Kannada NewsKarnataka News

ಮಂಜೂರಾದ ಕಾಮಗಾರಿ ಆರಂಭಿಸಿ; ಪ್ರತಿಭಟನೆ

ಮಂಜೂರಾದ ಕಾಮಗಾರಿ ಆರಂಭಿಸಿ; ಪ್ರತಿಭಟನೆ


ಪ್ರಗತಿವಾಹಿನಿ ಸುದ್ದಿ, ಮೂಡಲಗಿ:

ಮೂಡಲಗಿ ಪುರಸಭೆಯ ೨೦೧೮-೧೯ ಸಾಲಿನ ಅನುದಾನದಲ್ಲಿ ಮಂಜೂರಾಗಿ ಟೆಂಡರ್ ಆಗಿರುವ ಮತ್ತು ೨೦೧೯-೨೦ನೇ ಸಾಲಿನ ಅನುದಾನದಲ್ಲಿ ಕ್ರಿಯಾ ಯೋಜನೆಯಲ್ಲಿ ಮಂಜೂರಾದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿ ಪುರಸಭೆಯ ಬಿಜೆಪಿ ಸದಸ್ಯರು ಮತ್ತು ಸಾರ್ವಜನಿಕರು ಗುರುವಾರ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಪ್ರತಿಭಟಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪುರಸಭೆ ಮಾಜಿ ಸದಸ್ಯ ಹಾಗೂ ದಲಿತ ಮುಖಂಡ ರಮೇಶ ಸಣ್ಣಕ್ಕಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಕಳೆದ ೧೫ ವರ್ಷಗಳಲ್ಲಿ ಮೂಡಲಗಿ ಪಟ್ಟಣದ ಅಭಿವೃದ್ಧಿಗೆ ನೂರಾರು ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದೆ. ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ಪಕ್ಷಪಾತ ಮಾಡಿಲ್ಲ.

ಆದರೆ ಪಟ್ಟಣದ ಕೆಲವೇ ಕೆಲವು ಸ್ವಾರ್ಥ ಮುಖಂಡರು ಅಭಿವೃದ್ಧಿ ಸಹಿಸದೆ ವಿನಾಃಕಾರಣ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಂತವರಿಗೆ ಕಳೆದ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸಿದ್ದರೂ ಬುದ್ದಿ ಬಂದಿಲ್ಲ. ಅಲ್ಲದೇ ಮೂಡಲಗಿಗೆ ಬರುವ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ವಿರೋಧಿಗಳ ಆರೋಪ ನಿರಾಧಾರ:

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಮಾದರ, ಡಾ: ಎಸ್.ಎಸ್.ಪಾಟೀಲ, ಶಿವು ಚಂಡಕಿ, ಹನಮಂತ ಗುಡ್ಲಮನಿ, ರಾವತ ಝಂಡೇಕುರಬರ, ಮಲ್ಲು ಯಾದವಾಡ ಮತ್ತಿತರರು ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಾಮರ್ಥ್ಯದಿಂದಲೇ ಮೂಡಲಗಿ ಪಟ್ಟಣಕ್ಕೆ ಹೊಸ ತಾಲೂಕು ಸ್ಥಾನ ಮಾನ ದೊರೆತಿದೆ.

ಪುರಸಭೆಗೆ ಸರಕಾರದಿಂದ ಹೆಚ್ಚಿನ ಅನುದಾನ ತಂದಿದ್ದಾರೆ, ಪ್ರತಿ ವಾರ್ಡಗಳಲ್ಲೂ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದಾರೆ, ಆದರೆ ವಿರೋಧಿಗಳು ಕೆಲವೊಂದು ವಾರ್ಡಗಳಲ್ಲಿ ಅಭಿವೃದ್ಧಿ ಮಾಡಿಲ್ಲವೆಂಬ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಅವರಿಗೆ ಜನರ ಹಿತಾಸಕ್ತಿ ಮುಖ್ಯವಲ್ಲ. ಕೇವಲ ಸ್ವಾರ್ಥ ಸಾಧನೆಗಾಗಿ ಹಾಗೂ ಪ್ರಚಾರಕ್ಕಾಗಿ ಧರಣಿ-ಸತ್ಯಾಗ್ರಹ ಮಾಡುತ್ತಿದ್ದಾರೆ ಎಂದು  ಹರಿಹಾಯ್ದರು.

ಕಾಮಗಾರಿ ಯಥಾವತ್ತಾಗಿ ಮುಂದುವರಿಸಿ:

ಮೂಡಲಗಿ ಪುರಸಭೆ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಮಂಜೂರಾದ ಕಾಮಗಾರಿಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಯಥಾವತ್ತಾಗಿ ಮುಂದುವರಿಸಬೇಕು. ಈ ಕಾಮಗಾರಿಗಳನ್ನು ಕೈಗೊಳ್ಳುವುದನ್ನು ವಿಳಂಬ ಅಥವಾ ರದ್ದು ಮಾಡಿದರೆ ಸಾರ್ವಜನಿಕರೊಂದಿಗೆ ಸೇರಿಕೊಂಡು ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

೨೦೧೯-೨೦ ಸಾಲಿನ ಅನುದಾನದಲ್ಲಿ ಮೂಡಲಗಿ ಪುರಸಭೆ ಅಧಿಕಾರಿಗಳು ಯಾವುದೇ ತಾರತಮ್ಯ ಮಾಡದೇ ಸಾರ್ವಜನಿಕರಿಗೆ ಮೂಲ ಸೌಕರ್ಯಗಳನ್ನು  ಒದಗಿಸಿದ್ದಾರೆ. ಆದರೆ ಅಭಿವೃದ್ಧಿ ಸಹಿಸದ ಕೆಲವು ಸದಸ್ಯರು ತಮ್ಮ ವಾರ್ಡುಗಳಲ್ಲಿ ಯಾವುದೇ ಕೆಲಸಗಳು ನಡೆದಿಲ್ಲ ಎಂದು ಧರಣಿ ಹೂಡಿರುವುದು ರಾಜಕೀಯ ಪ್ರೇರಿತವಾಗಿದೆ ಎಂದು ಪ್ರತಿಭಟನಾಕಾರರು ಇದೇ ಸಂಧರ್ಭದಲ್ಲಿ ದೂರಿದರು.

ಮನವಿ ಅರ್ಪಣೆ:

೨೦೧೮-೧೯ನೇ ಸಾಲಿನ ಅನುದಾನದಲ್ಲಿ ಮುಂಜೂರಾಗಿ ಟೆಂಡರ್ ಆಗಿರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಒತ್ತಾಯಿಸಿ ಪುರಸಭೆಯ ಬಿಜೆಪಿಯ ಸದಸ್ಯರು ಮತ್ತು ಸಾರ್ವಜನಿಕರು ಬೈಲಹೊಂಗಲ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಪುರಸಭೆ ಮಾಜಿ ಅಧ್ಯಕ್ಷರಾದ ವೀರಣ್ಣಾ ಹೊಸುರ, ರಾಮಣ್ಣಾ ಹಂದಿಗುಂದ, ರವೀಂದ್ರ ಸಣ್ಣಕ್ಕಿ, ಮುಖಂಡರಾದ ಆರ್.ಪಿ.ಸೋನವಾಲ್ಕರ, ನಿಂಗಪ್ಪ ಪಿರೋಜಿ, ಸಂತೋಷ ಸೋನವಾಲ್ಕರ, ಅಜೀಜ ಡಾಂಗೆ, ಅಪ್ಪಾಸಾಹೇಬ ಹೊಸಕೋಟಿ, ಬಸವಪ್ರಭು ನಿಡುಗುಂದಿ,

ವಿಜಯ ಸೋನವಾಲ್ಕರ, ಜಯಾನಂದ ಪಾಟೀಲ, ಶ್ರೀಶೈಲ್ ಬಳಿಗಾರ, ನಿಂಗಪ್ಪ ಮುಗಳಖೋಡ, ಪ್ರಭು ಬಂಗೇನ್ನವರ, ಮರೇಪ್ಪ ಮರೆಪ್ಪಗೋಳ, ಮಲ್ಲಿಕ ಹುಣಶ್ಯಾಳ, ರಾಘವೇಂದ್ರ ಪಾಟೀಲ, ಅನ್ವರ ನದಾಫ್, ಹನಮಂತ ಸತರಡ್ಡಿ, ಪಾಂಡು ಮಹೇಂದ್ರಕರ, ಬಸವರಾಜ ಶೆಕ್ಕಿ, ಹನಮಂತ ಪೂಜೇರಿ, ಕೆ.ಬಿ.ಪಾಟೀಲ, ರಾಘು ಸವಳೇಕರ,

ಪುರಸಭೆ ಸದಸ್ಯರಾದ ಖುರಶಾದ ನಧಾಪ್, ಸುಭಾಸ ಸಣ್ಣಕ್ಕಿ, ಮಲ್ಲವ್ವ ಝಂಢೇಕುರಬರ, ಮರೆಂಬಿ ಹೂಗಾರ, ಹುಸೇನಸಾಬ ಶೇಖ, ಅಬ್ದುಲಗಪಾರ ಡಾಂಗೆ, ಬೀಮವ್ವ ಪೂಜೇರಿ, ಗಂಗವ್ವ ಮುಗಳಖೋಡ, ಆನಂದ ಟಪಾಲ, ಯಲ್ಲವ್ವ ಹಳ್ಳೂರ ಮತ್ತಿತರರು ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button