Kannada NewsKarnataka NewsLatestPolitics

ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲಕರ ವಾತಾವರಣವಿದೆ: ಸಿಎಂ ಸಿದ್ದರಾಮಯ್ಯ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಶಿಕ್ಷಕರು ಮತ್ತು ನಾಡಿನ ಪದವೀಧರರು ನಾಡಿನ ಅಭಿವೃದ್ಧಿ ಪರವಾಗಿ ಇದ್ದಾರೆ. ಅವರೆಲ್ಲ ನಮ್ಮ ಪರವಾಗಿರುವುದರಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ನಮಗೆ ಅನುಕೂಲಕರ ವಾತಾವರಣವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ನಡೆದ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ಮಾತನಾಡಿದರು.

“ಜನವರಿಯಿಂದ ವಿದ್ಯಾವಂತ ನಿರುದ್ಯೋಗಿಗಳಿಗೆ ಯುವನಿಧಿ ಕಾರ್ಯಕ್ರಮ ಆರಂಭವಾಗಲಿದೆ. ನಾವು ವಿದ್ಯಾವಂತ ಯುವಕ ಯುವತಿಯರಿಗೆ 24 ತಿಂಗಳ ಕಾಲ ಯುವನಿಧಿ ಕೊಡುವ ಜತೆಗೆ ಉದ್ಯೋಗ ಸೃಷ್ಟಿಗೆ ಹಲವು ಯೋಜನೆಗಳನ್ನು ರೂಪಿಸುತ್ತಿದ್ದೇವೆ” ಎಂದರು.

“ಟಿಕೆಟ್ ಆಕಾಂಕ್ಷಿಗಳು ಶಿಕ್ಷಕ ಸದಸ್ಯರು ಮತ್ತು ಪದವೀಧರ ಸದಸ್ಯರ ಜತೆ ನಿರಂತರ ಸಂಪರ್ಕದಲ್ಲಿದ್ದು ಅವರ ಮಾತು ಮತ್ತು ಬೇಡಿಕೆಗಳನ್ನು ಕೇಳಿಸಿಕೊಂಡು ನಮಗೆ ತಿಳಿಸಿ. ನಾಡಿನ ಅಭಿವೃದ್ಧಿ ಒಂದೇ ನಮ್ಮ ಗುರಿ. ಇದಕ್ಕಾಗಿ ಪಕ್ಷ ಮತ್ತು ಸರ್ಕಾರ ಶ್ರಮಿಸಲಿದೆ. ಇದನ್ನು ಮತದಾರರಿಗೆ ಸರಿಯಾಗಿ ಅರ್ಥ ಮಾಡಿಸಿ ಚುನಾವಣೆಯಲ್ಲಿ ಗೆದ್ದು ಬನ್ನಿ” ಎಂದು ಹಾರೈಸಿದರು.

“ಟಿಕೆಟ್ ಆಕಾಂಕ್ಷಿಗಳು ಮತ್ತು ಎಲ್ಲಾ ಶಾಸಕರು ಮತ್ತು ಜಿಲ್ಲಾ ಪದಾಧಿಕಾರಿಗಳ ಅಭಿಪ್ರಾಯ ಪಡೆದು ಅಭ್ಯರ್ಥಿಗಳ ಹೆಸರನ್ನು ಘೋಷಿಸುತ್ತೇವೆ. ಟಿಕೆಟ್ ಯಾರಿಗೇ ಸಿಕ್ಕರೂ ಒಗ್ಗಟ್ಟಿನಿಂದ ಕೆಲಸ ಮಾಡಿ” ಎಂದರು.

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷರಾದ ಸಲೀಂ ಅಹಮ್ಮದ್, ಸಚಿವ ರಾಮಲಿಂಗಾರೆಡ್ಡಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button