*64ನೇ ವರ್ಷದಲ್ಲಿ ಮೂರು ಬಾರಿ ಮರುಜನ್ಮ; ಪಾರ್ಶ್ವವಾಯುವಾದಾಗ ನಿರ್ಲಕ್ಷ್ಯ ಮಾಡಬೇಡಿ; ಜನರಿಗೆ ಮಾಜಿ ಸಿಎಂ ಮನವಿ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಲಘು ಸ್ಟ್ರೋಕ್ ನಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಬೆಂಗಳೂರಿನ ಜಯನಗರ ಅಪೋಲೋ ಆಸೊಅತ್ರೆಯಿಂದ ಡಿಸ್ಚಾರ್ಜ್ ಆದ ಮಾಜಿ ಸಿಎಂ ಕುಮಾರಸ್ವಾಮಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಾರ್ಶ್ವವಾಯು ಬಗ್ಗೆ ಹಾಗೂ ತಕ್ಷಣ ಮಾಡಬೇಕಾದ ಕೆಲಸದ ಬಗ್ಗೆ ಜನರಿಗೆ ಸಲಹೆ ನೀಡಿದರು.
ಇಂದು ನಾನು ರಾಜಕೀಯ ಹೊರತುಪಡಿಸಿ ಎರಡು ವಿಷಯ ಮಾತನಾಡುತ್ತಿದ್ದೇನೆ. ಭಗವಂತನ ದಯೆ ಹಾಗೂ ನನ್ನ ತಂದೆ-ತಾಯಿ ಆಶಿರ್ವಾದದಿಂದ ಗುಣಮುಖನಾಗಿದ್ದೇನೆ. 64ನೇ ವರ್ಷದಲ್ಲಿ ಮೂರು ಬಾರಿ ಪುನರ್ಜನಮ ಪಡೆದಿದ್ದೇನೆ. ಅಂದು ನಾನು ತಕ್ಷಣ ಎಚ್ಚೆತ್ತುಕೊಳ್ಳದಿದ್ದರೆ ಇಂದು ನಿಮ್ಮ ಮುಂದೆ ಸಹಜವಾಗಿ ಮಾತನಾಡಲೂ ಆಗುತ್ತಿರಲಿಲ್ಲ. ದೇವರ ದಯೆಯಿಂದ ಗುಣಮುಖನಾಗಿದ್ದೇನೆ ಎಂದು ಹೇಳಿದರು.
ಆಗಸ್ಟ್ 30ರಂದು ಬೆಳಗಿನ ಜಾರ 2:30ರ ಸುಮಾರಿಗೆ ದೇಹದಲ್ಲಿ ಏನೋ ಬದಲಾವಣೆಯಾಗುತ್ತಿರುವುದು ಗಮನಕ್ಕೆ ಬಂತು. ತಕ್ಷಣ ಫ್ಯಾಮಿಲಿ ಡಾ. ಮಂಜುನಾಥ್ ಅವರಿಗೆ ಕರೆ ಮಾಡಿದೆ. ಅವರ ಸೂಚನೆ ಮೇರೆಗೆ ಕೂಡಲೇ ಆಸ್ಪತ್ರೆಗೆ ದಾಖಲಾದೆ. ಮುಂಜಾನೆ 3:30ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದೆ. ಆಸ್ಪತ್ರೆಗೆ ದಾಖಲಾದ ಕೇವಲ ಒಂದು ಗಂಟೆಯಲ್ಲಿ ವೈದ್ಯರು ಚಿಕಿತ್ಸೆ ಮೂಲಕ ನನ್ನನ್ನು ಮೊದಲಿನ ಸ್ಥಿತಿಗೆ ತಂದರು. ಪಾರ್ಶ್ವವಾಯುನಂತಹ ಲಕ್ಷಣ ಕಂಡುಬಂದರೆ, ದೇಹದಲ್ಲಿ ಬದಲಾವಣೆಯಾಗುವುದು ಅರಿವಾಗುತ್ತಿದ್ದಂತೆ ತಡಮಾಡಬೇಡಿ. ಕೂಡಲೇ ಆಸ್ಪತ್ರೆಗೆ ದಾಖಲಾಗಿ ವೈದ್ಯರಿಂದ ಚಿಕಿತ್ಸೆ ಪಡೆಯಿರಿ ಎಂದು ಪ್ರತಿಯೊಬ್ಬರಲ್ಲಿ ಮನವಿ ಮಾಡುತ್ತೇನೆ ಎಂದರು.
ಪಾರ್ಶ್ವವಾಯುನಂತಹ ಸಮಸ್ಯೆಯಾದಾಗ ಆರಂಭದ ನಾಲ್ಕು ಗಂಟೆ ರೋಗಿಯನ್ನು ಗುಣಪಡಿಸಲು ಅತಿ ಮುಖ್ಯ. ಅದನ್ನು ಗೋಲ್ಡನ್ ಅವರ್ ಎನ್ನುತ್ತಾರೆ. ಅಷ್ಟರಲ್ಲಿ ಆಸ್ಪತ್ರೆಗೆ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣಪಡಿಸಲು ಸಾಧ್ಯವಿದೆ. ಬಡವರಿರಲಿ, ಶ್ರೀಮಂತರಿರಲಿ ಈ ವಿಚಾರದಲ್ಲಿ ಯಾರೂ ನಿರ್ಲಕ್ಷ್ಯ ಮಾಡಬಾರದು. ಹಣ ಖರ್ಚಾಗುತ್ತದೆ. ಆದರೆ ಜಿವಕ್ಕಿಂತ ಹಣ ಮುಖ್ಯವಲ್ಲ, ಮೊದಲು ಜೀವವಿದ್ದರೆ ಏನಾದರೂ ಮಾಡಬಹುದು ಎಂದು ವಿವರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ