ಏರ್ ಪೋರ್ಟ್ ನಲ್ಲಿ ಚಾ ಕುಡಿದು ಭಾರಿ ಬೆಲೆ ತೆತ್ತ ಬಿಜೆಪಿ ವಕ್ತಾರ; ವಿಮಾನಯಾನ ಸಚಿವರ ಗಮನ ಸೆಳೆದು ಕ್ರಮಕ್ಕೆ ಆಗ್ರಹ
ಪ್ರಗತಿವಾಹಿನಿ ಸುದ್ದಿ, ಪಣಜಿ: ಕುಡಿದದ್ದು ಒಂದು ಕಪ್ ಚಾ, ತೆತ್ತಿದ್ದು ಭಾರಿ ಬೆಲೆ. ಇದು ಸ್ವತಃ ಗೋವಾ ಬಿಜೆಪಿ ವಕ್ತಾರ ಸಿದ್ಧಾರ್ಥ ಕುಂಕೋಳಿಕರ ಅವರ ಜೇಬಿಗೇ ಉರಿ ಹತ್ತಿದ ಪ್ರಕರಣ.
ಸಿದ್ಧಾರ್ಥ ಕುಂಕೋಳಿಕರ ಅವರು ಗೋವಾದ ಧಾಬೋಲಿಂ ಏರ್ ಪೋರ್ಟ್ ನಲ್ಲಿ ಸಿಂಗಲ್ ಚಾ ಕುಡಿದಿದ್ದಾರೆ. ಆದರೆ ಚಾಯ್ ವಾಲಾ ಒಂದು ಕಪ್ ಗೆ ಬರೊಬ್ಬರಿ 265 ರೂ. ಬಿಲ್ ಹಾಕಿದ್ದಾರೆ.
ಚಾ ಕುಡಿದ ತಪ್ಪಿಗೆ 265 ರೂ. ತೆತ್ತ ಸಿದ್ಧಾರ್ಥ ಅವರು ಅದಕ್ಕೆ ಬಿಲ್ ಪಡೆದಿದ್ದು ಅದರ ಚಿತ್ರವನ್ನು X ನಲ್ಲಿ ಶೇರ್ ಮಾಡಿದ್ದಾರೆ. “ಬಹುಶಃ ಪ್ರಪಂಚದಾದ್ಯಂತದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಚಹಾದ ಬೆಲೆ ದುಬಾರಿ ಇರಬೇಕು. ಈ ವಿಷಯವನ್ನು ಪರಿಶೀಲಿಸಿ” ಎಂದು ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ವಿನಂತಿಸಿದ್ದಾರೆ.
“ನಿಮ್ಮದಷ್ಟೇ ಅಲ್ಲ, ನಮ್ದೂ ಅದೇ ಕಥೆ” ಎಂಬಂತೆ X ನಲ್ಲಿ ಸೇಜಲ್ ಸೂದ್ ಅವರು ಇದಕ್ಕೆ ಉತ್ತರಿಸಿ, “ನಾನೂ 193 ರೂ.ಗೆ ಮ್ಯಾಗಿ ಖರೀದಿಸಿದ್ದೇನೆ, ಹೇಗೆ ಪ್ರತಿಕ್ರಿಯಿಸಬೇಕು ಎಂದು ನನಗೆ ತಿಳಿದಿಲ್ಲ, ಯಾರೇ ಇರಲಿ, ಮ್ಯಾಗಿಯಂಥದ್ದನ್ನು ಇಷ್ಟು ದುಬಾರಿ ಬೆಲೆಗೆ ಏಕೆ ಮಾರಾಟ ಮಾಡುತ್ತಾರೆ,” ಎಂದು ಸಮಾನ ಸಂಕಟ ತೋಡಿಕೊಂಡಿದ್ದಾರೆ.
ಸಿದ್ಧಾರ್ಥ್ ಅವರ ಟ್ವೀಟ್ ಗೆ ಕೆಲ ಜಾಲತಾಣಿಗರು “ಇದರಲ್ಲಿ ಹೊಸತೇನಿದೆ?” ಎಂದು ಕಿಚಾಯಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ