Latest

ನೂತನ ಸಂಸತ್ ಭವನ ಉದ್ಘಾಟಿಸಿದ ಪ್ರಧಾನಿ ಮೋದಿ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಭವ್ಯವಾಗಿ ನಿರ್ಮಿಸಿರುವ ನೂತನ ಸಂಸತ್ ಭವನವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಲೋಕಾರ್ಪಣೆಗೊಳಿಸಿದರು.

ಬೆಳಗ್ಗೆ 7.15 ಕ್ಕೆ ಸಾಂಪ್ರದಾಯಿಕ ಬಿಳಿ ಉಡುಗೆಯಲ್ಲಿ ಪ್ರಧಾನಿ ಮೋದಿ ಅವರು ಗೇಟ್ ನಂ.1 ರಿಂದ ಸಂಸತ್ ಆವರಣಕ್ಕೆ ಆಗಮಿಸಿದರು. ಅವರನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸ್ವಾಗತಿಸಿದರು. ನಂತರ ಗಾಂಧೀಜಿ ಪ್ರತಿಮೆ ಪಕ್ಕದಲ್ಲಿ ನಡೆದ ಗಣಪತಿ ಹೋಮ ಮತ್ತಿತರ ಧಾರ್ಮಿಕ ಕಾರ್ಯಗಳಲ್ಲಿ ಅವರು ಪಾಲ್ಗೊಂಡರು. ವೇದಘೋಷಗಳನ್ನು ಪಠಿಸಲು ಕರ್ನಾಟಕದ ಶ್ರೀಕ್ಷೇತ್ರ ಶೃಂಗೇರಿ ಮಠದ ಪುರೋಹಿತರನ್ನು ಕರೆಸಿದ್ದು ವಿಶೇಷವಾಗಿತ್ತು.

ದೇಶಾದ್ಯಂತ ಭಾರೀ ಚರ್ಜಚೆಗೆ ಕಾರಣವಾದ ದಂಡವಾದ ‘ಸೆಂಗೋಲ್​’ ಅನ್ನು ತಮಿಳುನಾಡಿನ ವಿವಿಧ ಅಧೀನಂಗಳು ಪ್ರಧಾನಿ ಮೋದಿ ಅವರಿಗೆ ಹಸ್ತಾಂತರಿಸಿದರು. ಪೂಜ್ಯರ ಆಶೀರ್ವಾದ ಪಡೆದ ಪ್ರಧಾನಿಗಳು, ಸೆಂಗೋಲ್ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿದರು. ನಂತರ ನಾದಸ್ವರ ಮತ್ತು ವೇದ ಮಂತ್ರಗಳ ಪಠಣಗಳ ನಡುವೆ ಮೆರವಣಿಗೆಯಲ್ಲಿ ಮೋದಿ ಅವರು ಹೊಸ ಸಂಸತ್ ಭವನಕ್ಕೆ ಸೆಂಗೋಲ್ ಹಿಡಿದು ಪ್ರವೇಶಿಸಿದರು.

ಲೋಕಸಭೆಯ ಸಭಾಂಗಣದಲ್ಲಿ ಸ್ಪೀಕರ್ ಆಸನದ ಬಲಭಾಗದ ವಿಶೇಷ ಆವರಣದಲ್ಲಿ ರಾಜದಂಡವನ್ನು ಸ್ಪೀಕರ್​ ಓಂ ಬಿರ್ಲಾ ಅವರೊಂದಿಗೆ ತೆರಳಿ ಅಲ್ಲಿ ಪ್ರತಿಷ್ಠಾಪಿಸಿದರು. ನಂತರ ಜ್ಯೋತಿ ಬೆಳಗಿಸಿ ನೂತನ ಸಂಸತ್​ ಭವನದ ಉದ್ಘಾಟನೆಗೆ ಅಧಿಕೃತ ಚಾಲನೆ ನೀಡಿದರು.

ಸಂಸತ್ ಭವನ ಉದ್ಘಾಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಭವನ ನಿರ್ಮಾಣದಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.

ನಂತರ ಮೋದಿಯವರ ಉಪಸ್ಥಿತಿಯಲ್ಲಿ ಸಂಸತ್​ನ ಲಾಬಿಯಲ್ಲಿ ಏರ್ಪಡಿಸಲಾಗಿದ್ದ ಸರ್ವಧರ್ಮ ಸಮ್ಮಿಲನ ಕಾರ್ಯಕ್ರಮದಲ್ಲಿ ಸರ್ವಧರ್ಮಗಳ ಮುಖಂಡರು ಪ್ರಾರ್ಥನೆ ಸಲ್ಲಿಸಿದರು. ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ಎಸ್. ಜೈಶಂಕರ್ ಮತ್ತು ಜಿತೇಂದ್ರ ಸಿಂಗ್, ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

https://pragati.taskdun.com/project-exhibition-2023-at-kls-git/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button