Belagavi NewsBelgaum NewsKannada NewsKarnataka NewsLatestPolitics

*ಕಾಮಗಾರಿಗಳ ಕುರಿತು ಅಧ್ಯಯನಕ್ಕೆ 4 ತಂಡಗಳ ರಚನೆ; ಸಿಎಂ ಸಿದ್ದರಾಮಯ್ಯ*

ವರದಿ ಬಂದ ಬಳಿಕ ಗುತ್ತಿಗೆದಾರರಿಗೆ ಬಿಲ್ ಪಾವತಿ


ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಗುತ್ತಿಗೆದಾರರು ಒಳ್ಳೆಯ ಕೆಲಸ ಮಾಡಿದ್ದಾರೋ ಇಲ್ಲವೋ ಎಂದು ಬೆಂಗಳೂರಿನಲ್ಲಿ ಸರಕಾರ ನಾಲ್ಕು ತಂಡಗಳ ರಚನೆ ಮಾಡಿ ತನಿಖೆ ನಡೆಸುತ್ತಿದೆ. ವರದಿ ಬಂದ ಮೇಲೆ ಮುಂದಿನ ನಿರ್ಧಾರ ತಿಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ಸರಕಾರದಲ್ಲಿ ಎರಡ್ಮೂರು ವರ್ಷಗಳ ಕಾಲದ ಕಾಮಗಾರಿಯ ಬಾಕಿ ಹಣ ನೀಡಬೇಕು. ಅವರು ಹಣ ಕೊಡದೆ ಬಿಟ್ಟು ಹೋಗಿದ್ದಾರೆ. ನಾವು ಹಣ ಕೊಡಬೇಕು. ಅದರ ಬಗ್ಗೆ ಎರಡೂ ಮಾತಿಲ್ಲ. ಹಿಂದೆ 40% ಭ್ರಷ್ಟಾಚಾರ ಇರುವುದು ಮುಖ್ಯ ಚರ್ಚೆಯಾಗಿದೆ. ಗುತ್ತಿಗೆದಾರರು ಗುಣಮಟ್ಟದ ಕೆಲಸ ಮಾಡಿದ್ದಾರೆಯೋ ಇಲ್ಲವೋ ತಿಳಿಯುವುದು ಯಾವಾಗ? ಈಗಾಗಲೇ ಬೆಂಗಳೂರಿನಲ್ಲಿ ನಾಲ್ಕು ತಂಡದಿಂದ ತನಿಖೆ ನಡೆಸುತ್ತಿದ್ದೇವೆ. ಅದರ ವರದಿ ಬಂದ ಮೇಲೆ ತಪ್ಪು ಮಾಡಿಲ್ಲ ಎಂದರೆ ಗುತ್ತಿಗೆದಾರರ ಬಿಲ್ ಕೊಡುತ್ತೇವೆ. ತಪ್ಪು ಮಾಡಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಮೂರು ವರ್ಷ ಬಿಜೆಪಿಯವರು ಅಧಿಕಾರದಲ್ಲಿದ್ದರು. ಆಗ ಗುತ್ತಿಗೆದಾರರಿಗೆ ಬಿಲ್ ಕೊಡದವರು. ಈಗ ಅವರೊಂದಿಗೆ ಸೇರಿ ಏಕೆ ಹೋರಾಟ ಮಾಡುತ್ತಾರೆ. ಅವರಿಗೆ ಏನು ನೈತಿಕತೆ ಇದೆ. ಬಿಜೆಪಿಯವರು ವಿನಾಕಾರಣ ಸರಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಲೋಕಸಭಾ ಚುನಾವಣೆಯಲ್ಲಿ ಸೋಲುತ್ತೇವೆ ಎಂದು ಬಿಜೆಪಿಗೆ ಭಯ ಹುಟ್ಟಿಕೊಂಡಿದೆ. ನಮ್ಮ ಗ್ಯಾರಂಟಿ ಯೋಜನೆ ಜಾರಿಯಾದ ಮೇಲೆ ವಿನಾಕಾರಣ ಸರಕಾರದ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಯಿಂದ ಜನರು ಸಂತೋಷವಾಗಿದ್ದಾರೆ. ಗೃಹ ಲಕ್ಷ್ಮೀ ಯೋಜನೆಯನ್ನು ಬೆಳಗಾವಿಯಲ್ಲಿಯೇ ಈ ತಿಂಗಳು ಜಾರಿಗೆ ತರಲಿದ್ದೇವೆ. 1 ಕೋಟಿ 22 ಲಕ್ಷ ಕುಟುಂಬದ ಯಜಮಾನಿಯರಿಗೆ ಎರಡೂ ಸಾವಿರ ರೂ. ಕೊಡುವುದು ಬಹುದೊಡ್ಡ ಯೋಜನೆ. ಇದನ್ನು ಬಿಡುಗಡೆ ಮಾಡಲು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೂ ಆಹ್ವಾನಿಸಲಾಗಿದೆ ಎಂದರು.

ಬಿಜೆಪಿಯವರು ಅಧಿಕಾರದಲ್ಲಿದ್ದಾಗ ರಾಜ್ಯವನ್ನು ಆರ್ಥಿಕವಾಗಿ ಹಾಳು ಮಾಡಿ ಹೋಗಿದ್ದಾರೆ. ಭ್ರಷ್ಟಾಚಾರ, ಬೆಲೆ ಏರಿಕೆ, ಧರ್ಮ ರಾಜಕಾರಣ ಮಾಡಿದ್ದಾರೆ. ಕಾಂಗ್ರೆಸ್ ವಿಧಾನಸಭಾ ಚುನಾವಣೆಯಲ್ಲಿ 136 ಸ್ಥಾನ ಗೆದ್ದ ಮೇಲೆ ಅವರಿಗೆ ಭಯ ಹುಟ್ಟಿಕೊಂಡಿದೆ. ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನವನ್ನು ರಾಜ್ಯದಲ್ಲಿ ಗೆಲುವು ಸಾಧಿಸುತ್ತೇವೆ ಎಂದರು.

ಬೆಳಗಾವಿ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ನಮಗೆ ನ್ಯಾಯ ಸಿಕ್ಕಿಲ್ಲ. ಮರು ತನಿಖೆ ಮಾಡುವಂತೆ ಅವರ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಅದನ್ನು ಕಾನೂನು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತೇನೆ ಎಂದರು.

ಇನ್ನು ಬೆಳಗಾವಿ ಉದ್ಯಮಬಾಗ ಪೊಲೀಸರು ವಿಕಲಚೇತನನ ಮೇಲೆ ಹಲ್ಲೆ ಮಾಡಿರುವ ಕುರಿತು ಪಿಎಸ್ ಐ ಮೇಲೆ ಪೊಲೀಸ್ ಇಲಾಖೆ ತನಿಖೆ ಮಾಡಿ ತಪ್ಪು ಕಂಡು ಬಂದರೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ ಎಂದರು.

ಈ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಬೆಳಗಾವಿ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಕಾಂಗ್ರೆಸ್ ಯುವ ನಾಯಕ ಮೃಣಾಲ್‌ ಹೆಬ್ಬಾಳ್ಕರ್ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button