Belagavi NewsBelgaum NewsKannada NewsKarnataka NewsLatestPolitics

ಸಚಿವ ಸತೀಶ್ ಜಾರಕಿಹೊಳಿ ಲೋಕಸಭೆಗೆ ಸ್ಪರ್ಧೆ?

ಹೈಕಮಾಂಡ್‌ ಸೂಚಿಸಿದರೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ: ಸಚಿವ ಸತೀಶ್‌ ಜಾರಕಿಹೊಳಿ

28 ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಶೀಘ್ರ ಕ್ರಮ – ಬೆಳಗಾವಿಯಲ್ಲಿ ರಿಂಗ್ ರೋಡ್ ಕಾಮಗಾರಿ ಶೀಘ್ರದಲ್ಲೇ ಆರಂಭ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪಕ್ಷ ಹೇಳಿದರೆ 2024 ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ. ಚುನಾವಣೆ ಸಂಬಂಧ ಬೆಂಗಳೂರಿನಲ್ಲಿ ಸಭೆ ನಡೆದಿದೆ. ಬೆಳಗಾವಿ ಜಿಲ್ಲೆಯ ಶಾಸಕರ ಜತೆ ಸಭೆ ನಡೆಸಿ ಚರ್ಚಿಸಿದ್ದೇನೆ. ಮುಂದಿನ 2 ತಿಂಗಳೊಳಗೆ ಕಾಂಗ್ರೆಸ್ ಅಭ್ಯರ್ಥಿ ಹೆಸರು ಘೋಷಣೆಯಾಗಲಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

ನಗರದ ಕಾಂಗ್ರೆಸ್‌ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹೆಸರು ಮುಂದಿನ 2 ತಿಂಗಳೊಳಗೆ ಘೋಷಣೆಯಾಗಲಿದೆ. ಎರಡೂ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಸ್ಥಳೀಯ ಶಾಸಕರು, ಮುಖಂಡರ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಸದ್ಯಕ್ಕೆ ನಮ್ಮ ಕುಟುಂಬ ಎರಡನೇ ಸ್ಥಾನದಲ್ಲಿ ಇರಲಿದೆ. ಪಕ್ಷ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಹೇಳಿದರೆ ನಿಲ್ಲುತ್ತೇನೆ. ಅವಶ್ಯಕತೆ ಇದ್ದರೆ ನಮ್ಮ ಕುಟುಂಬದಿಂದಲೇ ಅಭ್ಯರ್ಥಿ ನಿಲ್ಲಿಸುತ್ತೇವೆ ಎಂದರು.

28 ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಬೇಕಿದೆ. ಈ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಮಾತನಾಡಿದ್ದೇವೆ. ಮುಂದಿನ ವಾರ ಈ ಕುರಿತು ಸಭೆ ಮಾಡುವುದಾಗಿ ಕೇಂದ್ರ ಸಚಿವ ಗಡ್ಕರಿ ಹೇಳಿದ್ದಾರೆ ಎಂದ ಅವರು, ಬೆಳಗಾವಿ ಹಲಗಾ ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿ ವಿಳಂಬ ಆಗಿರುವುದಕ್ಕೆ ಗುತ್ತಿಗೆದಾರ ಕೆಲಸ ಬಿಟ್ಟು ಹೋಗಿದ್ದಾನೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಗೆ ಅದೇ ಗುತ್ತಿದಾರರನಿಗೆ ಕಾಮಗಾರಿ ನೀಡಲು ಸೂಚಿಸಿದ್ದು, ಬೆಳಗಾವಿಯಲ್ಲಿ ರಿಂಗ್ ರೋಡ್ ಕಾಮಗಾರಿ ಶೀಘ್ರದಲ್ಲಿ ಆರಂಭ ಮಾಡುತ್ತೇವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಮಳೆ ಕೊರತೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ ಮಳೆಯಾಗದ ಜಿಲ್ಲೆಗಳನ್ನ ಬರಪೀಡಿ ಎಂದು ಘೋಷಣೆ ಮಾಡುತ್ತೇವೆ, ಈಗಾಗಲೇ ಈ ವಿಚಾರ ಸಿಎಂ ಸಿದ್ದರಾಮಯ್ಯನವರ ಗಮನಕ್ಕೆ ತಂದಿದ್ದೇವೆ. ಜುಲೈ 15ರ ವರೆಗೂ ಮಳೆ ಪ್ರಮಾಣ ನೋಡೋಣ ಎಂದಿದ್ದರು. ಆದಷ್ಟು ಬೇಗ ಮಳೆಯಾಗದ ಜಿಲ್ಲೆಗಳನ್ನ ಬರಪೀಡಿ ಪ್ರದೇಶಗಳೆಂದು ಸಿಎಂ ಘೋಷಣೆ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ನಗರದ ಚನ್ನಮ್ಮ ವೃತ್ತದ ಸಮೀಪ ಇರುವ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 162 ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೇಶ್ಯಾಲಿಟಿ ಆಸ್ಪತ್ರೆ ಕಟ್ಟಡ ಈಗಾಗಲೇ ನಿರ್ಮಾಣವಾಗಿದೆ. ಪ್ರಸ್ತುತ ಬಜೆಟ್‌ ನಲ್ಲಿ ಸೂಪರ್ ಸ್ಪೇಶ್ಯಾಲಿಟಿ ಆಸ್ಪತ್ರೆಗಾಗಿ ಅನುದಾನ ಮೀಸಲಿಟ್ಟಿದ್ದು, ಶೀಘ್ರ  ಸಿಬ್ಬಂದಿಗಳನ್ನು ನೇಮಿಸಿ ಆಸ್ಪತ್ರೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಬೆಳಗಾವಿ ಬೂಡಾ, ಮಹಾನಗರ ಪಾಲಿಕೆ, ಸ್ಮಾರ್ಟ್‌ ಸಿಟಿಯಲ್ಲಿ ನಡೆದ ಅಕ್ರಮಗಳ ಬಗ್ಗೆ ಈಗಾಗಲೇ ಲೋಕಾಯುಕ್ತದಲ್ಲಿ ಖಾಸಗಿ ದೂರು ದಾಖಲಾಗಿದ್ದು, ತನಿಖೆಗೆ ಬೆಂಗಳೂರಿನಿಂದ ಅಧಿಕಾರಿಗಳು ಬರಲಿದ್ದು, ಸೆಕ್ರೆಟರಿ ಹಂತದ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದರು.

ಶಾಲಾ ಮಕ್ಕಳಿಗೆ ಬಸ್‌ ವ್ಯವಸ್ಥೆ: ಖಾನಾಪುರ ತಾಲೂಕಿನ ಮಕ್ಕಳು ಶಾಲೆಗೆ ಬರಲು ಬಸ್ ವ್ಯವಸ್ಥೆ ಇಲ್ಲದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಖಾನಾಪುರ ತಾಲೂಕಿನಲ್ಲಿ ಮೊದಲಿನಿಂದಲೂ ಬಸ್ ಸಮಸ್ಯೆ ಇದೆ. ಸರ್ಕಾರದಿಂದ ನಾಲ್ಕು ಸಾವಿರ ಬಸ್ ಖರೀದಿ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಹೊಸ ಬಸ್ ಬಂದರೆ ಅವುಗಳನ್ನ ಖಾನಾಪುರ ತಾಲೂಕಿಗೆ ಬಿಡಿಸುವ ವ್ಯವಸ್ಥೆ ಮಾಡಿ ಶಾಲಾ ಮಕ್ಕಳ ಸಮಸ್ಯೆ ನಿವಾರಿಸುತ್ತೇವೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button