ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಬರಲಿರುವ ಲೋಕಸಭಾ ಚುನಾವಣೆಗೆ ಕರ್ನಾಟಕದ 28 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸ್ಥಾನ ಹಂಚಿಕೆಯೊಂದಿಗೆ ಸ್ಪರ್ಧಿಸಲು ನಿರ್ಧರಿಸಿವೆ.
ಈ ಸಂಬಂಧ ಈಗಾಗಲೆ ಹಲವು ಸುತ್ತಿನ ಮಾತುಕತೆ ನಡೆದಿದ್ದು, 5 ಅಥವಾ 6 ಸ್ಥಾನಕ್ಕೆ ಜೆಡಿಎಸ್ ಬೇಡಿಕೆ ಇಟ್ಟಿದೆ. ಆದರೆ 4 ಸ್ಥಾನಗಳನ್ನು ಮಾತ್ರ ನೀಡಲು ಬಿಜೆಪಿ ಮುಂದಾಗಿದೆ.
ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ ನಂತರ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹತ್ತಿರವಾಗಿವೆ. ವಿರೋಧ ಪಕ್ಷದ ನಾಯಕ ಸ್ಥಾನವನ್ನೂ ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನೀಡಲಾಗುತ್ತದೆ ಎನ್ನುವ ಸುದ್ದಿ ಹರಡಿತ್ತು.
ಇದೀಗ ಲೋಕಸಭೆ ಚುನಾವಣೆಯನ್ನು ಎರಡೂ ಪಕ್ಷಗಳು ಒಟ್ಟಾಗಿ ಎದುರಿಸಲು ಮುಂದಾಗಿವೆ. ಈ ಕುರಿತು ಮಾತುಕತೆಗಳು ನಡೆದಿವೆ. ದೆಹಲಿ ಮಟ್ಟದಲ್ಲೇ 3 -4 ಸುತ್ತಿನ ಮಾತುಕತೆ ಆಗಿದೆ ಎನ್ನುವ ಮಾಹಿತಿ ಇದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹಂತದಲ್ಲಿ ಮಾಜಿ ಪ್ರಧಾನ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ಮಧ್ಯೆ ಮಾತುಕತೆಯಾಗಿದೆ ಎಂದು ಹೇಳಲಾಗುತ್ತಿದೆ.
ಜೆಡಿಎಸ್ ದಕ್ಷಿಣ ಕರ್ನಾಟಕದ ಸ್ಥಾನಗಳ ಮೇಲೆ ಮಾತ್ರ ಕಣ್ಣಿಟ್ಟಿದ್ದು, ಮಂಡ್ಯ, ಹಾಸನ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಕೇಳಿದೆ. ಆದರೆ ಬಿಜೆಪಿ 4 ಸ್ಥಾನಗಳನ್ನು ಮಾತ್ರ ಜೆಡಿಎಸ್ ಗೆ ಬಿಟ್ಟುಕೊಡಲು ಮುಂದಾಗಿದೆ.
ಉತ್ತರಕರ್ನಾಟಕ ಮತ್ತು ಕರಾವಳಿ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಪ್ರಭಾವ ಹೊಂದಿಲ್ಲ. ಹಾಗಾಗಿ ಆ ಭಾಗದ ಯಾವುದೇ ಸ್ಥಾನವನ್ನು ಕೇಳಿಲ್ಲ. ಮಾತುಕತೆ ಮುಂದುವರಿದಿದ್ದು, ಅಂತಿಮ ತೀರ್ಮಾನಕ್ಕೆ ಇನ್ನೂ ಬರಲಾಗಿಲ್ಲ. ತುಮಕೂರು ಸೇರಿದಂತೆ 2 ಸ್ಥಾನಗಳ ವಿಷಯದಲ್ಲಿ ಒಮ್ಮತ ಮೂಡಿಲ್ಲ.
ಬಿಜೆಪಿ-ಜೆಡಿಎಸ್ ಮೈತ್ರಿ ಮಾತುಕತೆ ಬಹಳ ಮಹತ್ವದ್ದಾಗಿದೆ. ಈ ಭ್ರಷ್ಟ ಸರ್ಕಾರದ ವಿರುದ್ಧ ಹೋರಾಡಲು ವಿರೋಧ ಪಕ್ಷಗಳು ಒಂದಾಗುವುದು ಮುಖ್ಯವಾಗಿತ್ತು. ಹೀಗಾಗಿ ನಾವು ಒಗ್ಗಟ್ಟಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ಮೈತ್ರಿ ಸ್ಥಾನಗಳ ಹಂಚಿಕೆ ಬಗ್ಗೆ ಮುಂದೆ ತೀರ್ಮಾನ ಆಗಲಿದೆ. ನಮ್ಮ ಹೈಕಮಾಂಡ್ ಇದರ ಬಗ್ಗೆ ತೀರ್ಮಾನ ಮಾಡಲಿದೆ
*ಬಸವರಾಜ ಬೊಮ್ಮಾಯಿ,, ಮಾಜಿ ಮುಖ್ಯಮಂತ್ರಿ*
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ