*ಬಿಜೆಪಿ ಪ್ರತಿಭಟನೆ ವೇಳೆ ಕುಸಿದು ಬಿದ್ದ ಶಾಸಕ ಯತ್ನಾಳ್; ಆಸ್ಪತ್ರೆಗೆ ದಾಖಲು*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭೆಯಿಂದ ಬಿಜೆಪಿ 10 ಶಾಸಕರನ್ನು ಅಮಾನತುಗೊಳಿಸಿ ಸ್ಪೀಕರ್ ಯು.ಟಿ.ಖಾದರ್ ಆದೇಶ ಹೊರಡಿಸುತ್ತಿದ್ದಂತೆ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸ್ವಸ್ಥರಾಗಿರುವ ಘಟನೆ ನಡೆದಿದೆ.
ರಾಜ್ಯ ಸರ್ಕಾರ ಶಿಷ್ಠಾಚಾರ ಉಲ್ಲಂಘನೆ ಮಾಡಿ ಐಎ ಎಸ್ ಅಧಿಕಾರಿಗಳನ್ನು ವಿಪಕ್ಷ ನಾಯಕರ ಸಭೆಗೆ ನೇಮಕ ಮಾಡಿದೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿ ಹೈಡ್ರಾಮಾ ಮಾಡಿದ್ದಾರೆ. ಸದನದಲ್ಲಿ ವಿಧೇಯಕ ಹರಿದು ಡೆಪ್ಯೂಟಿ ಸ್ಪೀಕರ್ ಮೇಲೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದನಕ್ಕೆ ಅಗೌರ ತೋರಿದ ಹಿನ್ನೆಲೆಯಲ್ಲಿ ಸ್ಪೀಕರ್ ಹತ್ತು ಬಿಜೆಪಿ ಸದಸ್ಯರನ್ನು ಅಮಾನತು ಮಾಡಿ ಆದೆಶ ಹೊರಡಿಸಿದ್ದಾರೆ.
ಸ್ಪೀಕರ್ ಆದೇಶ ಹೊರಬೀಳುತ್ತಿದ್ದಂತೆ ಸದನಕ್ಕೆ ಆಗಮಿಸಿದ ಮಾರ್ಷಲ್ ಗಳು ಅಮಾನತುಗೊಂಡ ಬಿಜೆಪಿ ಸದಸ್ಯರನ್ನು ಸದನದಿಂದ ಹೊತ್ತುಕೊಂಡು ಬಂದು ಹೊರಹಾಕಿದ್ದಾರೆ. ಈ ವೇಳೆ ಬಿಜೆಪಿ ಇತರ ಸದಸ್ಯರು ತಡೆಯಲು ಯತ್ನಿಸಿದ್ದಾರೆ. ಆದರೂ ಸಾಧ್ಯವಾಗಿಲ್ಲ.
ಇದೇ ವೇಳೆ ಬಿಜೆಪಿ ಸದಸ್ಯರು ವಿಧಾನಸೌಧದಲ್ಲಿ ಸ್ಪೀಕರ್ ಕಚೇರಿ ಮೆಟ್ಟಿಲುಗಳ ಮೇಲೆ ಕುಳಿತು ಧರಣಿ ನಡೆಸಿದ್ದಾರೆ. ಈ ವೇಳೆ ಬಿಜೆಪಿ ಶಾಸಕ ಯತ್ನಾಳ್, ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ಬಿಪಿ ಏರುಪೇರಾದ ಕಾರಣ ಯತ್ನಾಳ್ ಅಸ್ವಸ್ಥಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ತಕ್ಷಣ ಅವರನ್ನು ವೀಲ್ ಚೇರ್ ಮೂಲಕ ಕರೆದೊಯ್ದು ಆಂಬುಲೆನ್ಸ್ ಗೆ ಶಿಫ್ಟ್ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸರ್ಕಾರದ ವಿರುದ್ಧ ಶಿಷ್ಟಾಚಾರ ಆರೋಪ ಮಾಡಿ, ಸದನದಲ್ಲಿ ಪ್ರತಿಭಟನೆಗೆ ಇಳಿದಿದ್ದ ಬಿಜೆಪಿ ವರ್ತನೆಗೆ ಕೆಲ ಶಾಸಕರನ್ನು ಸದನದಿಂದ ಸ್ಪೀಕರ್ ಅಮಾನತು ಮಾಡಿದ ಬೆನ್ನಲ್ಲೇ ಬಿಜೆಪಿ ಪ್ರತಿಭಟನೆ ಮತ್ತೊಂದು ತಿರುವು ಪಡೆದುಕೊಂಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ