ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಖಾತ್ರಿಯಾಗುತ್ತಿದ್ದಂತೆ ಜೆಡಿಎಸ್‌ನ ಕೆಲ ಅಲ್ಪಸಂಖ್ಯಾತ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಪಕ್ಷದ ಹುದ್ದೆಗಳಿಗೆ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಪಕ್ಷದ ರಾಜ್ಯ ಉಪಾಧ್ಯಕ್ಷ ಸಯ್ಯದ್ ಶಫಿಉಲ್ಲಾ, ಕಾರ್ಯಾಧ್ಯಕ್ಷ ಎನ್.ಎಂ.ನಬಿ, ಅಲ್ಪಸಂಖ್ಯಾತ ವಿಭಾಗದ ಮಾಜಿ ಅಧ್ಯಕ್ಷ ನಾಸೀರ್ ಹುಸೇನ್, ಯುವ ಘಟಕದ ಕಾರ್ಯಾಧ್ಯಕ್ಷ ಎನ್.ಎಂ.ನೂರ್, ಮುಖಂಡರಾದ ಮೋಹಿದ್ ಅಲ್ತಾಫ್ ಮುಂತಾದವರು ರಾಜೀನಾಮೆ ನಿರ್ಧಾರ ತಳೆದಿದ್ದಾರೆ.
ದೆಹಲಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಮೈತ್ರಿ ಪ್ರಕ್ರಿಯೆ ಅಧಿಕೃತಗೊಳಿಸುತ್ತಿದ್ದಂತೆ ನಗರದ ಕುಮಾರಕೃಪಾದಲ್ಲಿ ಪಕ್ಷದ ಅಲ್ಪಸಂಖ್ಯಾತ ನಾಯಕರು ಸಭೆ ನಡೆಸಿ ಮೈತ್ರಿ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಈಗಾಗಲೆ ಸಯ್ಯದ್ ಶಫಿಉಲ್ಲಾ ಅವರು ಪಕ್ಷದ ಹಿರಿಯ ರಾಜ್ಯ ಉಪಾಧ್ಯಕ್ಷ ಸೇರಿದಂತೆ ಪಕ್ಷದ ಎಲ್ಲಾ ಹುದ್ದೆಗಳಿಗೆ ಮತ್ತು ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ರಾಜೀನಾಮೆ ಪತ್ರವನ್ನು ಈಗಾಗಲೇ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರಿಗೆ ರವಾನಿಸಿದ್ದಾರೆ.
ಸೈದ್ಧಾಂತಿಕ ವಿರೋಧದ ಹಿನ್ನೆಲೆಯಲ್ಲಿ ಈ ಮೈತ್ರಿಯನ್ನು ಒಪ್ಪಿಕೊಳ್ಳಲು ತಾವು ಸಿದ್ಧರಿಲ್ಲ ಎಂದು ಅಲ್ಪಸಂಖ್ಯಾತ ಸಮುದಾಯದ ಮುಖಂಡರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ