ಪ್ರಗತಿವಾಹಿನಿ ಸುದ್ದಿ, ಶಿರಸಿ: ಕೇಂದ್ರದಲ್ಲಿ ಮತ್ತೆ ಮೋದಿ ಸರಕಾರ ಬರಬೇಕು. ಇಲ್ಲಿನ 28 ಸಂಸದರು ಆಯ್ಕೆ ಆಗಬೇಕು. ಅದಕ್ಕೆ ಶ್ರೀರಾಮ ಸೇನೆ ಮೋದಿ ಗೆಲ್ಲಿಸಿ, ದೇಶ ಉಳಿಸಿ ಅಭಿಯಾನ ಮಾಡಲಿದೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು.
ಶಿರಸಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಬಿಜೆಪಿ ದಾರಿ ತಪ್ಪಿದೆ. ಹಿಂದುತ್ವವನ್ನು, ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ. ದುಡ್ಡಿನ ಅಹಂಕಾರ, ಹಿಂದುತ್ವದ ಮಧ್ಯೆ ಭಿನ್ನಾಭಿಪ್ರಾಯ ಇದಕ್ಕೆ ಕಾರಣ. ಹಿಂದು ಸಂಘಟನೆಗೆ ಬಲತುಂಬುವುದರಿಂದ ಬಿಜೆಪಿ ಬಲಗೊಳ್ಳಬಹುದು. ಇಲ್ಲವಾದರೆ ಬಿಜೆಪಿ ಕರ್ನಾಟಕದಲ್ಲಿ ಇನ್ನೂ ಧೂಳೀಪಟವಾಗಲಿದೆ. ಆದರೆ ಕೇಂದ್ರದಲ್ಲಿ ಮೋದಿ ಬರಬೇಕು. ಅದಕ್ಕೆ ಇಲ್ಲಿನ 28 ಸಂಸದರು ಆಯ್ಕೆ ಆಗಬೇಕು. ಅದಕ್ಕೆ ಶ್ರೀರಾಮ ಸೇನೆ ಮೋದಿ ಗೆಲ್ಲಿಸಿ, ದೇಶ ಉಳಿಸಿ ಅಭಿಯಾನ ಮಾಡಲಿದೆ ಎಂದರು.
ಕಾಂಗ್ರೆಸ್ ಸಾವರ್ಕರ್ ಮತ್ತು ಭಗತ್‌ಸಿಂಗ್ ಪಠ್ಯ ತೆಗೆದುಹಾಕಿದ್ದು ದೇಶಕ್ಕೆ ಅಪಮಾನ ಮಾಡಿದಂತೆ. ಕಾಂಗ್ರೆಸ್‌ನ ಒಬ್ಬನೇ ಒಬ್ಬ ಅಂಡಮಾನ್ ಜೈಲಿಗೆ ಹೋಗಿಲ್ಲ. ಕಾಂಗ್ರೆಸ್ ನವರಿಗೆ ಜೈಲೆಂದರೆ ರೆಸಾರ್ಟ ಆದಂತಾಗಿತ್ತು. ಮಧು ಬಂಗಾರಪ್ಪನವರು ನಾಲಿಗೆ ಬಿಗಿ ಹಿಡಿದು ಮಾತನಾಡಲಿ. ಸಾವರ್ಕರ್ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರರು. ಅವರ ಉಗುರಿನ ಯೋಗ್ಯತೆ ನಿಮಗಿಲ್ಲ. ಅವರ ಬಗ್ಗೆ ಮಾತನಾಡುವಾಗ ಎಚ್ಚರ ಇರಲಿ. ಇಲ್ಲವಾದರೆ ಕರ್ನಾಟಕದ ಜನ ಪಾಠ ಕಲಿಸಬೇಕಾಗುತ್ತದೆ. ಮಧು ಬಂಗಾರಪ್ಪನವರಿಗೆ ಎಚ್ಚರಿಕೆ ಕೊಡುತ್ತೇನೆ. ಗೋ ಹತ್ಯಾ ಕಾಯ್ದೆ ಮತ್ತು ಮತಾಂತರ ನಿಷೇಧ ಕಾಯ್ದೆ ಹಿಂದಕ್ಕೆ ಪಡೆಯುವ ಬಗ್ಗೆ ಹೇಳುತ್ತಿದ್ದಾರೆ. ಇವರಿಗೆ ಗೋವಿನ ಶಾಪ ತಟ್ಟಿದೆ. ಕಾಯ್ದೆ ಹಿಂಪಡೆದರೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯ ತನಕ 3 ಹಿಂದುಗಳ ಹತ್ಯೆಯಾಗಿದೆ. ಬಿಜೆಪಿ ಭ್ರಷ್ಟತೆಯಿಂದ ಕಾಂಗ್ರೆಸ್ ಗೆದ್ದಿದೆ. ಕಾಂಗ್ರೆಸ್ ಬೇಕು ಎಂದು ಜನ ಆರಿಸಿದ್ದಲ್ಲ. ಹಿಂದುಗಳ ಮೇಲೆ ದೌರ್ಜನ್ಯ, ಹಿಂದು ಸಂಘಟನೆ ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಜೈನ ಮುನಿಗಳ ಹತ್ಯೆ ತಾಲಿಬಾನ್ ಮಾದರಿಯಲ್ಲಿ ಆಗಿದೆ. ಇದು ಕಾಂಗ್ರೆಸ್ ಕೊಡುಗೆ, ಹಿಂದು ವಿರೋಧಿ ನೀತಿ ಎನ್ನಬಹುದು. ಕಾಂಗ್ರೆಸ್‌ಗೆ ನೆಗೆಟಿವ್ ಓಟು ಇದೆ ಎನ್ನುವುದು ನೆನಪಿಡಬೇಕು. ದೇಶ, ಧರ್ಮಕ್ಕಾಗಿ ಹೋರಾಡಿದವರನ್ನು ಕೀಳುಮಟ್ಟದಲ್ಲಿ ನೋಡುವುದು ಕಾಂಗ್ರೆಸ್ ನೀತಿ* ಎಂದರು.
ಗಾಂಧಿ, ನೆಹರು ಅಹಿಂಸೆಯಿಂದ ದೇಶ ಸ್ವಾತಂತ್ರ್ಯವಾಗಿದೆ ಎನ್ನುವುದು ತಪ್ಪು. ಸಾರ್ವಕರ್ ಪಠ್ಯವನ್ನು ತೆಗೆದುಹಾಕಿರುವುದು ಅಕ್ಷಮ್ಯ ಅಫರಾದ. ಸ್ವಾತಂತ್ರಕ್ಕಾಗಿ 23 ವರ್ಷ ಅಂಡಮಾನ್ ಜೈಲಿನಲ್ಲಿ ಕಳೆದು ಬಂದವರು ಸಾರ್ವಕರ್. ನೆಹರು, ಗಾಂಧಿ ಅಂತಹ ಜೈಲಿನಲ್ಲಿ ಒಂದು ದಿನ ಕಳೆದವರಲ್ಲ. ಅವರಿಗೆ ಸಾವರ್ಕರ್ ಅವರ ಉಗುರಿನ ಯೋಗ್ಯತೆ ಇಲ್ಲ ಎಂದರು.
ಒಂದು ದೇಶ, ಒಂದೇ ಕಾನೂನು ಇರಬೇಕಾದುದು ಸೂಕ್ತ. ಸಮಾನ ನಾಗರಿಕ ಕಾಯ್ದೆ ಇಲ್ಲದಿದ್ದರೆ ಏಕತೆ, ಸಮಾನತೆ ಎನ್ನುವುದು ಧೂಳಿಪಟವಾಗಲಿದೆ. ಪ್ರತಿಯೊಬ್ಬರಿಗೂ ಇದು ಆಗಬೇಕು, ಬರಬೇಕು ಎನ್ನುವುದಿದೆ. ಮುಸ್ಲಿಂ ಮಂಡಳ ಮಾತ್ರ ವಿರೋಧಿಸುತ್ತಿದೆ. ಸಮಾನ ನಾಗರಿಕ ಕಾಯ್ದೆ ಬಂದರೆ ಅವರಿಗೆ ಸಮಾಜದ ಹಿಡಿತ ತಪ್ಪುತ್ತದೆ ಎನ್ನುವ ಕಾರಣಕ್ಕೆ ವಿರೋಧ ಮಾಡುತ್ತಿದ್ದಾರೆ. ಮುಸ್ಲಿಂರಲ್ಲಿ ದತ್ತು, ಉತ್ತರಾಧಿಕಾರಿ, ಮಹಿಳೆಗೆ ಆಸ್ತಿ ಹಕ್ಕು ಇಲ್ಲ. ಇವೆಲ್ಲ ಕಾರಣಕ್ಕೆ ವಿರೋಧಿಸುತ್ತಿದ್ದಾರೆ. ಶೇ.68 ರಷ್ಟು ಮುಸ್ಲಿಂ ಮಹಿಳೆಯರು ಸಮಾನ ನಾಗರಿಕ ಕಾಯ್ದೆಗೆ ತಮ್ಮ ಸಹಮತ ನೀಡಿದ್ದಾರೆ. ಗೋವಾದಲ್ಲಿ ಪೋರ್ಚುಗೀಸರು 1889 ರಲ್ಲಿ ಸಮಾನ ನಾಗರಿಕ ಕಾಯ್ದೆ ತಂದಿದ್ದರು. ಗೋವಾದಲ್ಲಿ ಇಂದಿಗೂ ಸಮಾನ ನಾಗರಿಕ ಕಾಯ್ದೆ ಜಾರಿಯಲ್ಲಿದೆ. ಒಂದು ರಾಜ್ಯದಲ್ಲಿ ಈ ಕಾನೂನು ಉತ್ತಮವಾಗಿ ನಡೆದಿದ್ದರೆ ಬೇರೆ ರಾಜ್ಯದಲ್ಲಿ ಈ ಕಾನೂನು ಸಮಸ್ಯೆ ಹೇಗೆ, ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಸಮಾನ ನಾಗರಿಕ ಸಂಹಿತೆ ಕಾಯ್ದೆ ಜಾರಿಗೆ ಜನರ ಮಾಹಿತಿ ಕೇಳಿದೆ. ಶ್ರೀರಾಮ ಸೇನೆ 5 ಲಕ್ಷ ಜನರ ಸಹಿ ಸಂಗ್ರಹದ ಗುರಿ ಹೊಂದಿದೆ. ಅದನ್ನು ಪ್ರಧಾನ ಮಂತ್ರಿಗಳಿಗೆ ನೀಡಲು ನಾವು ಕ್ರಮ ಕೈಗೊಳ್ಳುತ್ತೇವೆ. ಸಂವಿಧಾನದ 45 ನೇ ವಿಧಿಯ ಅಡಿಯಲ್ಲಿ ಇದು ಸ್ಪಷ್ಟವಾಗಿದೆ. 76ವರ್ಷ ಈ ಕಾಯ್ದೆ ಜಾರಿ ಮಾಡದಿರಲು ಮುಸ್ಲಿಂ ತುಷ್ಟೀಕರಣ ಕಾರಣ ಎಂದು ಹೇಳಿದರು.
ಮುಸ್ಲಿಂಮರು ಷರಿಯಾ ಕಾನೂನು ಇರುವುದರಿಂದ ಅದನ್ನು ಬಿಡಬೇಕಾಗುತ್ತದೆ ಎನ್ನುವುದಕ್ಕೆ ವಿರೋಧಿಸುತ್ತಾರೆ. ಕಳ್ಳತನ, ಅತ್ಯಾಚಾರಗಳಿಗೆ ಷರಿಯಾ ಕಾನೂನಿನಂತೆ ವ್ಯವಹರಿಸುವುದಿಲ್ಲ. ಷರಿಯಾ ಕಾನೂನಿನಂತೆ ಆಧುನಿಕತೆ ಬಳಸುವಂತಿಲ್ಲ. ಷರಿಯಾ ಪಾಲಿಸಿದರೆ ತಾಲಿಬಾನ್ ಆಗುತ್ತದೆ, ಎಂದರು.
ಶಿರಸಿಯ ಲಿಂಗದಕೋಣ ಕಲ್ಯಾಣ ಮಂಟಪದಲ್ಲಿ ಆರ್‌ಎಸ್‌ಎಸ್ ದಕ್ಷಿಣ ಕ್ಷೇತ್ರೀಯ ಪ್ರಚಾರಕರಾಗಿದ್ದ ಕೇಶವ ಹೆಗಡೆ ಅವರ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಮುತಾಲಿಕ ಪಾಲ್ಗೊಂಡರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ