ಬೇಂದ್ರೆ ರಾಜರತ್ನಂ ಸಹಿತ ಅಂದಿನ ಎಲ್ಲ ಸಾಹಿತಿಗಳಿಗೆ ‘ಅಣ್ಣ ಮಾಸ್ತಿ’ ಯಾಗಿ, ‘ಸಣ್ಣ ಕತೆಗಳ ಶ್ರೀನಿವಾಸ’ನಾಗಿ, ಕನ್ನಡದ ಆಸ್ತಿಯಾಗಿ , ಕನ್ನಡಕ್ಕೆ ನಾಲ್ಕನೇ ಜ್ಞಾನ ಪೀಠ ಪ್ರಶಸ್ತಿ ತಂದುಕೊಟ್ಟ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರದೊಂದು
ಅದ್ಭುತ ಜೀವನ!
ಮಾಸ್ತಿಯವರು ಹುಟ್ಟಿದ್ದು 1891ರ ಜೂ.6ರಂದು. ನಿಧನರಾದದ್ದು 1986ರ ಜೂನ್ 6 ರಂದು. ಕೋಲಾರ ಜಿಲ್ಲೆ ಮಾಲೂರು ಹೊಂಗೇನಹಳ್ಳಿ ಜನ್ಮಸ್ಥಳ. ಮೂಲತಃ ತೆಲುಗಿನ ಪೆರಿಯಾರ್ ಮನೆತನ. ಪೆರಿಯಾರ್ ಎಂದರೆ ದೊಡ್ಡ ಮನೆ.
ಮಾಸ್ತಿಯವರು ಹುಟ್ಟುವ ಕಾಲಕ್ಕೆ ಅದು ಎಲ್ಲಾ ಸಂಪತ್ತು ಕಳೆದುಕೊಂಡು ‘ಸಣ್ಣಮನೆ’ಯಾಗಿಬಿಟ್ಟಿತ್ತು. ಬಡತನದಲ್ಲಿ ಸಿಲುಕಿದ ಸಂಸಾರದಲ್ಲಿ ಮಾಸ್ತಿ ವಾರಾನ್ನ ಮಾಡಿ ಕಲಿಯಬೇಕಾಯಿತು. ಆದರೆ ಎಂ. ಎ. ಪದವಿ ತನಕವೂ ಮಾಸ್ತಿಯವರು ಯಾವ ಕ್ಲಾಸಿನಲ್ಲೂ ಯಾವ ಪರೀಕ್ಷೆಯಲ್ಲೂ ಪ್ರಥಮ ಸ್ಥಾನ ಬೇರೆಯವರಿಗೆ ಬಿಟ್ಟುಕೊಟ್ಟವರೇ ಅಲ್ಲ. ಅಂತಹ ಪ್ರತಿಭಾನ್ವಿತ ವಿದ್ಯಾರ್ಥಿ.
ಮದ್ರಾಸ್ ವಿ.ವಿ. ಯಲ್ಲಿ ಎಂಎ. ಮಾಡಿದ ನಂತರ ಸಿವಿಲ್ ಪರೀಕ್ಷೆಗೆ ಕುಳಿತ ಮಾಸ್ತಿಯವರು ಅಲ್ಲೂ ಪ್ರಥಮರಾಗಿ ಅಸ್ತಿ. ಕಮಿಷನರ್ ಹುದ್ದೆ ಅಲಂಕರಿಸಿ , ಕೊನೆಗೆ ಜಿಲ್ಲಾಧಿಕಾರಿಗಳಾಗಿ ನಿವೃತ್ತರಾದರು. ಇದು ಅವರ ಬದುಕಿನ ಒಂದು ಭಾಗ.
ಬಾಲ್ಯದಿಂದಲೇ ಸಾಹಿತ್ಯದ ಆಸಕ್ತಿ. 1980 ರಲ್ಲಿ ಮೊದಲ ಕತೆ ‘ರಂಗನ ಮದುವೆ’ ಬರೆದರು. ಅಲ್ಲಿಂದ 1986 ರತನಕ ಅವರು ಒಟ್ಟು 123 ಕೃತಿಗಳನ್ನು ನೀಡಿದರು. ಕತೆ, ಕಾದಂಬರಿ, ಕಾವ್ಯ, ನಾಟಕ , ಚರಿತ್ರೆ, ಅನುವಾದ, ಪ್ರಬಂಧ ಏನೆಲ್ಲ. 1920 ರಲ್ಲಿ ಮೊದಲ ಸಣ್ಣಕತೆಗಳ ಸಂಕಲನ ಹೊರಬಂದು ಮಾಸ್ತಿಯವರು ಸಣ್ಣಕತೆಗಳ ಶ್ರೀನಿವಾಸನೆಂದೇ ಕನ್ನಡಿಗರಿಗೆ ಪ್ರಿಯರಾದರು.
ಅವರು ಎರಡು ಕಾದಂಬರಿ ಬರೆದರು. ಒಂದು ಚಿಕ್ಕವೀರರಾಜೇಂದ್ರ ಮತ್ತು ಚನ್ನಬಸವನಾಯಕ. 1983 ರಲ್ಲಿ ಚಿಕ್ಕವೀರರಾಜೇಂದ್ರ ಕ್ಕೆ ಜ್ಞಾನ ಪೀಠ ಪ್ರಶಸ್ತಿಯ ಮಹಾಗೌರವ ದೊರಕಿತು. 7 ಕವನ ಸಂಕಲನ, 5 ಪ್ರಬಂಧ ಸಂಕಲನ, 14 ನಾಟಕಗಳು, 2 ಜೀವನಚರಿತ್ರೆ, ನೂರಾರು ಸಣ್ಣಕತೆಗಳು ಅವರ ಅಗಾಧ ಸಾಹಿತ್ಯದ ಸಂಪತ್ತಿನಲ್ಲಿ ಸೇರಿವೆ. ಇದು ಅವರ ಬದುಕಿನ ಇನ್ನೊಂದು ಭಾಗ.
ಮಾಸ್ತಿ ಶ್ರೇಷ್ಠ ಪತ್ರಕರ್ತರೂ ಆಗಿದ್ದರು. 25 ವರ್ಷಗಳ ಕಾಲ ಅವರು ‘ಜೀವನ’ ಎಂಬ ಮಾಸಪತ್ರಿಕೆಯನ್ನು ನಡೆಸಿದರು. ಅದು ಕನ್ನಡದ ಅತ್ಯುತ್ತಮ ಸಾಹಿತ್ಯಿಕ ಪತ್ರಿಕೆ ಯೆನಿಸಿತ್ತು. ಅದೇ ಕಾಲಕ್ಕೆ ಧಾರವಾಡದಲ್ಲಿ ಬೆಟಗೇರಿ ಕೃಷ್ಣಶರ್ಮರ ( ಆನಂದಕಂದ) ಜಯಂತಿ ಮಾಸಪತ್ರಿಕೆಯೂ ದೊಡ್ಡ ಹೆಸರು ಗಳಿಸಿತ್ತು. ವಿಶೇಷವಾಗಿ ಕನ್ನಡದ ಅಸಂಖ್ಯಾತ ಬರೆಹಗಾರರನ್ನು ಈ ಪತ್ರಿಕೆಗಳು ರೂಪುಗೊಳಿಸಿದವು. ಇದು ಮಾಸ್ತಿಯವರ ಬದುಕಿನ ಮೂರನೆಯ ಭಾಗ.
ಎಲ್ಲಕ್ಕಿಂತ ಹೆಚ್ಚಾಗಿ ಮಾಸ್ತಿಯವರು ಒಬ್ಬ ಶ್ರೇಷ್ಠ ಮನುಷ್ಯರಾಗಿದ್ದರು. ತಮ್ಮ ಬಾಲ್ಯದ ಬಡತನ, ಕಷ್ಟವನ್ನು ಅವರು ಮರೆತಿರಲಿಲ್ಲ. ಬೇಂದ್ರೆ ರಾಜರತ್ನಂ ಸಹಿತ ಹಲವರಿಗೆ ಅವರು ನೆರವಾದರು. ಹಲವರಿಗೆ ಬದುಕು ಕೊಟ್ಟರು. ಬೆಳೆಸಿದರು.
ಅವರ ‘ಕಾಕನಕೋಟೆ’ ನಾಟಕ ಸಿನಿಮಾ ಆಗಿತ್ತು. ರಾಜಾಜಿ ಅಂಥವರು ಮಾಸ್ತಿಕಥೆಯನ್ನು ತಮಿಳಿಗೆ ಅನುವಾದಿಸಿದ್ದರು. ಬೆರೆ ಹಲವು ಭಾಷೆಗಳಿಗೂ ಆಗಿವೆ.
ಬೆಳಗಾವಿಯಲ್ಲಿ 1929 ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಗೌರವ ಅವರಿಗೆ ದೊರಕಿತ್ತು. 1953 ರಲ್ಲಿ ಕಸಾಪ ಅಧ್ಯಕ್ಷರೂ ಆಗಿದ್ದರು.
ಮಾಸ್ತಿಯವರ ಮೊಸರಿನ ಮಂಗಮ್ಮ, ಸುಬ್ಬಣ್ಣ ಮೊದಲಾದವುಗಳನ್ನೆಲ್ಲ ಕನ್ನಡದ ಓದುಗರು ಇಂದಿಗೂ ಮತ್ತೆ ಮತ್ತೆ ಓದಿ ಸಂತೋಷಪಡುತ್ತಾರೆ. ಒಬ್ಬ ಬರೆಹಗಾರನ ಸಾರ್ಥಕತೆ ಇರುವದೇ ಅದರಲ್ಲಿ, ಅಲ್ಲವೇ?
ನನ್ನ ಅದೃಷ್ಟದಿಂದ ನಾನೂ ಒಮ್ಮೆ ಮಾಸ್ತಿಯವರ ಮನೆಗೆ ಹೋಗಿ ಅವರ ಆಶೀರ್ವಾದ ಪಡೆದಿದ್ದೆ. ಅಷ್ಟೇ ಅಲ್ಲ, ಅವರ ಜೀವನ ಮಾಸಪತ್ರಿಕೆಯಲ್ಲಿ ನನ್ನದೊಂದು ಚುಟುಕೂ ಪ್ರಕಟವಾಗಿತ್ತು. ಆ ಚುಟುಕಿನೊಂದಿಗೆ ನಾನು ಅವರಿಗೆ ಶತಶತ ನಮನ ಸಲ್ಲಿಸುತ್ತೇನೆ-
‘ನಾಳೆ’
ನಾಳೆಯೊಂದಿರಲೆನಗೆ
ಏನೆಲ್ಲ ಮಾಡುವೆನು
ಎಂದು ಸಾವಿರ ಕನಸು
ಹೊತ್ತು ನಿಂದು;
ಕಳೆದುಹೋದವು
ನೂರು ನೂರಾಗಿ
‘ಇಂದು’ಗಳು
ಮುಪ್ಪು ಬಂದಿದೆ ‘ನಾಳೆ’
ಸಾವಿಗೆಂದು.
ಮಾಸ್ತಿ – ಎಂದೂ ಖಾಲಿಯಾಗದ ಕನ್ನಡದ ಆಸ್ತಿ!
https://pragati.taskdun.com/gruhajyoti-yojaneguidlinerealese/
https://pragati.taskdun.com/kanteerava-narasimharaja-wadiyar135th-birthdaykannada-sahitya-parishath/
https://pragati.taskdun.com/dcm-d-k-shivakumarmeetingmlasmp/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ