Latest

*ಸರ್ಕಾರಿ ಆಸ್ಪತ್ರೆಗಳಿಗೆ ಜಯದೇವ ಆಸ್ಪತ್ರೆ ಮಾದರಿಯಾಗಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ*

ಜಯದೇವದಲ್ಲಿರುವ ವ್ಯವಸ್ಥೆಯನ್ನೇ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ರೂಪಿಸಲು ಸಾಧ್ಯವಿದೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮತ್ತು ಸೇವಾ ಗುಣಮಟ್ಟವನ್ನು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆರೋಗ್ಯ ಇಲಾಖೆ ಮತ್ತು ಇಂಡಿಯನ್ ಯುನಿಟಿ ಸೆಂಟರ್ ಸಹಯೋಗದಲ್ಲಿ ನಡೆದ ನೈಂಟಿಗೇಲ್ ಶುಶ್ರೂಷ ಅಧಿಕಾರಿಗಳ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

Home add -Advt

ನನ್ನನ್ನೂ ಸೇರಿ ಎಲ್ಲರೂ ಸರ್ಕಾರಿ‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಂತಹ ವ್ಯವಸ್ಥೆ ರೂಪಿಸಬೇಕಿದೆ. ಇದಕ್ಕೆ ಸರ್ಕಾರದ ಜತೆಗೆ ಆರೋಗ್ಯ ಸಿಬ್ಬಂದಿ ಇಚ್ಚಾಶಕ್ತಿಯಿಂದ ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ.

ಜಯದೇವ ಆಸ್ಪತ್ರೆ ಒಂದು ಮಾದರಿ. ಈ ಆಸ್ಪತ್ರೆಯಲ್ಲಿ ಎಲ್ಲಾ ರಾಜಕಾರಣಿಗಳು ಚಿಕಿತ್ಸೆ ಪಡೆಯುತ್ತಾರೆ. ಆ ರೀತಿಯ ಗುಣಮಟ್ಟ, ಶುಚಿತ್ವ, ಶಿಸ್ತು ಜಯದೇವ ಆಸ್ಪತ್ರೆಯಲ್ಲಿದೆ. ಇಲ್ಲಿರುವ ವ್ಯವಸ್ಥೆಯನ್ನೇ ಇತರೆ ಸರ್ಕಾರಿ ಆಸ್ಪತ್ರೆಗಳಲ್ಲೂ ರೂಪಿಸಲು ಸಾಧ್ಯವಿದೆ. ಇದಕ್ಕೆ ಬೇಕಾಗಿರುವುದು ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವ ಹಾಗೂ ಶ್ರದ್ಧೆ ಮಾತ್ರ ಎಂದರು.

“ಲೇಡಿ ವಿತ್ ದಿ ಲ್ಯಾಂಪ್” ಹೆಸರಾಗಿದ್ದ ಶುಶ್ರೂಷಕಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಹೆಸರಿನ 21ನೇ ಸಾಲಿನ ಪ್ರಶಸ್ತಿ ಪಡೆದ ಎಲ್ಲರಿಗೂ ಅಭಿನಂದಿಸಿದ ಮುಖ್ಯಮಂತ್ರಿಗಳು ನರ್ಸಿಂಗ್ ವೃತ್ತಿ ಅತ್ಯಂತ ಪವಿತ್ರವಾದದ್ದು ಎಂದರು.

ರೋಗಿಗಳ ಎಲ್ಲಾ ರೀತಿಯ ಚಿಕಿತ್ಸೆಯ ನಿಜವಾದ ವಾರಸುದಾರರು ಶುಶ್ರೂಷಕಿಯರು. ಕಾಲ ಕಾಲಕ್ಕೆ ಶುಶ್ರೂಷಿಕಿಯರು ನಗುತ್ತಾ ಕೆಲಸ ಮಾಡಿದರೆ ಅರ್ಧ ಕಾಯಿಲೆಯೇ ಗುಣವಾಗುತ್ತದೆ. ಆತ್ಮವಿಶ್ವಾಸ ಬಹಳಷ್ಟು ರೋಗಕ್ಕೆ ಮದ್ದು. ನರ್ಸ್ ಗಳ ಸೇವಾ ಮನೋಭಾವ ಮತ್ತು ನಗು ರೋಗಿಗಳ ಆತ್ಮವಿಶ್ವಾಸ ಹೆಚ್ಚಿಸಿ ಗುಣಮುಖರಾಗಲು ನೆರವಾಗುತ್ತದೆ ಎಂದು ಮೆಚ್ಚುಗೆ ಸೂಚಿಸಿದರು.

ಜೆಮಿಮಲ್ ಕ್ರಿಸ್ಟೋಫರ್, ಆರ್.ಪ್ರಿಯದರ್ಶಿನಿ, ಶಶಿ ಕುಮಾರ್, ಜಾನ್ ಮಾರ್ಷಲ್, ಭುವನೇಶ್ವರಿ, ಪ್ರೆಸಿಲ್ಲಾ ರೋಡ್ರಿಗಸ್, ಭಾರತಿ ಪಾಟೀಲ್, ಎಂ.ಎಂ.ರತಿ, ಶೈಲಜ ಬಿ.ಎಂ, ಬಿ.ರೇಣುಕಾ, ಕವಿತಾ, ಡಾ.ಸಂಜಯ್ಎಂ ಪೀರಾಪುರ್ ಅವರಿಗೆ ಮುಖ್ಯಮಂತ್ರಿಗಳು ನೈಟಿಂಗೇಲ್ ಪ್ರಶಸ್ತಿಯನ್ನು ವಿತರಿಸಿ ಸನ್ಮಾನಿಸಿದರು.

ವೇದಿಕೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Back to top button