ಒಡಲೊಳಗಿನ ಒಣಭೂಮಿ ತೆರೆದಿಟ್ಟ ಕೃಷ್ಣೆ; ತೀರ ಪ್ರದೇಶಗಳಲ್ಲಿ ತೀರದ ದಾಹ; ಕೃಷಿಕರ ಬೆನ್ನೇರಿದ ನಷ್ಟದ ಮೂಟೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದೇಶದ 3ನೇ ಅತಿ ಉದ್ದದ ನದಿ ಎಂಬ ಹೆಗ್ಗಳಿಕೆಯ ಕೃಷ್ಣಾ ನದಿ ಬೆಳಗಾವಿ ಜಿಲ್ಲೆಯಿಂದ ಹಾಯ್ದು ಹೋಗಿರುವುದು ಈ ಜಿಲ್ಲೆಯ ಹೆಗ್ಗಳಿಕೆ. ಪ್ರತಿ ವರ್ಷ ಈ ಹೊತ್ತಿಗೆ ಮಟ್ಟ ಮೀರಿ ಹರಿದು ಅಬ್ಬರಿಸುತ್ತಿದ್ದ ಕೃಷ್ಣೆ ಈ ಬಾರಿ ಜಿಲ್ಲೆಯುದ್ದಕ್ಕೂ ತನ್ನ ಒಡಲೊಳಗಿನ ಒಣ ಭೂಮಿಯ ದರ್ಶನ ಮಾಡಿಸುತ್ತಿದ್ದಾಳೆ. ತನ್ನ ಪಾತಳಿಯಲ್ಲಿ ಅಲ್ಲಿಷ್ಟು, ಇಲ್ಲಿಷ್ಟು ಬಾಯಾರಿಕೆ ನೀಗಿಸದ, ಭೂಮಿ ತಣಿಸದ ಬೊಗಸೆಯಷ್ಟು ನೀರಿಟ್ಟು ಅಕ್ಷರಶಃ ಅಂತರ್ಧಾನಳಾಗಿದ್ದಾಳೆ.
ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಈ ಬಾರಿ ಜಿಲ್ಲೆಯಲ್ಲಿ ಸಾಕಷ್ಟು ಮಳೆಯಾಗಿಲ್ಲ. ಹೀಗಾಗಿ ಕೃಷ್ಣೆ ಹರಿದ ಹಾದಿಯಲ್ಲಿ ನದಿಯ ಹರಿವಿನ ಗುರುತಿಗಿಷ್ಟು ನೀರಿನ ಹೊಂಡಗಳು ಕಾಣುತ್ತಿವೆಯೇ ಹೊರತು ರಣ ಬಿಸಿಲು, ಒಣ ನೆಲ ರೈತಾಪಿ ವರ್ಗವನ್ನು ಕಂಗೆಡಿಸಿದೆ. ನದಿ ತೀರ ಪ್ರದೇಶದಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೂ ಕಂಟಕ ಬಂದೊದಗಿದೆ. ನದಿಯೊಳಗಿದ್ದ ಜಲಚರಗಳು ಮಾಯವಾಗಿವೆ.
ಕೃಷ್ಣೆಯ ಅಕ್ಕಪಕ್ಕದಲ್ಲಿರುವ ಅಗಾಧ ಕೃಷಿ ಭೂಮಿ ಅವಲಂಬಿಸಿರುವುದು ಕೃಷ್ಣೆಯ ನೀರನ್ನೇ. ಮುಂಗಾರಿನ ಭರವಸೆ ಮೇಲೆ ರೈತರು ಬಿತ್ತಿ ಬೆಳೆದ ಬೆಳೆಗಳೆಲ್ಲ ಒಣಗಿ ಭೂಮಿಗೊರಗುತ್ತಿವೆ. ಅಸ್ತಿತ್ವವೇ ಕಾಣದ ನದಿಯ ಅಕ್ಕಪಕ್ಕವೆಲ್ಲ ಅಗ್ನಿ ನರ್ತನದ ವೇದಿಕೆಯಂತೆ ಕಂಡುಬರುತ್ತಿದೆ.
ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಹುಟ್ಟಿ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳ ಮೂಲಕ 1,400 ಕಿ.ಮೀ. ಕ್ರಮಿಸಿ ಬಂಗಾಳಕೊಲ್ಲಿಯಲ್ಲಿ ಸಮುದ್ರ ಸೇರುವ, ಗಂಗೆ, ಗೋದಾವರಿ ನಂತರದ ಅತಿ ಉದ್ದದ ನದಿ ಇದೇನಾ? ಎಂದು ಕೇಳುವಂಥ ಪರಿಸ್ಥಿತಿ ಸದ್ಯ ಬೆಳಗಾವಿ ಜಿಲ್ಲೆಯಲ್ಲಿ ಕಂಡುಬರುತ್ತಿದೆ.
ಮಹಾರಾಷ್ಟ್ರದಲ್ಲಿರುವ ಜಲಾಶಯಗಳಿಂದ ಸಾಕಷ್ಟು ನೀರು ಬಿಡುಗಡೆ ಮಾಡದಿರುವುದರಿಂದ ಕರ್ನಾಟಕ ಭಾಗದಲ್ಲಿ ಕೃಷ್ಣೆ ತಟ ತೊಟ್ಟು ನೀರಿಗೆ ತಹತಹಿಸುವ ಸ್ಥಿತಿ ಇದೆ. ಸದ್ಯ ಕೃಷ್ಣಾ ತೀರದ ಪ್ರದೇಶಗಳಲ್ಲಿ ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದರೂ ಕೃಷಿ ಭೂಮಿ ಕಂಗೆಟ್ಟಿದೆ.
ಇತ್ತೀಚೆಗಷ್ಟೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಾರಾಷ್ಟ್ರದ ಸಾಂಗ್ಲಿಗೆ ಭೇಟಿ ನೀಡಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದು ಅಲ್ಲಿನ ಸರಕಾರದ ಮೇಲೆ ಒತ್ತಡ ಹೇರಿ ನದಿಗೆ ನೀರು ಬಿಡಿಸಲು ಪ್ರಯತ್ನಿಸಿಲ್ಲ ಎಂಬ ಅಸಮಾಧಾನದ ಮಾತುಗಳು ಈ ಭಾಗದ ಜನರಿಂದ ಕೇಳಿಬರತೊಡಗಿದೆ.
ಕೃಷ್ಣಾ ತೀರದ ಕರ್ನಾಟಕ ಭಾಗದ ಪ್ರದೇಶಗಳಲ್ಲಿ ಮಳೆ ಸುರಿಯುವ ಲಕ್ಷಣಗಳೇ ಕಾಣದೆ ‘ಬರಪೀಡಿತ ಜಿಲ್ಲೆ’ ಎಂದು ಘೋಷಿಸಲು ಒತ್ತಾಯಗಳು ಕೇಳಿಬರುತ್ತಿವೆ. ಸರಕಾರ ಇನ್ನಾದರೂ ಈ ಬಗ್ಗೆ ಕ್ರಮ ವಹಿಸಬೇಕೆಂಬ ಕೂಗು ಕೃಷ್ಣೆ ತೀರದಿಂದ ಮೊಳಗತೊಡಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ