮ್ಮಿಂದ ಪಾಸಿಟಿವ್ ಸಂದೇಶ ತಾಲೂಕು, ಗ್ರಾಮ ಮಟ್ಟದವರೆಗೂ ಹೋಗಬೇಕು.

ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಸತ್ತವರಿಗೆ ಪರಿಹಾರ ಕೊಡುವ, ಅವರ ಕುಟುಂಬದವರಿಗೆ ಸಾಂತ್ವನ ಹೇಳುವ ಸೌಜನ್ಯವನ್ನು ಅಧಿಕಾರಿಗಳು ತೋರಲಿಲ್ಲ. ಈ ವರ್ತನೆ ಅಕ್ಷಮ್ಯ. ಮಾನವೀಯತೆ ಬಹಳ ಮುಖ್ಯ. ಅದನ್ನು ಇಟ್ಟುಕೊಂಡೇ ಜನರ ಸೇವೆ ಮಾಡಬೇಕು ಎಂದು ಹೇಳಿದರು.

https://pragati.taskdun.com/siddaramaiahpressmeetpre-monsoon-rains52-death/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button