Latest

ಅಧಿಕಾರಿಗಳಿಗೆ ಕೇಂದ್ರದಿಂದ ರಾಜ್ಯದ ನೀರಾವರಿ ಯೋಜನೆಗಳಿಗೆ ಅನುಮತಿ ತರುವ ಗುರಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: “ಕೇಂದ್ರದಿಂದ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಅನುಮತಿ ತರುವುದೇ ನಾನು ನಿಮಗೆ ನೀಡುತ್ತಿರುವ ಗುರಿ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜ್ಯದ ಅಧಿಕಾರಿಗಳಿಗೆ ಹೇಳಿದ್ದಾರೆ.

 ವಿಕಾಸಸೌಧದಲ್ಲಿ ಜಲ ಸಂಪನ್ಮೂಲ ಇಲಾಖೆ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು, ಮೇಕೆದಾಟು, ಮಹದಾಯಿ ಯೋಜನೆಗಳನ್ನು ಆದ್ಯತೆ ಮೇರೆಗೆ ಅನುಷ್ಠಾನಕ್ಕೆ ತರಬೇಕು. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಿ ಎಂದು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

“ಜಲವಿವಾದ ಪರಿಹಾರ, ಬಾಕಿ ಯೋಜನೆಗಳ ಪೂರ್ಣ, ನೀರಾವರಿ ಯೋಜನೆಗಳಿಗೆ ಸಂಪನ್ಮೂಲ ಕ್ರೋಡೀಕರಣ, ಕೇಂದ್ರದಿಂದ ಅನುದಾನ ತರುವುದು, ಉದ್ಯೋಗ ಸೃಷ್ಟಿಗೆ ಒತ್ತು ಕೊಡಬೇಕು. ನೀರಾವರಿ ಯೋಜನೆಗಳಿಗೆ 5 ವರ್ಷದಲ್ಲಿ 2 ಲಕ್ಷ ಕೋಟಿ ರು ವಿನಿಯೋಗಿಸುತ್ತೇವೆ ಎಂದು ಮಾತು ಕೊಟ್ಟಿದ್ದೇವೆ. ಸರಕಾರ, ಸಂಸ್ಥೆಗಳು, ಕೇಂದ್ರದ ಅನುದಾನದ ಮೂಲಕ ಸಂಪನ್ಮೂಲ ಒಟ್ಟುಗೂಡಿಸಬೇಕು. ಕೇಂದ್ರ ಸಚಿವ ಶೇಖಾವತ್ ಉತ್ತಮ ವ್ಯಕ್ತಿ. ರಾಜ್ಯದ ಕೆಲಸಗಳಿಗೆ ಅವರ ಸಹಕಾರ ಪಡೆಯೋಣ. ಬಾಕಿ ಯೋಜನೆಗಳಿಗೆ ಭೂಸ್ವಾಧೀನ ತ್ವರಿತಗತಿಯಲ್ಲಿ ಮಾಡಿ” ಎಂದು ಅಧಿಕಾರಿಗಳಿಗೆ ತಿಳಿಸಿದರು.

“ಗುಣಮಟ್ಟದಲ್ಲಿ ರಾಜಿ ಇಲ್ಲ. ಮೇಕೆದಾಟು ಯೋಜನೆಗೆ ಮೀಸಲಿಟ್ಟ 1000 ಕೋಟಿ ರೂ. ಅನುದಾನವನ್ನು ಭೂಸ್ವಾಧೀನದಂತಹ ಪೂರ್ವಸಿದ್ಧತೆ ಕೆಲಸಗಳಿಗೆ ಬಳಸಬಹುದಿತ್ತು. ಅದನ್ನು ಮಾಡಿಲ್ ಎಂದಾದರೆ ಹಣ ಇಟ್ಟಿದ್ದಾದರೂ ಏಕೆ? ಬರೀ ಎಲ್ಒಸಿ, ಟೆಂಡರ್, ಗುತ್ತಿಗೆ ಹಂಚಿಕೆ, ಬಿಲ್ ಮಾಡುವ ಕೆಲಸಕ್ಕೆ ನಿಮ್ಮ ಶ್ರಮ ವಿನಿಯೋಗ ಆಗಬಾರದು” ಎಂದರು.

“ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ. ನಿಷ್ಠೆ, ಪ್ರಾಮಾಣಿಕತೆಗೆ ಮಾತ್ರ ಪ್ರೋತ್ಸಾಹ. ಜಾತಿಯತೆ ಬೇಡ. ಮಾನವೀಯತೆ ಇರಲಿ. ನನಗೆ ಯಾವುದೇ ದ್ವೇಷ ಇಲ್ಲ. ಕೆಲಸ ಆಗಬೇಕು ಅಷ್ಟೇ. ನೀವು ಸರಕಾರಕ್ಕೆ ನಿಷ್ಠಾರಾಗಿರಬೇಕೆ ಹೊರತು ನಿಮಗೆ ಪೋಸ್ಟಿಂಗ್ ಕೊಟ್ಟವರಿಗಲ್ಲ. ಅಂಥವರನ್ನು ಸಹಿಸೋದಿಲ್ಲ. ನನಗೂ 33 ವರ್ಷ ಅನುಭವ ಇದೆ. ನಿಮ್ಮ ಕೈಯಲ್ಲಿ ಮಾಡಬಾರದ್ದು ಮಾಡಿಸಲ್ಲ. ದಾರಿ ತಪ್ಪಬೇಡಿ. ಎಚ್ಚರಿಕೆಯಿಂದ ಕೆಲಸ ಮಾಡಿ. ಬದಲಾವಣೆ ತನ್ನಿ” ಎಂದರು.

“ದೆಹಲಿಯಿಂದ ಯೋಜನೆಗಳನ್ನು ತರಬೇಕು. ನೆರೆಯ ತಮಿಳುನಾಡು, ಆಂಧ್ರ, ಮಹಾರಾಷ್ಟ್ರಕ್ಕೆ ಎಷ್ಟು ಯೋಜನೆಗಳು ಬಂದಿವೆ, ನಮ್ಮ ರಾಜ್ಯಕ್ಕೆ ಎಷ್ಟು ಬಂದಿವೆ ಎಂದು ನೀವೇ ಹೋಲಿಕೆ ಮಾಡಿಕೊಳ್ಳಿ. ನೀವು ಎಷ್ಟು ಚೆನ್ನಾಗಿ ಕೆಲಸ ಮಾಡಿದ್ದೀರಿ ಎಂದು ಗೊತ್ತಾಗುತ್ತದೆ. ಕರ್ನಾಟಕಕ್ಕೆ ಬಹಳ ಅನ್ಯಾಯವಾಗಿದೆ. ನಾವು ಕರ್ನಾಟಕದ ಎಂಪಿಗಳ ಜತೆ ಸಭೆ ಮಾಡಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳೋಣ. ಪ್ರಧಾನಿಗಳು, ಕೇಂದ್ರದ ಜಲ ಸಂಪನ್ಮೂಲ ಸಚಿವರು ಸೇರಿದಂತೆ ಅಗತ್ಯ ಇರುವ ಎಲ್ಲರನ್ನೂ ಭೇಟಿ ಮಾಡೋಣ. ಕೇಂದ್ರದಿಂದ ಯೋಜನೆಗಳನ್ನು ತರುವ ಗುರಿಯನ್ನು ನಿಮಗೆ ನೀಡುತಿದ್ದೇನೆ. ಕೇಂದ್ರಕ್ಕೆ ಮನವರಿಕೆ ಮಾಡಿ, ಯೋಜನೆ ತರುವುದೇ ನಿಮ್ಮ ಕೆಲಸ. ಕೆಲಸ ಮಾಡಿದರೆ ನೀವು ಇಲ್ಲಿರುತ್ತೀರಿ. ಇಲ್ಲದಿದ್ದರೆ ನಿಮ್ಮ ಜಾಗದಲ್ಲಿ ಬೇರೆಯವರು ಇರುತ್ತಾರೆ” ಎಂದು ಎಚ್ಚರಿಕೆ ನೀಡಿದರು.

“ನಾನು ಇಲಾಖೆ ವಹಿಸಿಕೊಂಡ ಏನೇನು ಕೆಲಸ ಮಾಡಿದ್ದೀರಿ ಎಂಬ ಬಗ್ಗೆ ಕಾಲ ಕಾಲಕ್ಕೆ ವರದಿ ಕೊಡಬೇಕು. ಯಾವ, ಯಾವ ಯೋಜನೆಗಳು ಯಾವ ಹಂತದಲ್ಲಿವೆ ಎಂಬ ಬಗ್ಗೆ ವಿಡಿಯೋ, ಫೋಟೋ ದಾಖಲೆ ಒದಗಿಸಬೇಕು. ಯೋಜನೆಗಳು ಕುಂಠಿತಗೊಳ್ಳಲು ಕಾರಣಗಳನ್ನು ಸಾಕ್ಷಿ ಸಮೇತ ನೀಡಬೇಕು. ಕತೆ, ಕಟ್ಟು ಕತೆ ಕೇಳುವುದಿಲ್ಲ. ನಾನು ಈ ಖಾತೆಯಿಂದ ಇಳಿದ ನಂತರ ಕಣ್ಣಿಗೆ ಕಾಣುವ ಯಾವುದೇ ಕೆಲಸ ಆಗಿಲ್ಲ. ಮೂರು ವರ್ಷದ ಹಿಂದೆ ಇದ್ದಂತೆಯೇ ಇದೆ. ನಾನು ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇನೆ ಎನ್ನುವುದಕ್ಕಿಂತ ಎಷ್ಟು ಕೆಲಸ ಮಾಡಿದೆ ಎಂಬುದೇ ಮುಖ್ಯವಾಗಬೇಕು. ನೀವು ಯಾವುದೇ ಯೋಜನೆ ಮಾಡಿದರೂ ರೈತರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ. ಪ್ರತಿ ಹನಿ ನೀರು ರೈತರ, ಜನರ ಹಿತಕ್ಕೆ ಬಳಕೆ ಆಗಬೇಕು. ಪೋಲಾಗಬಾರದು” ಎಂದರು.

“ಎಲ್ಲೆಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡಬಹುದು ಎಂಬುದರ ಬಗ್ಗೆ ತ್ವರಿತಗತಿಯಲ್ಲಿ ನೀಲನಕ್ಷೆ ತಯಾರು ಮಾಡಿ. ಕೆಆರ್ ಎಸ್, ಮಂಚನಬೆಲೆ, ತಿಪ್ಪಗೊಂಡನಹಳ್ಳಿ, ಹೇಮಾವತಿ ಜಲಾಶಯ ಸೇರಿದಂತೆ ಈಗಾಗಲೇ ಸಿದ್ದವಾಗಿರುವ ಉದ್ಯಾನವನ, ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ತುರ್ತು ಕ್ರಮ ತೆಗೆದುಕೊಳ್ಳಿ ಎಂದು ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

ಜಲ ಸಂಪನ್ಮೂಲ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಕಾರ್ಯದರ್ಶಿ ಕೃಷ್ಣಮೂರ್ತಿ ಕುಲಕರ್ಣಿ, ಕರ್ನಾಟಕ ನೀರಾವರಿ ನಿಗಮದ ಎಂಡಿ ಮಲ್ಲಿಕಾರ್ಜುನ್ ಗುಂಗೆ, ಕೃಷ್ಣ ಭಾಗ್ಯ ಜಲ ನಿಗಮದ ಎಂಡಿ ಶಿವಕುಮಾರ್, ವಿಶ್ವೇಶ್ವರಯ್ಯ ಜಲ ನಿಗಮ ಎಂಡಿ ಕುಲಕರ್ಣಿ, ಕಾವೇರಿ ನೀರಾವರಿ ನಿಗಮದ ಎಂಡಿ ಶಂಕರೇಗೌಡ ಮತ್ತಿತರರಿದ್ದರು.

https://pragati.taskdun.com/new-government-ready-to-face-any-investigation-ex-cm-bommai/
https://pragati.taskdun.com/heavy-rain-dcm-dk-shivakumar-instructs-corporation-officials-to-be-vigilant/
https://pragati.taskdun.com/fighter-aircraft-in-nippani-the-result-of-the-efforts-of-jolle-couple/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button