Kannada NewsKarnataka NewsLatest

ಆಗಸ್ಟ್ 15 ರಿಂದ ಆಟೋ ಮೀಟರ್ ಕಡ್ಡಾಯ

ಆಗಸ್ಟ್  15 ರಿಂದ ಮೀಟರ್ ಕಡ್ಡಾಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 
ಬರುವ ಆಗಸ್ಟ್ 15 ರಿಂದಲೇ ಆಟೋಮೀಟರ್ ಕಡ್ಡಾಯವಾಗಿ ಅಳವಡಿಸಲು ಕ್ರಮಕೈಗೊಳ್ಳಲು ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಬಗ್ಗೆ ಆಟೋರಿಕ್ಷಾ ಚಾಲಕರ/ ಮಾಲೀಕರ ಸಂಘದ ಸಭೆ ಕರೆದು ಅವರ ಜತೆ ಚರ್ಚಿಸಿ  ಆಗಸ್ಟ್ 15 ರಿಂದ ಆಟೋಮೀಟರ್ ಕಡ್ಡಾಯಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ(ಜು.23) ನಡೆದ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪೊಲೀಸ್ ಆಯುಕ್ತರು, ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ತೂಕ ಮತ್ತು ಅಳತೆ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಆಟೋಚಾಲಕರ ಸಂಘಗಳ ಜತೆ ವಿಸ್ತ್ರತ ಚರ್ಚೆ ನಡೆಸಿದ ಬಳಿಕ ದರಪಟ್ಟಿಯನ್ನು ಒಂದು ವಾರದಲ್ಲಿಯೇ ಅಂತಿಮಗೊಳಿಸಬೇಕು ಎಂದು ಹೇಳಿದರು.
ಆಗಸ್ಟ್ 15 ರಿಂದ ಪ್ರಿಪೇಡ್ ಆಟೋ ಸೇವೆ:
ಆಟೋಮಿಟರ್ ಕಡ್ಡಾಯಗೊಳಿಸುವುದರ ಜತೆಗೆ ಆಗಸ್ಟ್ 15ರಿಂದಲೇ ಬೆಳಗಾವಿ ನಗರದ ರೈಲು ನಿಲ್ದಾಣ ಮತ್ತು ಬಸ್ ನಿಲ್ದಾಣಗಳಿಂದ ಪ್ರಿಪೇಡ್ ಆಟೋ ವ್ಯವಸ್ಥೆ ಕಲ್ಪಿಸಲು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಸೂಚನೆ ನೀಡಿದರು.
ಈ ಬಗ್ಗೆ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಪೊಲೀಸ್ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
 ಆಟೋಮೀಟರ್ ಕಡ್ಡಾಯಗೊಳಿಸಿದ ಮೇಲೆ ನಿರಂತರವಾಗಿ ನಿಗಾ ವಹಿಸಲು ಅಗತ್ಯ ಸಿಬ್ಬಂದಿ ನಿಯೋಜನೆಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲು ತಿಳಿಸಿದರು.
ಆಟೋ ಪರವಾನಿಗೆ ಅಮಾನತು:
ನಗರದಲ್ಲಿ ಮಿತಿಗಿಂತ ಜಾಸ್ತಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ 121 ಆಟೋಗಳ ಪರವಾನಿಗೆಯನ್ನು ತಾತ್ಕಾಲಿಕವಾಗಿ ಅಮಾನತು ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಮಿತಿಗಿಂತ ಹೆಚ್ಚು ಮಕ್ಕಳನ್ನು ಕರೆದೊಯ್ಯುವುದನ್ನು ನಿಯಂತ್ರಿಸುವುದಕ್ಕಾಗಿ ಅಮಾನತು ನಿರ್ಧಾರ ಮಾಡಲಾಗಿದೆ. ನಿಯಮ ಪಾಲಿಸದೇ ಇರುವ ಆಟೋಚಾಲಕರ ವಿರುದ್ಧ ನಿಯಮಾವಳಿ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪರ್ಮಿಟ್ ನೀಡುವಾಗ ಕಡ್ಡಾಯವಾಗಿ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.
ರಾಮದುರ್ಗದಲ್ಲಿ ಹೊಸದಾಗಿ ಆರಂಭಗೊಂಡಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸ್ವತಂತ್ರ ಕರ್ತವ್ಯ ನಿಭಾಯಿಸಲು ವಿವಿಧ ಅಧಿಕಾರಗಳನ್ನು ಪ್ರತ್ಯಾಯೋಜಿಸುವಂತೆ ನಿರ್ದೇಶನ ನೀಡಿದರು.
ಹದಿನೈದು ವರ್ಷ ಮೀರಿರುವ ಎಲ್ಲ ಬಗೆಯ ಪ್ರಯಾಣಿಕರ ವಾಹನಗಳನ್ನು ಪಟ್ಟಿ ಮಾಡಿ, ಪರಿಶೀಲನೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ.
ನಿಯಮಾವಳಿ ಪ್ರಕಾರ ಅಂತಹ ವಾಹನಗಳ ಸಂಚಾರ ನಿರ್ಬಂಧಕ್ಕೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ತಿಳಿಸಿದರು.
ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆಯನ್ನು ಶಿವಾನಂದ ಮಗ್ದುಂ ವಿವರಿಸಿದರು.
6000 ಕ್ಕೂ ಅಧಿಕ ಆಟೋಗಳು ನಗರದಲ್ಲಿವೆ. ಅದರಲ್ಲಿ ಅಂದಾಜು ನಾಲ್ಕು ಸಾವಿರ ಆಟೋಗಳಿಗೆ ಮೀಟರ್ ಜೋಡಣೆ ಮಾಡಲಾಗಿದೆ ಎಂದರು.
ಕೇಂದ್ರ ಬಸ್ ನಿಲ್ದಾಣದಿಂದ 500 ಮೀಟರ್ ಸುತ್ತಳತೆಯಲ್ಲಿ ಖಾಸಗಿ ಬಸ್/ಟೆಂಪೋಗಳ ನಿಲ್ದಾಣವನ್ನು ತೆರವುಗೊಳಿಸುವಂತೆ ಪೊಲೀಸ್ ಆಯುಕ್ತರಾದ ಡಾ.ಬಿ.ಎಸ್.ಲೋಕೇಶ್ ಕುಮಾರ್ ಸೂಚನೆ ನೀಡಿದರು.
ಆಟೋ ಮೇಲೆ ಪರ್ಮಿಟ್ ನಂಬರ್:
ರಸ್ತೆ ಸುರಕ್ಷತಾ ಅನುದಾನದಲ್ಲಿ ಪ್ರತಿ ಆಟೋರಿಕ್ಷಾದ ಮೇಲೆ ಪರ್ಮಿಟ್ ಸಂಖ್ಯೆ ಮತ್ತಿತರ ವಿವರಗಳನ್ನು ನಮೂದಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಪ್ರಾದೇಶಿಕ ಸಾರಿಗೆ ಕಚೇರಿಯಿಂದ ನೀಡಲಾಗುತ್ತಿರುವ ಪರವಾನಿಗೆ ಸಂಖ್ಯೆ ಹಾಗೂ ಮತ್ತಿತರ ವಿವರಗಳನ್ನು ಪ್ರತಿ ಆಟೋದ ಮೇಲೆ ಬರೆಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಬುಡಾ ಆಯುಕ್ತ ಪ್ರೀತಂ ನಸಲಾಪುರೆ ಮತ್ತಿತರರು ಉಪಸ್ಥಿತರಿದ್ದರು.
ನಗರದಲ್ಲಿ ಹೆಚ್ಚಾಗಿರುವುದರಿಂದ ಆಟೋಗಳ ಸಂಖ್ಯೆ, ಆಟೋ ಪರ್ಮಿಟ್ ಬಂದ್ ಮಾಡಲು ಆಟೋ ಚಾಲಕರ ಸಂಘದ ಪದಾಧಿಕಾರಿಗಳ ಮನವಿ ಮಾಡಿಕೊಂಡರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button