ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಬೆಳಗಾವಿ ಪಣಜಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಮತ್ತು ಪಟ್ಟಣದಿಂದ 8 ಕಿಮೀ
ದೂರದ ತಾಲ್ಲೂಕಿನ ಸಾವರಗಾಳಿ ಗ್ರಾಮದ ಹೊರವಲಯದ ತಮ್ಮ ಕೃಷಿ ಜಮೀನುಗಳತ್ತ
ತೆರಳುತ್ತಿದ್ದ ಕೆಲ ರೈತರಿಗೆ ಬುಧವಾರ ಹಾಡಹಗಲಿನಲ್ಲೇ ಜೋಡಿ ಹುಲಿಗಳ
ದರ್ಶನವಾಗಿದ್ದು, ಹುಲಿಗಳು ತಮ್ಮೂರಿನ ಹತ್ತಿರ ಕಾಣಿಸಿರುವ ಸಂಗತಿ ಸಾವರಗಾಳಿ ಮತ್ತು
ಅಕ್ಕಪಕ್ಕದ ಗ್ರಾಮಗಳ ನಾಗರಿಕರಲ್ಲಿ ಆತಂಕ ಮೂಡಿಸಿದೆ.
ಹುಲಿಗಳು ಕಾಣಿಸಿಕೊಂಡಿರುವ ವಿಷಯವನ್ನು ಖಚಿತಪಡಿಸಿರುವ ಸಾವರಗಾಳಿ ಗ್ರಾಮದ ಕೃಷಿಕ
ಮತ್ತು ಜೋಡಿಹುಲಿಗಳ ಪ್ರತ್ಯಕ್ಷದರ್ಶಿ ನಾರಾಯಣ ಕಾಪೋಲಕರ, “ನಮ್ಮ ಗ್ರಾಮದ ಪೂರ್ವ
ದಿಕ್ಕಿನಲ್ಲಿರುವ ಆನಂದಗಡ ಅರಣ್ಯದಿಂದ ಎರಡು ಮಧ್ಯವಯಸ್ಕ ಹುಲಿಗಳು ಕಾಲುದಾರಿಯ ಮೂಲಕ
ಸಾವರಗಾಳಿ ಗ್ರಾಮದ ಸುತ್ತಮುತ್ತಲಿನ ಕೃಷಿ ಜಮೀನುಗಳಲ್ಲಿ ಸಂಚರಿಸಿ ಬಳಿಕ ಪಶ್ಚಿಮ
ದಿಕ್ಕಿನತ್ತ ಸಾಗಿ ಅರಣ್ಯದಲ್ಲಿ ಮರೆಯಾಗಿವೆ. ಜಾನುವಾರುಗಳಿಗೆ ಮೇವು ತರುವ ಸಲುವಾಗಿ
ನಾನು ಬುಧವಾರ ಸಂಜೆ ನಮ್ಮ ಹೊಲಕ್ಕೆ ಹೊರಟಿದ್ದ ಸಂದರ್ಭದಲ್ಲಿ ನನ್ನ ಎದುರಿನಲ್ಲಿ
ಕೇವಲ 100 ಮೀಟರ್ ಅಂತರದಲ್ಲಿ ಕಾಲುದಾರಿಯ ಪಕ್ಕ ಎರಡೂ ಹುಲಿಗಳು ನಿಂತಿದ್ದವು. ನಾನು
ಹುಲಿಗಳನ್ನು ನೋಡಿ ಗಾಬರಿಯಿಂದ ನನ್ನ ವಾಹನದ ವೇಗವನ್ನು ಕಡಿಮೆ ಮಾಡಿದಾಗ ನನ್ನ ವಾಹನದ
ಸದ್ದು ಆಲಿಸಿದ ಅವು ಹೊಲದಲ್ಲಿ ಜಿಗಿದು ಮರೆಯಾದವು” ಎಂದು ತಿಳಿಸಿದ್ದಾರೆ.
ಜೋಡಿ ಹುಲಿಗಳ ದರ್ಶನದ ಕುರಿತು ಮಾಹಿತಿ ನೀಡಿದ ನಿವೃತ್ತ ಅರಣ್ಯಾಧಿಕಾರಿ ಎಂ.ಜಿ
ಬೆನಕಟ್ಟಿ, “ತಜ್ಞರ ಪ್ರಕಾರ ಸಧ್ಯದ ಹವಾಮಾನ ಗಂಡು ಮತ್ತು ಹೆಣ್ಣು ಹುಲಿಗಳ ಮಿಲನಕ್ಕೆ
ಪೂರಕವಾಗಿದ್ದು, ಸಾಮಾನ್ಯವಾಗಿ ಒಂಟಿಯಾಗಿ ಜೀವಿಸುವುದನ್ನು ಇಷ್ಟಪಡುವ ಹುಲಿ ಈ
ವಾತಾವರಣದಲ್ಲಿ ಸಂಗಾತಿಯನ್ನು ಹುಡುಕುತ್ತ ಸಾಗುವುದು ಪ್ರಕೃತಿ ಸಹಜ ಕ್ರಿಯೆಯಾಗಿದೆ.
ಹೀಗಾಗಿ ಎರಡೂ ಹುಲಿಗಳು ಒಟ್ಟಿಗೆ ಕಾಣಿಸುವ ಮತ್ತು ಒಟ್ಟಾಗಿ ಸಾಗುವ ಅಪರೂಪದ
ದೃಶ್ಯವನ್ನು ಸಾವರಗಾಳಿ ಗ್ರಾಮದ ರೈತರು ಗಮನಿಸಿರಬಹುದು. ಸಾಮಾನ್ಯವಾಗಿ ಜೋಡಿ
ಹುಲಿಗಳು ಯಾರಿಗೂ ತೊಂದರೆ ಮಾಡುವುದಿಲ್ಲ. ಆದರೆ ಯಾರಾದರೂ ಅವುಗಳಿಗೆ ತೊಂದರೆ ಮಾಡಲು
ಪ್ರಯತ್ನಿಸಿದರೆ ಅವು ತಮ್ಮ ಜೀವ ರಕ್ಷಣೆಗಾಗಿ ಮರುದಾಳಿ ಮಾಡಬಹುದು” ಎಂದು
ವಿಶ್ಲೇಷಿಸಿದ್ದಾರೆ.
ಆದರೆ ಸಾವರಗಾಳಿ ಮತ್ತು ಅಕ್ಕಪಕ್ಕದ ಗ್ರಾಮಗಳಲ್ಲಿ ನಡೆದಿರುವ ಚರ್ಚೆಯ ಪ್ರಕಾರ,
ತಾಲ್ಲೂಕಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆಯ ವಾತಾವರಣ ಇರುವ ಕಾರಣ ಸಧ್ಯ
ಕೃಷಿ ಜಮೀನುಗಳಲ್ಲಿ ಭತ್ತದ ಬಿತ್ತನೆಗಾಗಿ ರೈತರು ತಮ್ಮ ಜಮೀನು ಹದಗೊಳಿಸುವ
ಕೆಲಸದಲ್ಲಿ ನಿರತರಾಗಿದ್ದಾರೆ. ಈ ಸಂದರ್ಭದಲ್ಲಿ ಹುಲಿಗಳು ಗೋಚರಿಸಿದ್ದು ಆತಂಕಕ್ಕೆ
ಕಾರಣವಾಗಿದೆ ಎನ್ನಲಾಗುತ್ತಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಈ ಕುರಿತು ಹೆಚ್ಚಿನ ಮಾಹಿತಿ ನೀಡಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ