*ನಾವು ಪುಕ್ಸಟ್ಟೆ ಅಕ್ಕಿ ನೀಡಿ ಎಂದು ಕೇಳುತ್ತಿಲ್ಲ, ಆದರೂ ಅವರು ಸಬೂಬು ಹೇಳ್ತಿದ್ದಾರೆ; ಕೇಂದ್ರದ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್ ಕಿಡಿ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಅನ್ನದಾನಕ್ಕಿಂತ ಶ್ರೇಷ್ಠ ದಾನ ಮತ್ತೊಂದಿಲ್ಲ. ಹಸಿವು ಮುಕ್ತ ರಾಜ್ಯ ಮಾಡಲು ನಾವು ತೀರ್ಮಾನಿಸಿದ್ದೇವೆ. ಅದಕ್ಕಾಗಿ ಅನ್ನಭಾಗ್ಯ ಯೋಜನೆ ಮೂಲಕ ಬಡ ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿ ನೀಡಲು ಮುಂದಾಗಿದ್ದೇವೆ. ಆದರೆ ಕೇಂದ್ರ ಸರ್ಕಾರ ಇದಕ್ಕೆ ಅಡ್ಡಿಪಡಿಸಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಸರ್ಕಾರ ಅಕ್ಕಿ ಕೊಡದಿದ್ದರೂ ನಾವು ಬೇರೆ ರಾಜ್ಯಗಳಿಂದ ಖರೀದಿ ಮಾಡಿ ನೀಡುತ್ತೇವೆ. ಅದಕ್ಕೆ ಸರ್ಕಾರ ಹಾಗೂ ಮಂತ್ರಿಗಳು ಬೇರೆ ರಾಜ್ಯಗಳ ಜೊತೆ ಸಂಪರ್ಕ ಮಾಡುತ್ತಿದ್ದಾರೆ. 5 ಕೆ.ಜಿ ಯಷ್ಟು ನೀಡಲು ನಮ್ಮ ಬಳಿ ಅಕ್ಕಿ ಇದೆ. ಉಳಿದ 5 ಕೆ ಜಿಗೆ ಹೊಂದಿಸುತ್ತಿದ್ದೇವೆ. ಕೆಲವರು ನಮಗೆ ಅಕ್ಕಿ ಬದಲು ರಾಗಿ, ಜೋಳ ಕೇಳುತ್ತಿದ್ದಾರೆ. ಪರಿಸ್ಥಿತಿ ನೋಡಿ ತೀರ್ಮಾನ ಮಾಡುತ್ತೇವೆ ಎಂದರು.
ಬಡವರ ಅನ್ನದಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿಗೆ ರಾಜ್ಯದ ಜನ ಮುಂಬರುವ ಸಂಸತ್, ಪಂಚಾಯ್ತಿ ಹಾಗೂ ಪಾಲಿಕೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು. ನಾವು ಪುಕ್ಸಟ್ಟೆ ಅಕ್ಕಿ ನೀಡಿ ಎಂದು ಕೇಳುತ್ತಿಲ್ಲ. ಆದರೂ ಅವರು ತಮ್ಮ ನೀತಿ ಬದಲಾಗಿದೆ ಎಂದು ಸಬೂಬು ಹೇಳುತ್ತಿದ್ದಾರೆ. ನಮ್ಮ ಮೇಲೆ ಜನರನ್ನು ಎತ್ತಿಕಟ್ಟಲು ಕೇಂದ್ರ ಈ ರೀತಿ ಮಾಡಿದ್ದಾರೆ. ಜನ ಕೇಂದ್ರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಲಿದ್ದಾರೆ.
ಯಡಿಯೂರಪ್ಪ ಅವರು, ಸರ್ಕಾರ ಒಂದು ಕಾಳು ಅಕ್ಕಿ ಕಡಿಮೆ ಕೊಟ್ಟರು ಸುಮ್ಮನಿರುವುದಿಲ್ಲ ಎಂದಿದ್ದಾರೆ. ಹೋರಾಟ ಮಾಡುವುದಾಗಿ ಹೇಳಿದ್ದಾರೆ. ಯಡಿಯೂರಪ್ಪ, ಬೊಮ್ಮಾಯಿ ಅವರೇ, ನಿಮ್ಮ ಪಕ್ಷ ಹೇಳಿದಂತೆ, ನೀವು ಇನ್ನೂ ಯಾಕೆ ಎಲ್ಲರ ಖಾತೆಗೆ 15 ಲಕ್ಷ ಹಾಕಿಸಿಲ್ಲ, ರೈತರ ಆದಾಯ ಡಬಲ್ ಯಾಕೆ ಮಾಡಿಲ್ಲ? ಯುವಕರಿಗೆ ಯಾಕೆ ಉದ್ಯೋಗ ನೀಡಿಲ್ಲ? ಈ ಬಗ್ಗೆ ನೀವು ಮೊದಲು ಉತ್ತರ ನೀಡಿ, ಹೋರಾಟ ಮಾಡಿ ಎಂದು ಟಾಂಗ್ ನೀಡಿದರು.
ಅದನ್ನು ಬಿಟ್ಟು ದಿನಬೆಳಗಾದರೆ ಯಡಿಯೂರಪ್ಪ, ಕಟೀಲ್, ಅಶೋಕ್ ಎಲ್ಲರೂ ಒಂದೊಂದು ವ್ಯಂಗ್ಯದ ಮಾತು ಆಡುತ್ತಿದ್ದಾರೆ. ವಿರೋಧ ಪಕ್ಷವಾಗಿ ರಾಜಕೀಯವಾಗಿ ಟೀಕೆ ಮಾಡಿ ನಮ್ಮನ್ನು ತಿದ್ದಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ನೀವು ಕೊಟ್ಟ ಮಾತಿನಂತೆ ಅಚ್ಚೆದಿನ ಬಂದಿಲ್ಲ, ಹೀಗಾಗಿ ನಾವು ವಿರೋಧ ಪಕ್ಷದಲ್ಲಿ ಕೂರುವಂತಾಗಿದೆ ಎಂದು ನಿಮ್ಮ ಅಧ್ಯಕ್ಷರಾದ ನಡ್ಡಾ ಹಾಗೂ ಪ್ರಧಾನಿ ವಿರುದ್ಧ ಮೊದಲು ಪ್ರತಿಭಟನೆ ಮಾಡಿ ಎಂದು ಹೇಳಿದರು.
ನಾವು ಕೇಂದ್ರದ ಬಡ ವಿರೋಧಿ ನೀತಿ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ. ಆಹಾರ ಬದ್ಧತೆ ವಿಚಾರದಲ್ಲಿ ಯಾರೂ ಹಸಿವಿನಿಂದ ಇರಬಾರದು ಎಂಬುದು ಕಾಂಗ್ರೆಸ್ ಸಂಕಲ್ಪ. ಇಂದು ಕೇಂದ್ರ ಸರ್ಕಾರದ ಬಡವರ ವಿರೋಧಿ ನೀತಿ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಬಡವರ ಹೊಟ್ಟೆ ತುಂಬುವ ವಿಚಾರದಲ್ಲಿ ಕೇಂದ್ರ ಸರ್ಕಾರದ ರಾಜಕಾರಣದ ವಿರುದ್ಧ ಇಂದು ಬೀದಿಗಿಳಿದು ಹೋರಾಟ ಮಾಡಲಾಗುತ್ತಿದೆ.
ಸೋನಿಯಾ ಗಾಂಧಿ ಅವರು ಯುಪಿಎ ಸರ್ಕಾರದ ಅಧ್ಯಕ್ಷರಾಗಿ, ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಆಹಾರ ಭದ್ರತಾ ಕಾಯ್ದೆ ಜಾರಿ ಮಾಡಿ ನಮಗೆ ಆಹಾರವನ್ನು ಸಂವಿಧಾನಬದ್ಧ ಹಕ್ಕಾಗಿ ನೀಡಿದರು. ಆ ಸಂವಿಧಾನದ ಹಕ್ಕಿನ ಮೂಲಕ ನಾವು ದೇಶದ ಜನರಿಗೆ ಅಕ್ಕಿ ಹಂಚಲಾಗುತ್ತಿದೆ. ಕೇಂದ್ರ ಸರ್ಕಾರ ಅಂದು ಪ್ರತಿ ಕೆ.ಜಿ ಅಕ್ಕಿಗೆ ಸುಮಾರು 28 ರೂ. ಉಳಿದ 3-4 ರೂ. ರಾಜ್ಯ ಸರ್ಕಾರ ಭರ್ತಿ ಮಾಡಿ ಬಡವರಿಗೆ ಅಕ್ಕಿ ಹಂಚಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೊದಲ ದಿನದಿಂದ ಅನ್ನಭಾಗ್ಯ ಯೋಜನೆ ಜಾರಿ ಮಾಡಿ ಬಡ ಕುಟುಂಬದ ಪ್ರತಿ ವ್ಯಕ್ತಿಗೆ 5 ಕೆ ಜಿ ಅಕ್ಕಿ ನೀಡಿತ್ತು. ನಂತರ ಸಿದ್ದರಾಮಯ್ಯ ಅವರು ಅದನ್ನು 7ಕೆ.ಜಿಗೆ ಏರಿಸಿದ್ದರು. ನಾವು ನಮ್ಮ ಚುನಾವಣೆ ಪ್ರಣಾಳಿಕೆಯಲ್ಲಿ 10 ಕೆ ಜಿ ಅಕ್ಕಿ ನೀಡುವುದಾಗಿ ಹೇಳಿತ್ತು. ಕೊಟ್ಟ ಮಾತು ಉಳಿಸಿಕೊಳ್ಳುವುದು ಕಾಂಗ್ರೆಸ್ ಸಂಕಲ್ಪ. ಪಕ್ಷ ನೀಡಿದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಈಗಾಗಲೇ ಶಕ್ತಿ ಯೋಜನೆ ಜಾರಿ ಆಗಿದೆ. ಶಕ್ತಿ ಯೋಜನೆ ಜಾರಿಯಾದ ಒಂದು ವಾರದಲ್ಲಿ 3.30 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ.
ಧಾರ್ಮಿಕ ಕ್ಷೇತ್ರಗಳಲ್ಲಿ ಜನ ತೀರ್ಥಯಾತ್ರೆ ಮಾಡುತ್ತಿದ್ದಾರೆ. ಆಮೂಲ ಧರ್ಮ ಉಳಿಸುವ ಕೆಲಸ ಆಗುತ್ತಿದೆ. ಇನ್ನೂ ಗೃಹಜ್ಯೋತಿ ಯೋಜನೆ ನೋಂದಣಿ ಆರಂಭವಾಗಿದೆ. ನೀವೆಲ್ಲರೂ ತಾಳ್ಮೆಯಿಂದ ನೋಂದಣಿ ಮಾಡಿಕೊಳ್ಳಿ, ಆತುರ, ಗಾಬರಿ ಬೇಡ. ನಿಮಗೆಲ್ಲರಿಗೂ ಈ ಯೋಜನೆ ಸಿಗಲಿದೆ. ಆತುರದಿಂದ ತಾಂತ್ರಿಕ ತೊಂದರೆ ಆಗಬಾರದು ಎಂದು ಗೃಹಲಕ್ಷ್ಮಿ ಯೋಜನೆಯನ್ನು ಕಾಲಾವಕಾಶ ಪಡೆದು ಜಾರಿ ಮಾಡಲಾಗುವುದು. ಬಾಪು ಕೇಂದ್ರ, ಪಂಚಾಯ್ತಿ ಕೇಂದ್ರ ಹಾಗೂ ಸ್ವಂತ ಮೊಬೈಲ್ ನಲ್ಲಿ ಅರ್ಜಿ ತುಂಬಲು ಅವಕಾಶ ಕಲ್ಪಿಸಲಾಗುತ್ತಿದೆ. ಇದರ ಜೊತೆಗೆ ಪಕ್ಷದ ಕಾರ್ಯಕರ್ತರು ಜನಪ್ರತಿನಿಧಿಗಳು ಮನೆ ಮನೆಗೆ ಹೋಗಿ ಪಕ್ಷಬೇಧ ಮರೆತು ಈ ಯೋಜನೆ ಅರ್ಜಿ ತುಂಬಬೇಕು.ಪ್ರತಿ ಬೂತ್ ಮಟ್ಟದಲ್ಲಿ ಓರ್ವ ವಿದ್ಯಾವಂತ ಮಹಿಳೆ ಹಾಗೂ ಪುರುಷ ಪ್ರತಿ ಮನೆಗೆ ಹೋಗಿ ಅರ್ಜಿ ತುಂಬಬೇಕು. ಯಾರೂ ಅರ್ಜಿ ತುಂಬಲು ಲಂಚ ಪಡೆಯಬಾರದು. ಲಂಚ ಪಡೆದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ನಮ್ಮ ಕಾರ್ಯಕರ್ತರು ಅಕ್ರಮದಲ್ಲಿ ಭಾಗಿಯಾದರೂ ಪ್ರಕರಣ ದಾಖಲಿಸಲಾಗುವುದು. ಎಷ್ಟು ಪಾರದರ್ಶಕವಾಗಿ ಹಾಗೂ ಪ್ರಾಮಾಣಿಕವಾಗಿ ಯೋಜನೆ ಜಾರಿ ಮಾಡಲು ಸಾಧ್ಯವೋ ಅಷ್ಟು ಪಾರದರ್ಶಕವಾಗಿ ಮಾಡಲಾಗುವುದು. ಯಾರಿಗೆ ಯೋಜನೆ ಬೇಡ ಎಂದು ತೀರ್ಮಾನಿಸುತ್ತಾರೆ ಅವರ ಹೊರತುಪಡಿಸಿ ಉಳಿದವರಿಗೆ ಈ ಯೋಜನೆಗೆ ಅರ್ಜಿ ತುಂಬಬೇಕು ಎಂದು ತಿಳಿಸಿದರು.
ಗೃಹಲಕ್ಷ್ಮಿ ಯೋಜನೆಯಲ್ಲಿ ಆಗಸ್ಟ್ ನಿಂದ ಹಣ ನೀಡಲು ತೀರ್ಮಾನಿಸಿದ್ದೇವೆ. ಇದಕ್ಕಾಗಿ ಪ್ರತ್ಯೇಕ ಅಪ್ ಸಿದ್ಧವಾಗುತ್ತಿದ್ದು, ಶೀಘ್ರದಲ್ಲೇ ಈ ಯೋಜನೆಗೆ ನೋಂದಣಿ ಆರಂಭವಾಗಲಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ನೋಂದಣಿ ಆರಂಭದ ದಿನಾಂಕ ಪ್ರಕಟಿಸಲಿದ್ದಾರೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ