*ಹಾಲಶ್ರೀ ಮಠದಲ್ಲಿ 56 ಲಕ್ಷ ಹಣ ಇಟ್ಟು ಹೋದ ಅನಾಮಿಕ ವ್ಯಕ್ತಿ; ವಿಡಿಯೋ ಮೂಲಕ ಹೇಳಿದ್ದೇನು?*
ಪ್ರಗತಿವಾಹಿನಿ ಸುದ್ದಿ; ವಿಜಯನಗರ: ಚೈತ್ರಾ ಕುಂದಾಪುರ ಹಾಗೂ ಗ್ಯಾಂಗ್ ನಿಂದ ಉದ್ಯಮಿಗೆ 5 ಕೋಟಿ ವಂಚನೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಅಭಿನವ ಹಾಲಶ್ರೀ ಬಂಧನ ಬೆನ್ನಲ್ಲೇ ಮಹತ್ವದ ಮಾಹಿತಿಗಳು ಬಹಿರಂಗವಾಗುತ್ತಿವೆ.
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಗ್ರಾಮದಲ್ಲಿರುವ ಹಾಲಸ್ವಾಮಿ ಮಠಕ್ಕೆ ಅನಾಮಿಕ ವ್ಯಕ್ತಿಯೊಬ್ಬರು ಬಂದು 56 ಲಕ್ಷ ರೂಪಾಯಿ ಇಟ್ಟು ಹೋಗಿರುವ ಘಟನೆ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಪ್ರಣವ್ ಪ್ರಾಸಾದ್ ಎಂಬ ವ್ಯಕ್ತಿ ಹಾಲಮಠಕ್ಕೆ ಬಂದು ಹಣವಿಟ್ಟು ತೆರಳಿದ್ದು, ಈ ಬಗ್ಗೆ ಆತನೇ ವಿಡಿಯೋ ಹೇಳಿಕೆ ನೀಡಿದ್ದು, ತಾನು ವಕೀಲ ಎಂದು ಹೇಳಿಕೊಂಡಿದ್ದಾರೆ. 56 ಲಕ್ಷ ಹಣ ಅಭಿನವ ಹಾಲಶ್ರೀಗೆ ಸೇರಿದ್ದು ಎಂದಿದ್ದಾರೆ.
ಹಾಲಶ್ರೀ ಕಾರು ಚಾಲಕ ಮೈಸೂರಿನಲ್ಲಿ ನನಗೆ ಹಣ ನೀಡಿದ್ದು, ಒಟ್ಟು 60 ಲಕ್ಷ ರೂಪಾಯಿ ತಂದು ಕೊಟ್ಟಿದ್ದು, ಈ ಪೈಕಿ 56 ಲಕ್ಷ ರೂಪಾಯಿ ನನಗೆ ತಲುಪಿದ್ದಾರೆ. ಉಳಿದ 4 ಲಕ್ಷ ವಕೀಲರ ಶುಲ್ಕಕ್ಕಾಗಿ ಕಾರು ಚಾಲಕ ಪಡೆದುಕೊಂಡಿದ್ದಾರೆ. ಮೈಸೂರಿನ ನನ್ನ ಕಚೇರಿಗೆ ಹಾಲಶ್ರೀ ಕಾರು ಚಾಲಕ ಬಂದು ಹಣ ಕೊಟ್ಟು ಹೋಗಿದ್ದಾರೆ. ಹಣ ವಾಪಸ್ ಪಡೆಯಲು ಯಾರೂ ಬಾರದಿದ್ದ ಕಾರಣಕ್ಕೆ ಹಣವನ್ನು ಮಠಕ್ಕೆ ನೀಡಿದ್ದೇನೆ. ನಾನೇ ಖುದ್ದು ಹಾಲಸ್ವಾಮಿ ಮಠಕ್ಕೆ ಬಂದು 56 ಲಕ್ಷ ಹಣ ಕೊಟ್ಟಿದ್ದೇನೆ ಎಂದು ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇನ್ನು ಮೈಸೂರು ಮೂಲದ ವಕೀಲ ಹಾಗೂ ಉದ್ಯಮಿ ಪ್ರಣವ್ ಪ್ರಸಾದ್ ಮಠಕ್ಕೆ ಹಣ ತಲುಪಿಸಿರುವ ಬಗ್ಗೆ ಸಿಸಿಬಿ ಡಿಸಿಪಿ ಅಬ್ದುಲ್ ಅಹ್ಮದ್ ಗೆ ಪ್ರಣವ್ ಪ್ರಸಾದ್ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ