*ಖಾಸಗಿ ಸಾರಿಗೆ ಒಕ್ಕೂಟಗಳಿಂದ ಮುಷ್ಕರ; ವಾಹನ ಸಿಗದೇ ಪ್ರಯಾಣಿಕರು, ಶಾಲಾ ಮಕ್ಕಳ ಪರದಾಟ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಖಾಸಗಿ ಸಾರಿಗೆ ವಾಹನ ಒಕ್ಕೂಟ ಕರೆ ನೀಡಿರುವ ಬೆಂಗಳೂರು ಬಂದ್ ಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. 36ಕ್ಕೂ ಹೆಚ್ಚು ಖಾಸಗಿ ಸಾರಿಗೆ ಸಂಘಟನೆ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ರಾಜಧಾನಿಯಲ್ಲಿ ಖಾಸಗಿ ವಾಹನಗಳ ಸಂಚಾರವಿಲ್ಲದೇ ಪ್ರಯಾಣಿಕರು, ಶಾಲಾ ಮಕ್ಕಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಖಾಸಗಿ ಸಾರಿಗೆ ಒಕ್ಕೂಟಗಳ ಮುಷ್ಕರ ಹಿನ್ನೆಲೆಯಲ್ಲಿ ಕೆಲ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಆದರೆ ಇನ್ನು ಹಲವು ಶಾಲೆಗಳು ಸೂಕ್ತ ಮಾಹಿತಿ ನೀಡದ ಕಾರಣಕ್ಕೆ ಶಾಲಾ ಮಕ್ಕಳು ವಾಹನವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೆಂಗಳೂರಿನ ರೈಲು ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಆಟೋ, ಕ್ಯಾಬ್ ಸಿಗದೇ ತೊಂದರೆ ಅನುಭವಿಸುವಂತಾಗಿದೆ. ಬಿಎಂಟಿಸಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಿದೆಯಾದರೂ ಹಲವೆಡೆ ಬಸ್ ಸಂಚಾರ ವಿರಳವಾಗಿದೆ.
ಆಟೋ, ಕ್ಯಾಬ್, ಖಾಸಗಿ ಬಸ್, ಓಲಾ, ಏರ್ ಪೋರ್ಟ್ ಟ್ಯಾಕ್ಸಿ ಸೇರಿದಂತೆ ಖಾಸಗಿ ಸಾರಿಗೆ ವಾಹನಗಳು ಮುಷ್ಕರದಲ್ಲಿ ಭಾಗಿಯಾಗಿವೆ. ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಖಾಸಗಿ ಸಾರಿಗೆ ವಾಹನ ಚಾಲಕರು ಬೃಹತ್ ಪ್ರತಿಭಟನಾ ರ್ಯಾಲಿ ಆರಂಭಿಸಿದ್ದು, ಫ್ರೀಡಂ ಪಾರ್ಕ್ ವರೆಗೆ ಮೆರವಣಿಗೆ ನಡೆಸಲಿದ್ದಾರೆ.
ಇನ್ನೊಂದೆಡೆ ಬಂದ್ ಗೆ ಬೆಂಬಲ ನೀಡದ ಆಟೋ, ಕ್ಯಾಬ್ ಗಳ ಮೇಲೆ ಕಲ್ಲು ತೂರಾಟ, ಮೊಟ್ಟೆ ತೂರಾಟದಂತಹ ಘಟನೆಗಳು ನಡೆದಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ