ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಇತ್ತೀಚೆಗೆ ಗೋವಾಗೆ ಭೇಟಿ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜಾಕ್ ರಸೆಲ್ ಟೆರಿಯರ್ ನಾಯಿಮರಿಯೊಂದಿಗೆ ದೆಹಲಿಗೆ ಹಿಂದಿರುಗಿರುವುದು ವಿಶೇಷ.
ಹೌದು ಎರಡು ದಿನಗಳ ಹಿಂದೆ ಗೋವಾಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಜಾಕ್ ರಸೆಲ್ ಟೆರಿಯರ್ ನಾಯಿಮರಿಯನ್ನು ಉಡುಗೊರೆಯಾಗಿ ಪಡೆದು ದೆಹಲಿಗೆ ತೆರಳಿದ್ದಾರೆ.
ಆಗಸ್ಟ್ 3ರಂದು ಗೋವಾದ ಮಪುಸಾ ಪಟ್ಟಣದ ಡಾಗ್ ಕೆನಲ್ ಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಸ್ಟಾನ್ಲಿ ಬ್ರಗಾಂಕಾ ಹಾಗೂ ಶಿವಾನಿ ಪಿತ್ರೆ ದಂಪತಿಯನ್ನು ಭೇಟಿಯಾಗಿದ್ದರು. ಈ ವೇಳೆ ರಾಹುಲ್ ಗಾಂಧಿಯವರಿಗೆ ಜಾಕ್ ರಸೆಲ್ ಟೆರಿಯರ್ ಒಂದು ನಾಯಿಮರಿಯನ್ನು ದಂಪತಿ ಉಡುಗೊರೆಯಾಗಿ ನೀಡಿದ್ದರು. ಈ ವೇಳೆ ರಾಹುಲ್ ಗಾಂಧಿ ಎರಡು ನಾಯಿಮರಿಗಳನ್ನು ನೀಡುವಂತೆ ಕೇಳಿದ್ದಾರೆ. ಅದಕ್ಕೆ ಎರಡು ನಾಯಿಮರಿಗಳನ್ನು ದೆಹಲಿಗೆ ಕಳುಹಿಸಿಕೊಡುವುದಾಗಿ ಸ್ಟಾನ್ಲಿ ಬ್ರಗಂಕಾ ಹಾಗೂ ಶಿವಾನಿ ದಂಪತಿ ತಿಳಿಸಿದ್ದಾರೆ.
ಗೋವಾದ ಮಪುಸಾ ಡಾಗ್ ಕೆನಲ್ ಬಗ್ಗೆ ಈ ಹಿಂದೆಯೇ ತಿಳಿದುಕೊಂಡಿದ್ದ ರಾಹುಲ್ ಗಾಂಧಿ, ಇತ್ತೀಚೆಗೆ ತಮ್ಮ ಪ್ರತಿನಿಧಿಯನ್ನೂ ಕಳುಹಿಸಿದ್ದರಂತೆ. ಆದರೆ ಸ್ಟಾನ್ಲಿ ಹಾಗೂ ಶಿವಾನಿ ದಂಪತಿ ರಾಹುಲ್ ಗಾಂಧಿಯವರೇ ಸ್ವತ: ಬರಲಿ ಅವರನ್ನು ಖುದ್ದು ನೋಡಬೇಕು ಎಂದು ಹೇಳಿದ್ದರಂತೆ. ಆಗಸ್ಟ್ 2ರಂದು ಗೋವಾಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿ ಆಗಸ್ಟ್ 3ರಂದು ಬೆಳಿಗ್ಗೆ ಉತ್ತರ ಗೋವಾದ ಮೋಪಾದಲ್ಲಿರುವ ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗ ಮಧ್ಯೆ ಮಾಪುಸಾ ಪಟ್ಟಣಕ್ಕೆ ತೆರಳಿದ್ದಾರೆ. ಈ ವೇಳೆ ಡಾಗ್ ಕೆನಲ್ ಗೆ ಭೇಟಿ ನೀಡಿದ್ದಾರೆ. ರಾಹುಲ್ ಗಾಂಧಿಯವರನ್ನು ಕಂಡು ದಂಪತಿ ಅಚ್ಚರಿಗೊಂಡಿದ್ದಾರೆ. ಈ ವೇಳೆ ಜಾಕ್ ರಸೆಲ್ ಟೆರಿಯರ್ ನಾಯಿಮರಿಯನ್ನು ಗಿಫ್ಟ್ ಆಗಿ ಪಡೆದ ರಾಹುಲ್ ಗಾಂಧಿ ಅವುಗಳೊಂದಿಗೆ ದೆಹಲಿಗೆ ತೆರಳಿದ್ದಾರೆ.
ಈ ಬಗ್ಗೆ ಶಿವಾನಿ ಪಿತ್ರೆ ಸಂತಸ ಹಂಚಿಕೊಂಡಿದ್ದು, ರಾಷ್ಟ್ರೀಯ ಪಕ್ಷವೊಂದರ ನಾಯಕರಾಗಿರುವ ರಾಹುಲ್ ಗಾಂಧಿ ಸಾಮಾನ್ಯ ವ್ಯಕ್ತಿಯಂತೆ ತುಂಬಾ ಸಿಂಪಲ್ ಆಗಿದ್ದರು. ಅವರನ್ನು ಕಂಡು ತುಂಬಾ ಖುಷಿಯಾಯಿತು. ಕೆಲ ಸಮಯ ನಮ್ಮ ಜೊತೆ ಇದ್ದು ಬಳಿಕ ದೆಹಲಿಗೆ ವಾಪಸ್ ಆಗಿದ್ದಾರೆ ಎಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ