Kannada NewsLatest

ಬಸ್ ತಡೆದು ಪ್ರತಿಭಟನೆ, ವಿದ್ಯಾರ್ಥಿಗಳ ಆಕ್ರೋಶ

ಬಸ್ ತಡೆದು ಪ್ರತಿಭಟನೆ, ವಿದ್ಯಾರ್ಥಿಗಳ ಆಕ್ರೋಶ

ಪ್ರಗತಿವಾಹಿನಿ ಸುದ್ದಿ – ಅಥಣಿ : ಒಂದೇ ಬಸ್ಸಿನಲ್ಲಿ ನೂರಾರು ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಗ್ರಾಮಕ್ಕೆ ತೆರಳಲು ತೊಂದರೆಯಾಗುತ್ತಿದೆ. ಪ್ರತಿನಿತ್ಯವಾಗಿ ವಿದ್ಯಾರ್ಥಿಗಳನ್ನು ನೋಡಿ ಬಸ್ಸಿನ ಚಾಲಕರು ಬಸ್ಸನ್ನು ನಿಲ್ಲಿಸದೇ ಹೋಗುತ್ತಾರೆ, ಇದರಿಂದಾಗಿ ನಮಗೆ ಮನೆಗಳಿಗೆ ಹೋಗಲು ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಇಂದು ಸಾಯಂಕಾಲ 06 ಗಂಟೆಗೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಅಥಣಿ- ನಾಗನೂರ ಹಾಗೂ ಅಥಣಿ-ಖಿಳೆಗಾಂವ ಮಾರ್ಗದ ಬಸ್ಸುಗಳನ್ನು ವಿದ್ಯಾರ್ಥಿಗಳು ತಡೆದು ಆಕ್ರೋಶ ವ್ಯಕ್ತಪಡಿಸಿದರು.

ತಮಗಾಗುವಂತಹ ಅನಾನುಕೂಲವನ್ನು ಸರಿಮಾಡಿಕೊಡಿ ಹಾಗೂ ವಿದ್ಯಾರ್ಥಿಗಳಿಗಾಗಿ ಹೆಚ್ಚುವರಿ ಬಸ್ ಓಡಿಸುವಂತೆ ಆಗ್ರಹಿಸಿದರು. ಬಸ್ ತಡೆದು ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳು ಹೇಳುವ ಪ್ರಕಾರ ಅಥಣಿ ಪಟ್ಟಣದಿಂದ ಉತ್ತರಭಾಗದ ಹಳ್ಳಿಗಳಾದ ಪಾರ್ಥನಳ್ಳಿ, ಗುಂಡೇವಾಡಿ, ಬಳ್ಳಿಗೇರಿ, ಅನಂತಪೂರ, ಖಿಳೆಗಾಂವ ಗ್ರಾಮಗಳಿಗೆ ತೆರಳುತ್ತಿರುವ ಬಸ್ಸಿನಲ್ಲಿ ಹೆಚ್ಚಾಗಿ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ತುಂಬಿದ್ದರಿಂದ ನಿತ್ಯವೂ ಶಾಲಾ ಕಾಲೇಜಿಗಾಗಿ ಅಥಣಿಗೆ ಬರುವಂತಹ ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಇರುವುದಿಲ್ಲ.

ಮತ್ತು ಮೊದಲೆ ದಿನವೂ ಸಾಯಂಕಾಲ ಬಸ್ಸು ನಿಲ್ದಾಣದಿಂದಲೇ ತುಂಬಿ ಬರುವುದರಿಂದ ಈ ಬಸವೇಶ್ವರ ವೃತ್ತದಲ್ಲಿ ನಿಂತು ದಾರಿ ಕಾಯುವಂತಹ ವಿದ್ಯಾರ್ಥಿಗಳನ್ನು ನೋಡಿ ಚಾಲಕರು ಹಾಗೆಯೇ ಬಸ್ಸನ್ನು ಚಾಲನೆಮಾಡಿಕೊಂಡು ಹೋಗುತ್ತಾರೆ ಅದಕ್ಕಾಗಿ ನಾವುಗಳು ಇಂದು ತಡೆದು ಪ್ರತಿಭಟಿಸುತ್ತಿದ್ದೆವೆ ಎಂದು ವಿದ್ಯಾರ್ಥಿಗಳು ಹೇಳಿದರು.

ಈ ವೇಳೆ ಜಯ ಕರ್ನಾಟಕ ಸಂಘಟನೆಯ ತಾಲೂಕಾಧ್ಯಕ್ಷ ಸುನೀಲ ನಾಯಿಕ ಮಾತನಾಡಿ ಗಡಿಭಾಗದಲ್ಲಿರುವ ಗ್ರಾಮಗಳ ಮಾರ್ಗವಾಗಿ ಓಡಾಡುವ ಸಾರಿಗೆ ಬಸನಲ್ಲಿ ನೂರಾರು ವಿದ್ಯಾರ್ಥಿಗಳು ಪ್ರಯಾಣಿಸುತ್ತಾರೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಸಾರಿಗೆ ಬಸ್ಸಗಳ ಸವಲತ್ತು ಇಲ್ಲದ ಕಾರಣ ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಒಂದೇ ಬಸ್ಸನಲ್ಲಿ ಜೋತು ಬಿದ್ದು ಹೋಗುವ ಪ್ರಸಂಗ ನಡೆದಿದೆ.

ಒಂದು ಬಸ್ಸ್ ನಲ್ಲಿ ಕೇವಲ 52 ಜನ ಪ್ರಯಾಣಿಸಬೇಕು. ಆದರೆ ಈಗ 100ಕ್ಕೂ ಅಧಿಕ ಜನರು ಪ್ರಯಾಣಿಸುತ್ತಿದ್ದಾರೆ. ಇದರಿಂದ ವಯೋ ವೃದ್ದರಿಗೆ, ಮಹಿಳೆಯರಿಗೆ, ವಿಧ್ಯಾರ್ಥಿನಿಯರಿಗೆ ತೀವ್ರ ತೊಂದರೆಯಾಗುತ್ತಿದ್ದು, ಸಾರಿಗೆ ಅಕಾರಿಗಳು ಕೂಡಲೇ ಚಮಕೇರಿ ಮಾರ್ಗದಲ್ಲಿ ಪ್ರತಿದಿನ ಹೆಚ್ಚುವರಿ ಬಸ್ಸ್ ಓಡಿಸುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಇದನ್ನು ಸರಿಪಡಿಸಲು ಬಂದ ಪೋಲಿಸರು ಮತ್ತು ವಿದ್ಯಾರ್ಥಿಪಾಲಕರ ಮಧ್ಯೆ ವಾಗ್ವಾದ   ಜರುಗಿತು. ಆದರೆ ಇದನ್ನು ವಿಚಾರಿಸಲು ಸಾರಿಗೆ ಇಲಾಖೆ ವ್ಯವಸ್ಥಾಪಕರಿಗೆ ಕರೆ ಮಾಡಿದರೂ ಸ್ವಿಚ್ಚಾಫ್ ಇದ್ದಕಾರಣ ಬಸ್ಸ್ ನಿಲ್ದಾಣಕ್ಕೆ ಹೋಗಿ ಮನವಿ ಮಾಡಿದರೂ ಸ್ಪಂದಿಸದಿರುವುದು ಪ್ರತಿಭಟನಾಕಾರರನ್ನು ಇನ್ನಷ್ಟು ಕೆರಳಿಸಿತು.

ಕೊನೆಗೆ ಚಿಕ್ಕೋಡಿ ಸಾರಿಗೆ ಇಲಾಖೆ ವ್ಯವಸ್ಥಾಪಕರಿಗೆ ಕರೆ ಮಾಡಿ ನಾಳೆ ಸರಿಪಡಿಸುವ ಉತ್ತರ ಬಂದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಈ ವೇಳೆ ಚಿದಾನಂದ ಶೇಗುಣಸಿ, ಲಕ್ಷಣ ಬಡಕಂಬಿ, ರಮೇಶ ಕಾಗಲೆ, ರಮೇಶ ಮಾಳಿ, ಚಿರಂಜೀವಿ ಖೋತ ಹಾಗೂ ನೂರಾರು ವಿದ್ಯಾರ್ಥಿಗಳು ಮತ್ತು ಪಾಲಕರು ಇದ್ದರು////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button