*ನವರಂಗಿ ನಾರಾಯಣ, ಕಳ್ಳರ ರಕ್ಷಣೆಯಲ್ಲಿ ಡಾಕ್ಟರೇಟ್: ಅಶ್ವಥ್ ನಾರಾಯಣ್ ಗೆ ಡಿಸಿಎಂ ತಿರುಗೇಟು*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇವರು ಅಶ್ವಥ್ ನಾರಾಯಣ ಅಲ್ಲ. ನವರಂಗಿ ನಾರಾಯಣ. ಕಳ್ಳರನ್ನು ರಕ್ಷಣೆ ಮಾಡುವಲ್ಲಿ ಇವರು ಡಾಕ್ಟರೇಟ್ ಮಾಡಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಸದಾಶಿವನಗರ ನಿವಾಸದ್ ಬಳಿ ಸುದ್ದಿಗಾರರೊಂದಿಗೆ ಮಾತನಡಿದ ಡಿಸಿಎಂ, ಡಿ.ಕೆ.ಶಿವಕುಮಾರ್ ಬೆಂಗಳೂರು ನಿರ್ನಾಮ ಸಚಿವರು ಎಂಬ ಅಶ್ವಥ್ ನಾರಾಯಣ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಡಾ.ಅಶ್ವತ್ಥನಾರಾಯಣ ಅಲ್ಲ, ನವರಂಗಿ ನಾರಾಯಣ ಎಂದು ತಿರುಗೇಟು ನೀಡಿದರು.
“ಅಶ್ವಥ್ ನಾರಾಯಣ್ ಅವರಿಗೆ ಪ್ರಾಮಾಣಿಕ ಗುತ್ತಿಗೆದಾರರ ರಕ್ಷಣೆ ಬಗ್ಗೆ ಚಿಂತೆ ಇಲ್ಲ. ಇದ್ದಿದ್ದರೆ ಅವರ ಕಾಲದಲ್ಲೇ ಬಿಲ್ ಪಾವತಿ ಮಾಡುತ್ತಿದ್ದರು. ಈಗ ತಮ್ಮದೇ ಆದ ಕೆಲವು ಬಿಜೆಪಿ ಗುತ್ತಿಗೆದಾರರನ್ನು ಎತ್ತಿ ಕಟ್ಟಿ ನಕಲಿ ಗುತ್ತಿಗೆದಾರರು, ಬೇನಾಮಿ ಕಳ್ಳರ ರಕ್ಷಣೆಗೆ ನಿಂತಿದ್ದಾರೆ. ಅಶ್ವಥ್ ನಾರಾಯಣ ಕೃಪಾಪೋಷಿತ ನಾಟಕ ಮಂಡಳಿ ಆಟ ಜಾಸ್ತಿ ದಿನ ನಡೆಯಲ್ಲ. ಅವರು ಎಲ್ಲಿಗೆ ಬೇಕಾದರೂ ಹೋಗಲಿ. ಏನು ಬೇಕಾದರೂ ಮಾಡಲಿ. ಸದ್ಯದಲ್ಲೇ ದಾಖಲೆ ಸಮೇತ ಬಣ್ಣ ಬಯಲು ಮಾಡುತ್ತೇನೆ.
ರಾಮನಗರ ಕ್ಲೀನ್ ಮಾಡುತ್ತೇನೆ ಎಂದು ಬಂದವರು, ಜಿಲ್ಲೆಯಲ್ಲಿ ಅವರ ಪಕ್ಷವನ್ನೇ ಕ್ಲೀನ್ ಮಾಡಿದರು. ಆ ಮಾನಸಿಕ ಖಿನ್ನತೆಯಲ್ಲಿ ಅವರಿದ್ದಾರೆ. ಅಶ್ವತ್ಥ್ ನಾರಾಯಣ ಅವರು ತಮ್ಮ ಇಲಾಖೆಯಲ್ಲಿ ಹಾಗೂ ಬೆಂಗಳೂರಿನಲ್ಲಿ ಏನೆಲ್ಲಾ ಮಾಡಿದ್ದಾರೆ ಎಂಬ ವಿಚಾರವನ್ನು ಬಿಚ್ಚಿಟ್ಟಿಲ್ಲ. ಈ ಬಗ್ಗೆ ನಾನು ಈಗ ಮಾತನಾಡುವುದಿಲ್ಲ. ಸಮಯ ಬಂದಾಗ ಅವರ ಎಲ್ಲಾ ಅಕ್ರಮಗಳನ್ನು ಬಿಚ್ಚಿಡುತ್ತೇವೆ ಎಂದರು.
ಯಾರು ಎಷ್ಟು ಕೆಲಸ ಮಾಡಿದ್ದಾರೆ? ಹೇಗೆ ಮಾಡಿದ್ದಾರೆ? ಯಾರು ಯಾರನ್ನು ಹೇಗೆ ಎತ್ತಿಕಟ್ಟುತ್ತಿದ್ದಾರೆ? ಎಂಬುದು ಬಯಲಾಗಲಿದೆ. ಪ್ರಾಮಾಣಿಕ ಗುತ್ತಿಗೆದಾರರ ರಕ್ಷಣೆಗೆಂದೇ ಪ್ರಾಥಮಿಕ ತನಿಖೆ ಮಾಡಲೇಬೇಕು. ಅದನ್ನು ಸರ್ಕಾರ ಮಾಡುತ್ತಿದೆ. ಇದನ್ನು ತಪ್ಪಿಸಲು ಅವರು ಇಷ್ಟೆಲ್ಲಾ ಆಟವಾಡುತ್ತಿದ್ದಾರೆ. ಅವರು ಎಲ್ಲಿಗೆ ಬೇಕಾದರೂ ಹೋಗಲಿ. ಏನು ಬೇಕಾದರೂ ಮಾಡಲಿ. ರಾಜ್ಯಪಾಲರಿಗೆ ಮಾತ್ರವಲ್ಲ ರಾಷ್ಟ್ರಪತಿ ಬಳಿಗೂ ಹೋಗಲಿ. ಯಾವುದೇ ಅಭಿಯಾನ ಮಾಡಲಿ ಎಂದರು.
ನಾನು ಈ ವಿಚಾರವಾಗಿ ಮೊನ್ನೆಯೇ ಮಾತನಾಡಬೇಕಿತ್ತು. ಆದರೆ ಬಿಬಿಎಂಪಿ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯದಲ್ಲಿ ಅಗ್ನಿ ಅವಘಡ ಸಂಭವಿಸಿತು. ಇಂದು ಪಕ್ಷದ ಸಭೆ ಇದೆ. ನಾಳೆ ಸ್ವಾತಂತ್ರ ದಿನಾಚರಣೆ ಇದೆ. ಹೀಗಾಗಿ ಈಗ ಮಾತನಾಡುವುದಿಲ್ಲ. ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ.”
ಒತ್ತಡದಿಂದಾಗಿ ಕೆಲವು ಗುತ್ತಿಗೆದಾರರು ನಿಮ್ಮ ವಿರುದ್ಧ ಮಾತನಾಡುತ್ತಿದ್ದಾರೆಯೇ ಎಂಬ ಪ್ರಶ್ನೆ ಕೇಳಿದಾಗ, “ಅದು ಸತ್ಯ. ನಾನು ಯಾರಿಗೂ ಗುತ್ತಿಗೆಯನ್ನೇ ನೀಡಿಲ್ಲ. ಹೀಗಿರುವಾಗ ನಾನು ಕಮಿಷನ್ ಕೇಳಲು ಹೇಗೆ ಸಾಧ್ಯ? ಗುತ್ತಿಗೆದಾರರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿದ ಕೆಲಸಗಳ ಬಿಲ್ ಪಾವತಿ ಬಗ್ಗೆ ಮನವಿ ಮಾಡಲು ನನ್ನನ್ನು ಭೇಟಿ ಮಾಡಿದ್ದಾರೆ. ಬಿಜೆಪಿ ಸರ್ಕಾರ ತನ್ನ ಅವಧಿಯಲ್ಲಿ ಯಾಕೆ ಈ ಗುತ್ತಿಗೆದಾರರ ಬಿಲ್ ಪಾವತಿ ಮಾಡಲಿಲ್ಲ? ಇಂದಿನ ಪಕ್ಷದ ಸಭೆ, ಸ್ವಾತಂತ್ರ್ಯ ದಿನ ಮುಗಿಯಲಿ. ನಂತರ ಬಿಜೆಪಿ ಸರ್ಕಾರದ ಅವಧಿಯ ಕಾಮಗಾರಿಗಳ ಬಗ್ಗೆ ಅಘಾತಕಾರಿ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ಬಿಜೆಪಿ ನಾಯಕರು ಗುತ್ತಿಗೆದಾರರನ್ನು ಹೇಗೆಲ್ಲಾ ಬಳಸಿಕೊಂಡು, ಅವರಿಗೆ ಅಪಮಾನ ಮಾಡುತ್ತಿದ್ದಾರೆ ಎಂಬುದನ್ನು ನೋಡಿದರೆ ಬೇಸರವಾಗುತ್ತದೆ” ಎಂದು ತಿಳಿಸಿದರು.
ಅಜ್ಜಯ್ಯನ ಮಠದಲ್ಲಿ ಪ್ರಮಾಣ ಮಾಡುವ ವಿಚಾರವಾಗಿ ಸಿ.ಟಿ ರವಿ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, “ಸಿ.ಟಿ. ರವಿಗೆ ಬುದ್ಧಿ ಭ್ರಮಣೆ ಆಗಿದೆ. ಅವರಿಗೆ ಈಗ ಬೇಕಿರೋದು ಉತ್ತಮ ಚಿಕಿತ್ಸೆ. ಅದನ್ನು ಕೊಡಿಸೋಣ.” ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ