ನಾಳೆ ಮಧ್ಯಾಹ್ನದೊಳಗೆ ವಿಶ್ವಾಸಮತ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –
ರಾಜ್ಯ ರಾಜಕೀಯ ಕ್ಷಣ ಕ್ಷಣಕ್ಕೂ ಹೊಸ ಹೊಸ ಬೆಳವಣಿಗೆ ಕಾಣುತ್ತಿದ್ದು, ಇದೀಗ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ.
ಶುಕ್ರವಾರ ಮಧ್ಯಾಹ್ನದೊಳಗೆ ವಿಶ್ವಾಸಮತ ಯಾಚನೆ ಮಾಡಿ ಎಂದು ರಾಜ್ಯಪಾಲ ವಜುಬಾಯಿವಾಲಾ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಆದೇಶಿಸಿದ್ದಾರೆ.
ಇದರಿಂದಾಗಿ ಸುಪ್ರಿಂ ಕೋರ್ಟ್ ಮೆಟ್ಟಿಲೇರುವ ಒಂದು ಅವಕಾಶ ಬಿಟ್ಟರೆ ಮುಖ್ಯಮಂತ್ರಿಗೆ ಬೇರೆ ಯಾವುದೇ ಅವಕಾಶವಿಲ್ಲ. ಆದರೆ ಸುಪ್ರಿಂ ಕೋರ್ಟ್ ಗೆ ಹೋಗಿ ಮುಖಭಂಗ ಅನುಭವಿಸುವ ಸಾಹಸವನ್ನು ಸರಕಾರ ಮಾಡುವ ಸಾಧ್ಯತೆ ಕಡಿಮೆ.
ಇಂದು ಸದನದಲ್ಲಿ ಸಮ್ಮಿಶ್ರ ಸರಕಾರ ಅನಗತ್ಯ ಕಾಲಹರಣ ಮಾಡುವ ಪ್ರಯತ್ನಕ್ಕಿಳಿದಾಗಲೇ ಬಿಜೆಪಿ ರಾಜ್ಯಪಾಲರ ಕದ ತಟ್ಟಿತ್ತು. ಆಗ ರಾಜ್ಯಪಾಲರು ಇಂದೇ ರಾತ್ರಿಯೊಳಗೆ ವಿಶ್ವಾಸಮತ ಸಾಬೀತುಪಡಿಸಿ ಎಂದು ಸಂದೇಶ ಕಳಿಸಿದ್ದರು. ಆದರೆ ಮತ್ತಷ್ಟು ಗದ್ದಲ ಉಂಟು ಮಾಡಿದ ಕಾಂಗ್ರೆಸ್, ಜೆಡಿಎಸ್ ನಾಯಕರು ಸದನ ನಾಳೆಗೆ ಮುಂದೂಡವಂತೆ ಮಾಡುವಲ್ಲಿ ಯಶಸ್ವಿಯಾದರು.
ಇದೀಗ ರಾಜ್ಯಪಾಲರು ಮುಖ್ಯಮಂತ್ರಿಗೆ ಸ್ಪಷ್ಟ ಆದೇಶ ಕಳುಹಿಸಿದ್ದಾರೆ. ನಾಳೆ ಮಧ್ಯಾಹ್ನ 1.30ರೊಳಗೆ ಬಹುಮತ ಸಾಭೀತುಪಡಿಸುವಂತೆ ಆದೇಶ ಕಳಿಸಿದ್ದಾರೆ.
ಮುಖ್ಯಮಂತ್ರಿ ಹಾಗೂ ಎಲ್ಲ ನಾಯಕರೂ ಮಾತನಾಡುವುದಕ್ಕೆ ಅವಕಾಶ ಬೇಕು ಎನ್ನುವ ಕಾರಣ ನೀಡಿ ಒಂದೊಮ್ಮೆ ನಾಳೆ ಮಧ್ಯಾಹ್ನದೊಳಗೆ ಬಹುಮತ ಸಾಭೀತುಪಡಿಸದಿದ್ದರೆ ರಾಜ್ಯಪಾಲರು ಸರಕಾರ ವಜಾಗೊಳಿಸಲು ಕೇಂದ್ರಕ್ಕೆ ವರದಿ ಕಳಿಸಬಹುದು.
ಈ ಬೆಳವಣಿಗೆಯಿಂದಾಗಿ ರಾಜ್ಯ ರಾಜಕೀಯ ಮತ್ತಷ್ಟು ಕುತೂಹಲಕ್ಕೆ ಜಾರಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ