*ಪ್ರತ್ಯೇಕ ಮಂಡಳಿ ರಚನೆ: ದ್ವಾರಕನಾಥ್ ನೇತೃತ್ವದ ಅಲೆಮಾರಿ ಮುಖಂಡರಿಂದ ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಮನವಿ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಅಲೆಮಾರಿ ಜನಾಂಗಕ್ಕೆ ಸೇರಿದ 93 ಸಮುದಾಯಗಳ ಜನರಿಗೆ ಸರಿಯಾಗಿ ಗುರುತು ಇಲ್ಲವಾಗಿದ್ದು, ಸರ್ಕಾರ ಇವರ ಸಮಸ್ಯೆ ಬಗೆಹರಿಸಿ ಅವರ ರಕ್ಷಣೆಗೆ ಪ್ರತ್ಯೇಕ ಮಂಡಳಿ ರಚಿಸುವಂತೆ ರಾಜ್ಯ ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ಡಾ. ಸಿಎಸ್ ದ್ವಾರಕನಾಥ್ ಅವರ ನೇತೃತ್ವದ ಅಲೆಮಾರಿ ಸಮುದಾಯದ ಮುಖಂಡರ ನಿಯೋಗವು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದೆ.
ಕುಮಾರ ಕೃಪ ಅತಿಥಿ ಗೃಹದಲ್ಲಿ ಅಲೆಮಾರಿ ಸಮುದಾಯದ ಮುಖಂಡರ ಜತೆ ಡಿಸಿಎಂ ಶಿವಕುಮಾರ್ ಅವರನ್ನು ಭೇಟಿ ಮಾಡಿದ ದ್ವಾರಕನಾಥ್ ಅವರು ಈ ಸಮುದಾಯಗಳ ಸಮಸ್ಯೆ ಹಾಗೂ ಮೀಸಲಾತಿ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಚರ್ಚೆ ಮಾಡಿದರು.
ಕಳೆದ ಚುನಾವಣೆಯಲ್ಲಿ ಎಲ್ಲರೂ ಕಾಂಗ್ರೆಸ್ ಪರ ಮತ ಚಲಾಯಿಸಿದ್ದಾರೆ. ಅವರ ರಕ್ಷಣೆಗೆ ಸರ್ಕಾರ ನಿಲ್ಲಬೇಕು ಎಂದು ಮನವಿ ಮಾಡಿದರು. ಈ ವಿಚಾರವಾಗಿ ಸಮಾಜ ಕಲ್ಯಾಣ ಸಚಿವರಾದ ಮಹಾದೇವಪ್ಪ ಅವರನ್ನ ಭೇಟಿ ಮಾಡುವಂತೆ ಡಿಸಿಎಂ ಸೂಚಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ದ್ವಾರಕನಾಥ್ ಅವರು ಅಲೆಮಾರಿ ಜನಾಂಗಕ್ಕೆ ಸೇರಿದ 93ಸಮುದಾಯಗಳ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದರು. ಈ ಸಮುದಾಯದವರನ್ನು ಗುರುತಿಸಿ ಅವರ ಸಮಸ್ಯೆ ಬಗೆಹರಿಸಿ ರಕ್ಷಣೆ ನೀಡಲು ಒಂದು ಸಮಿತಿ ರಚನೆಗೆ ಮನವಿ ಮಾಡಿದ್ದಾರೆ.
ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಬೇಕು, ಗುರುತು ಇಲ್ಲದವರಿಗೆ ಗುರುತು ನೀಡಬೇಕು. ತುಳಿತಕ್ಕೆ ಒಳಗಾದವರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕು. ಇದು ನಮ್ಮ ಪಕ್ಷದ ಸಿದ್ಧಾಂತ ಹಾಗೂ ಜವಾಬ್ದಾರಿ. ಹೀಗಾಗಿ ನಮ್ಮ ನಾಯಕರ ಜೊತೆ ಚರ್ಚೆ ಮಾದುತ್ತೇವೆ. ನಂತರ ಸಂಬಂಧ ಪಟ್ಟ ಇಲಾಖೆ ಜೊತೆ ಚರ್ಚೆ ಮಾಡುತ್ತೇವೆ.
ಪ್ರತ್ಯೇಕ ನಿಗಮ ಸ್ಥಾಪನೆ ಮಾಡುತ್ತೀರಾ ಎಂಬ ಪ್ರಶ್ನೆಗೆ, “ಮೊದಲು ಈ ಸಮುದಾಯದವರನ್ನು ಗುರುತಿಸಿ ಅವರ ಸಮಸ್ಯೆ ಹಾಗೂ ಪರಿಹಾರದ ಬಗ್ಗೆ ಅಧ್ಯಯನ ನಡೆಸಲು ಸಮಿತಿ ರಚನೆ ಮಾಡಲಾಗುವುದು. ನಿಗಮ ಮಂಡಳಿ ಮಾಡಿದ ತಕ್ಷಣ ಸಮಸ್ಯೆ ನಿವಾರಣೆ ಆಗುವುದಿಲ್ಲ. ಈಗಾಗಲೇ ರಚನೆ ಆಗಿರುವ ನಿಗಮ ಮಂಡಳಿಗಳು ಎಲ್ಲಾ ಸಮಸ್ಯೆ ಬಗೆಹರಿಸಿಲ್ಲ. ಹೀಗಾಗಿ ಮೊದಲು ಅವರ ರಕ್ಷಣೆ ಮಾಡುವ ಕಾರ್ಯ ಆಗಬೇಕು” ಎಂದು ಉತ್ತರಿಸಿದರು.
ನಿಷ್ಕ್ರಿಯ ನಿಗಮ ಮಂಡಳಿ ಕೈ ಬಿಡುವ ಚಿಂತನೆ ಇದೆಯಾ ಎಂದು ಕೇಳಿದ ಪ್ರಶ್ನೆಗೆ, “ಈಗಲೇ ಈ ವಿಚಾರವಾಗಿ ಹೇಳುವುದಿಲ್ಲ. ನಾವು ಮೊದಲು ಬಜೆಟ್ ಮಂಡನೆ ಮಾಡುತ್ತೇವೆ. ಈ ವಿಚಾರವಾಗಿ ಹಣಕಾಸು ಸಚಿವರು ಉತ್ತರ ನೀಡುತ್ತಾರೆ” ಎಂದು ತಿಳಿಸಿದರು.
ಸಂಘ ಪರಿವಾರದ ಸಂಸ್ಥೆಗಳಿಗೆ ಬಿಜೆಪಿ ಸರ್ಕಾರ ನೀಡಿದ್ದ ಭೂಮಿ ಮರುಪರಿಶೀಲನೆ ಮಾಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ, “ಕಂದಾಯ ಸಚಿವರು ಈ ವಿಚಾರವನ್ನು ಸಮರ್ಥವಾಗಿ ನಿಭಾಯಿಸಲಿದ್ದಾರೆ. ಅವರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ” ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ