Kannada NewsKarnataka NewsLatest

ಆನೆ ಕಾಲಿಗೆ ಚಪ್ಪಲಿ; ಪಶು ವೈದ್ಯ ಡಾ. ರಮೇಶ್ ಹೊಸ ಪ್ರಯೋಗ

ಪ್ರಗತಿವಾಹಿನಿ ಸುದ್ದಿ, ಮೈಸೂರು: ಆನೆ ಚಪ್ಪಲಿ ಧರಿಸುವುದೆಂದರೆ ತಮಾಷೆ ವಿಷಯ ಎನಿಸಬಹುದು. ಆದರೆ ಮೈಸೂರಿನ ಪಶು ವೈದ್ಯರೊಬ್ಬರು ಇಂಥ ಹೊಸ ಪ್ರಯೋಗವೊಂದನ್ನು ಈಗಾಗಲೇ ಮಾಡಿದ್ದು, ಗಾಯಗೊಂಡಿದ್ದ ಆನೆ ಪಾಲಿಗಿದು ವರದಾನವಾಗಿದೆ.

ಜಿಲ್ಲೆಯ ಹುಣಸೂರು ತಾಲೂಕಿನ ದೊಡ್ಡ ಹರವೆ ಆನೆ ಕ್ಯಾಂಪ್‌ನಲ್ಲಿರುವ 60 ವರ್ಷದ ‘ಕುಮಾರಿ’ ಹೆಸರಿನ ಆನೆಯ ಕಾಲಿಗೆ ಗಂಭೀರ ಗಾಯವಾಗಿತ್ತು. ಈ ಆನೆ 2015ರಲ್ಲಿ ಕೇರಳದ ಸರ್ಕಸ್ ಕಂಪನಿಯೊಂದರಲ್ಲಿತ್ತು. ಅಲ್ಲಿಂದ ಅದನ್ನು ರಕ್ಷಿಸಿ ದೊಡ್ಡ ಹರವೆ ಕ್ಯಾಂಪ್ ಗೆ ತರಲಾಗಿತ್ತು. ಕೆಲ ದಿನಗಳ ಹಿಂದೆ ಕುಮಾರಿಯ ಬಲಗಾಲಿಗೆ ತೀವ್ರ ಗಾಯವಾಗಿ ಹೆಜ್ಜೆಯಿಡುವುದೇ ಕಷ್ಟಕರವಾಗಿತ್ತು. ವೈದ್ಯರ ತಂಡ‌ ಈ ಆನೆಗೆ ಔಷಧೋಪಚಾರ ಮಾಡಿದ್ದರೂ ಅದು ಮಣ್ಣಲ್ಲಿ ಕಾಲಿಟ್ಟ ತಕ್ಷಣ ಯಾವುದೇ ಪ್ರಯೋಜನವಾಗುತ್ತಿರಲಿಲ್ಲ. ಪ್ರತಿ ದಿನ ಈ ಆನೆಯನ್ನು ಅಡ್ಡಹಾಕಿ ಕಾಲಿನ ಪಾದಕ್ಕೆ ಔಷಧ ಸವರುವುದೇ ದೊಡ್ಡ ಸವಾಲಾಗಿತ್ತು.

ಕೊನೆಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೈದ್ಯ, ಮದ್ದೂರು ತಾಲೂಕು ಹೊಸಳ್ಳಿ ಮೂಲದ 29 ವಯಸ್ಸಿನ ಯುವ ಪಶುವೈದ್ಯ ಡಾ. ರಮೇಶ್ ಇದಕ್ಕೊಂದು ಉಪಾಯ ಹುಡುಕಿ ಆನೆಯ ಕಾಲಿಗೆ ಭಾರಿ ವಾಹನದ ಟೈರ್ ಬಳಸಿ ಚಪ್ಪಲಿಯೊಂದನ್ನು ತಯಾರಿಸಿದ್ದಾರೆ. ಕಾಲಿಗೆ ಔಷಧ ಸವರಿದ ನಂತರ ಈ ಚಪ್ಪಲಿ ಹಾಕಿ ಬಿಡುವುದರಿಂದ ಅದು ಪ್ರಯೋಜನಕಾರಿಯಾಗುತ್ತಿದ್ದು ಗಾಯಾಳು ಕುಮಾರಿ ಚೇತರಿಕೆಯತ್ತ ಸಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button