*ಡಿ.ಕೆ.ಶಿವಕುಮಾರ್ ಮೇಲೆ ಎಸ್.ಎಂ.ಕೃಷ್ಣ ಬೇಸರಗೊಂಡಿದ್ದೇಕೆ? ಸ್ವಾರಸ್ಯಕರ ಸಂಗತಿ ಹೇಳಿದ ಡಿಸಿಎಂ*
ಎಸ್.ಎಂ ಕೃಷ್ಣ ಅವರ ಜೀವನಗಾಥೆ ಕುರಿತ “ನೆಲದ ಸಿರಿ” ಕೃತಿ ಲೋಕಾರ್ಪಣೆ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಜೀವನಗಾಥೆ ಕುರಿತ “ನೆಲದ ಸಿರಿ” ಕೃತಿ ಲೋಕಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್,ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಮಾಡುತ್ತೇವೆ ಎಂಬುದು ಬಹಳ ಮುಖ್ಯ. ಇಂದು ಎಸ್.ಎಂ ಕೃಷ್ಣ ಅವರ ಜೀವನಗಾಥೆ ಕುರಿತ ಪುಸ್ತಕ ಬಿಡುಗಡೆ ಮಾಡಲಾಗಿದೆ. ಕೃಷ್ಣ ಅವರ ಸಾಧನೆ, ಮಾರ್ಗದರ್ಶನ ನೆನೆದು, ಮುಂದಿನ ಪೀಳಿಗೆ ಸಮಾಜವನ್ನು ಯಾವ ದಿಕ್ಕಿನಲ್ಲಿ ಮುನ್ನಡೆಸಬೇಕು ಎಂದು ತಿಳಿಸಲು ಈ ಪುಸ್ತಕ ಹೊರ ತಂದಿದ್ದಾರೆ. ಕೃಷ್ಣ ಅವರ ಕುಟುಂಬ ಸದಸ್ಯನಾಗಿ, ಸರ್ಕಾರದ ಪ್ರತಿನಿಧಿಯಾಗಿ ಈ ಪುಸ್ತಕ ಬರೆದವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
“One who wins without problem it is just victory but one who wins with lot of troubles that is history.” ಎಂದು ಹಿಟ್ಲರ್ ಹೇಳಿದ್ದಾನೆ. ಅದೇ ರೀತಿ ಕೃಷ್ಣ ಅವರು ತಮ್ಮ ರಾಜಕೀಯ ಜೀವನದಲ್ಲಿ ಅನೇಕ ಸವಾಲು, ಸಮಸ್ಯೆಗಳನ್ನು ಎದುರಿಸಿ ಗೆದ್ದಿದ್ದಾರೆ ಎಂದು ತಿಳಿಸಿದರು.
ನನ್ನ ಅವರ ರಾಜಕೀಯ ಒಡನಾಟ 35 ವರ್ಷಗಳದ್ದು. ಅವರು ಬಹಳ ಕಷ್ಟ ಕಾಲದಲ್ಲಿ ರಾಜ್ಯದಲ್ಲಿ ಆಡಳಿತ ನಡೆಸಿದರು. ಬರ, ಕಾವೇರಿ ಸಮಸ್ಯೆ, ರಾಜಕುಮಾರ್ ಅವರ ಅಪಹರಣ, ಆರ್ಥಿಕ ಸಮಸ್ಯೆ ಇದ್ದ ಕಾಲದಲ್ಲಿ ಅವರು ರಾಜ್ಯ ಮುನ್ನಡೆಸಿದರು. ಈ ಸವಾಲುಗಳ ಮಧ್ಯೆ ಯಶಸ್ಸು ಕಂಡು, “ಕೃಷ್ಣ ಅವರ ಕಾಲ” ಎಂದೇ ರಾಜ್ಯದ ಜನ ಅವರ ಆಡಳಿತ ಸ್ಮರಿಸುತ್ತಾರೆ.
ನಾನು ಅವರ ಸಂಪುಟದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದ್ದು, ಅವರು ಅಧಿಕಾರ ವಹಿಸಿಕೊಂಡಾಗ ರಾಜ್ಯದ ಬಜೆಟ್ 13,000 ಕೋಟಿ ಇತ್ತು. ಅವರ ಆಡಳಿತ ಮುಗಿಯುವ ಹೊತ್ತಿಗೆ ರಾಜ್ಯದ ಬಜೆಟ್ ಗಾತ್ರ 26,000 ಕೋಟಿ ಆಗಿತ್ತು. ಇಂದು ಅದು 3.50 ಲಕ್ಷ ಕೋಟಿ ಆಗಿದೆ. ಆ ಸಂದರ್ಭದಲ್ಲಿ ಅವರು ಅನೇಕ ಸಾಕ್ಷಿ ಗುಡ್ಡೆ ಬಿಟ್ಟು ಹೋಗಿದ್ದಾರೆ.
ಅಧಿಕಾರ, ಹಣ, ಕುಟುಂಬ, ಸ್ನೇಹಿತರು ಜೀವನದ ಭಾಗ. ಇಲ್ಲಿರುವವರೆಲ್ಲರು ಕೃಷ್ಣ ಅವರ ಕುಟುಂಬದವರೇ ಆಗಿದ್ದೀರಿ. ಇಲ್ಲಿ ರಾಜಕೀಯ ಏನು ಮಾತನಾಡಲಿ. ಇಲ್ಲಿರುವವರಿಗೆ ಕೃಷ್ಣ ಅವರ ಬಾಲ್ಯ, ಬದುಕು, ಸಾಮಾಜಿಕ, ರಾಜಕೀಯ ಬದುಕು ಎಲ್ಲವೂ ಗೊತ್ತಿದೆ.
ಬೆಂಗಳೂರು ಜನರು ಈ ನಗರ ಕಟ್ಟಿದ ಮೂವರು K ಗಳನ್ನು ನೆನೆಯಬೇಕು. ಅವರು ಯಾರೆಂದರೆ, ಬೆಂಗಳೂರು ಕಟ್ಟಿದ ಕೆಂಪೇಗೌಡ, ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ, ಬೆಂಗಳೂರನ್ನು ಐಟಿ ರಾಜಧಾನಿ ಮಾಡಿದ ಎಸ್. ಎಂ ಕೃಷ್ಣ ಅವರು.
ವಿಧಾನಸೌಧ ಪಕ್ಕಲ್ಲಿರುವ ವಿಕಾಸಸೌಧ, ಉದ್ಯೋಗಸೌಧ ಕಟ್ಟಿದರು. ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡಲು ಜೆ.ಹೆಚ್ ಪಟೇಲರು ಮೊನೊ ರೈಲು ತರಲು ಮುಂದಾಗಿದ್ದರು. ಕೃಷ್ಣ ಅವರ ಸಂಪುಟದಲ್ಲಿ ಮೊನೊ ರೈಲು ಜೊತೆಗೆ ಮೆಟ್ರೋ ರೈಲು ಬಗ್ಗೆ ದೊಡ್ಡ ಚರ್ಚೆ ಆಯಿತು. ಕೃಷ್ಣ ಅವರು ಮೊನೊ ರೈಲು ಮಾಡಲು ಮುಂದಾದಾಗ, ನಾನೂ ಮೊನೊ ರೈಲು ಬೇಡ ಮೆಟ್ರೋ ರೈಲು ಬೇಕು ಎಂದು ಪಟ್ಟು ಹಿಡಿದೆ. ಆಗ ಕೃಷ್ಣ ಅವರು ನನ್ನ ಮೇಲೆ ಬೇಸರ ಆದರು.
ನಂತರ ತಜ್ಞರ ವರದಿ ತರಿಸಿಕೊಂಡು, ನಾನೂ ಮೆಟ್ರೋ ಪ್ರಸ್ತಾವನೆ ನೀಡಿದೆ. ಆನಂತರ ಕೃಷ್ಣ ಹಾಗೂ ಅನಂತ ಕುಮಾರ್ ಅವರು ಪ್ರಧಾನಿ ಆಗಿದ್ದ ವಾಜಪೇಯಿ ಅವರನ್ನು ಭೇಟಿ ಮಾಡಿ ಬೆಂಗಳೂರಿಗೆ ಮೆಟ್ರೋ ರೈಲು ತಂದರು. ಆಮೂಲಕ ನಮ್ಮ ಮೆಟ್ರೋ ಕೂಡ ಎಸ್.ಎಂ ಕೃಷ್ಣ ಅವರ ಕೊಡುಗೆ ಎಂದು ಹೇಳಿದರು.
ಅವರು ಬಿಟ್ಟುಹೋದ ಜವಾಬ್ದಾರಿ ಮುಂದುವರಿಸುವ ಹೊಣೆ ನನಗೆ ಸಿಕ್ಕಿದೆ. ಇನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವಾಗ ಅದನ್ನು ಬಿಡದಿ ಬಳಿ ಮಾಡಬೇಕು ಎಂದು ಹೇಳಿದರು. ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ, ಅದನ್ನು ದೇವನಹಳ್ಳಿಯಲ್ಲಿ ಮಾಡಿದೆವು.
ಇನ್ನು ಇಡೀ ದೇಶದಲ್ಲಿ ಮಕ್ಕಳನ್ನು ಶಾಲೆಗಳತ್ತ ಕರೆದು ತರಲು ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ಯೋಜನೆ ಮೊದಲ ಬಾರಿಗೆ ಜಾರಿಗೆ ತಂದಿದ್ದರೆ ಅದು ಕೃಷ್ಣ ಅವರ ಕಾಲದಲ್ಲಿ ಕರ್ನಾಟಕದಲ್ಲಿ. ಈ ಯೋಜನೆಗೆ ಅನೇಕ ವ್ಯಾಖ್ಯಾನ ಮಾಡಿದರು. ಮೊದಲು ಉತ್ತರ ಕರ್ನಾಟಕದ ಭಾಗದಲ್ಲಿ ಆರಂಭಿಸಿ, ನಂತರ ಈ ಯೋಜನೆ ರಾಜ್ಯಾದ್ಯಂತ ವಿಸ್ತರಣೆ ಮಾಡಲಾಯಿತು. ಈ ಯೋಜನೆ ಇಂದಿಗೂ ಜಾರಿಯಲ್ಲಿದೆ.
ನಾನು ಸಹಕಾರ ಮಂತ್ರಿ ಆಗಿದ್ದಾಗ, ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡಬೇಕು ಎಂದು ಸ್ತ್ರೀಶಕ್ತಿ ಸಂಘ ಕಾರ್ಯಕ್ರಮ ರೂಪಿಸಿದೆವು. ಹಣ ಹಾಗೂ ರಕ್ತ ಚಲನೆಯಲ್ಲಿ ಇದ್ದರೆ ಆರೋಗ್ಯಕರವಾಗಿ ಇರಲು ಸಾಧ್ಯ ಎಂದು ನಾವು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಈ ಯೋಜನೆ ಜಾರಿ ಮಾಡಿದೆವು ಎಂದರು.
ಇನ್ನು ಗ್ರಾಮೀಣ ಭಾಗದ ಜನರ ಆರೋಗ್ಯ ಕಾಪಾಡಲು ಯಶಸ್ವಿನಿ ಕಾರ್ಯಕ್ರಮ ರೂಪಿಸಿದರು. ಭೂಮಿ ಯೋಜನೆ ಜಾರಿಗೆ ತಂದು, ಪಾಣಿ ವಿಚಾರವಾಗಿ ರೈತರು ಅನುಭವಿಸುತ್ತಿದ್ದ ಸಮಸ್ಯೆಗೆ ಪರಿಹಾರ ತಂದರು. ಅವರ ಈ ಯೋಜನೆಯನ್ನು ಬೆಂಗಳೂರಿನಲ್ಲಿ ಜಾರಿ ಮಾಡಲು ನಾನು ಪ್ರಯತ್ನಿಸುತ್ತಿದ್ದೇನೆ.
ಕೃಷ್ಣ ಅವರ ಕಾಲದಲ್ಲಿ ಜಾರಿಗೆ ಬಂದ ಯೋಜನೆಗಳಲ್ಲಿ ವಿಮಾನ ನಿಲ್ದಾಣ ಹಾಗೂ ಮೆಟ್ರೋ ಹೊರತಾಗಿ ಉಳಿದ ಎಲ್ಲಾ ಯೋಜನೆಗಳು ದೇಶದ ಯಾವುದೇ ರಾಜ್ಯಗಳಲ್ಲಿ ಪರಿಚಯಿಸಿರಲಿಲ್ಲ.
ಎಂ.ಸಿ ನಾಣಯ್ಯ ಅವರು ಸದನದಲ್ಲಿ ಭಾಷಣ ಮಾಡುತ್ತಾ ಆರ್ಥಿಕ ವಿಚಾರವಾಗಿ ಭಾಷಣ ಮಾಡಿ, ರಾಜ್ಯದಲ್ಲಿ ಸಾರಾಯಿ ಲಾಭಿ ತಡೆಯುವ ಬಗ್ಗೆ ಸವಾಲು ಹಾಕಿದರು. ಅದಾದ ನಂತರ ಎಂದು ರಾಜ್ಯದ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದ್ದರೆ ಅದಕ್ಕೆ ಕೃಷ್ಣ ಅವರು ತೆಗೆದುಕೊಂಡ ದಿಟ್ಟ ನಿರ್ಧಾರ ಕಾರಣ. ಅದರಿಂದಲೇ ಇಂದು ಸಿದ್ದರಾಮಯ್ಯ, ಯಡಿಯೂರಪ್ಪ, ಬೊಮ್ಮಾಯಿ ಅವರು ತಮ್ಮ ಆಡಳಿತ ಅವಧಿಯಲ್ಲಿ ಎಲ್ಲಾ ವಲಯಕ್ಕೂ ಉತ್ತಮ ಅನುದಾನ ನೀಡಲು ಸಾಧ್ಯವಾಗಿದೆ.
ದೇವರು ನಮಗೆ ವರ ಹಾಗೂ ಶಾಪ ನೀಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ಈ ಅವಕಾಶದಲ್ಲಿ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ಅದರಂತೆ ಕೃಷ್ಣ ಅವರು ತಮಗೆ ಸಿಕ್ಕ 4.5 ವರ್ಷಗಳ ಅಧಿಕಾರ ಅವಧಿಯಲ್ಲಿ ರಾಜ್ಯದಲ್ಲಿ ಇತಿಹಾಸ ಸೃಷ್ಟಿ ಮಾಡಿದ್ದಾರೆ. ನಾವು ಅದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು.
ಅವರ ಆದರ್ಶ, ನಾಯಕತ್ವ ಬಿಟ್ಟು ಹೋಗಿದ್ದಾರೆ. ನಾವು ಅದನ್ನು ಮುಂದುವರಿಸಿಕೊಂಡು ಹೋಗಬೇಕು. ಕೃಷ್ಣ ಅವರ ಜೊತೆ ರಾಜಕಾರಣದಲ್ಲಿ ಅನೇಕ ಭಿನ್ನಾಭಿಪ್ರಾಯ ಬಂದವು. ಅನೇಕರು ಚಾಡಿ ಹೇಳಿದ್ದರು. ಕೃಷ್ಣ ಅವರು ಮೊದಲ ದಿನವೇ ನನ್ನನ್ನು ಸಂಪುಟದಿಂದ ಕೈಬಿಟ್ಟಿದ್ದರು. ಆಮೇಲೆ ನಾನು ಅವರ ಜೊತೆ ಜಗಳ ಮಾಡಿದೆ. ಅನಂತರ ಕೃಷ್ಣ ಅವರು ಸೋನಿಯಾ ಗಾಂಧಿ ಅವರ ಜೊತೆ ಮಾತನಾಡಿ ಸಂಪುಟಕ್ಕೆ ಸೇರಿಸಿಕೊಂಡರು.
ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ, ಧರ್ಮರಾಯನ ಧರ್ಮತ್ವ, ಕರ್ಣನ ಧಾನತ್ವ, ಅರ್ಜುನನ ಗುರಿ, ವಿದುರನ ನೀತಿ, ಭೀಮನ ಬಲ, ಕೃಷ್ಣನ ತಂತ್ರ ಇರಬೇಕು. ಈ ಎಲ್ಲಾ ಗುಣಗಳು ಎಸ್.ಎಂ ಕೃಷ್ಣ ಅವರಲ್ಲಿ ಇತ್ತು.
ಉಳಿ ಏಟು ಬೀಳದೆ ಯಾವ ಕಲ್ಲು ಶಿಲೆ ಆಗುವುದಿಲ್ಲ. ಕಲ್ಲು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಕೃಷ್ಣ ಅವರ ಜತೆಗೆ ನನ್ನ ರಾಜಕಾರಣ ಒಡನಾಟದಲ್ಲಿ ಅವರು ಯಾರೊಬ್ಬರಿಗೂ ತೊಂದರೆ ಮಾಡಿಲ್ಲ. ಅವರನ್ನು ದೇವೇಗೌಡರು ಯಾವ ದೃಷ್ಟಿಯಲ್ಲಿ ನೋಡುತ್ತಿದ್ದರು ಎಂದು ಈಗ ಹೇಳುವುದಿಲ್ಲ. ದೇವೇಗೌಡರ ಮಕ್ಕಳು ಕೂಡ ಅವರ ಬಳಿ ಬಂದು ಸಹಾಯ ಪಡೆದಿದ್ದಾರೆ. ಕೃಷ್ಣ ಅವರು ತಮಗೆ ಸಿಕ್ಕ ಅಧಿಕಾರದಲ್ಲಿ ನಾಲ್ಕು ಜನರಿಗೆ ಸಹಾಯ ಮಾಡಿದರೆ ಹೊರತು ಯಾರಿಗೂ ತೊಂದರೆ ಮಾಡಲಿಲ್ಲ.
ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ನಂಬಿಕೆ ಇಲ್ಲದಿದ್ದರೆ ಸಂಬಂಧ ಉಳಿಯುವುದಿಲ್ಲ. ನನ್ನಂತಹ ಹತ್ತಾರು ನಾಯಕರನ್ನು ತಯಾರಿ ಮಾಡಿರುವುದೇ ಅವರ ಆಸ್ತಿ. ಎಲ್ಲಾ ಸಮುದಾಯದವರನ್ನು ಅವರು ನಾಯಕರನ್ನಾಗಿ ಮಾಡಿದ್ದಾರೆ. ಅವರು ಯಾವುದೇ ಒಂದು ಜಾತಿ ಹಾಗೂ ಸಮುದಾಯಕ್ಕೆ ಮಾತ್ರ ನೆರವು ನೀಡಿಲ್ಲ, ಎಲ್ಲಾ ಸಮಾಜದ ಕಲ್ಯಾಣಕ್ಕೆ ಕಾರ್ಯಕ್ರಮ ನೀಡಿದ್ದಾರೆ.
ಕೃಷ್ಣ ಅವರ ಆಲೋಚನೆ ಬಹಳ ದೂರದೃಷ್ಟಿಯದ್ದಾಗಿತ್ತು. ಭವಿಷ್ಯದ ದೃಷ್ಟಿಯಿಂದ ಅವರು ಎಲ್ಲಾ ಕಾರ್ಯಕ್ರಮ ರೂಪಿಸಿದ್ದರು.
ಮೈಸೂರಿನಲ್ಲಿ ಅವರು ಇನ್ಫೋಸಿಸ್ ಕ್ಯಾಂಪಸ್ ಗೆ ಸಹಾಯ ಮಾಡಿದರು. ಕೆಲವೇ ವರ್ಷಗಳಲ್ಲಿ ಆ ಸಂಸ್ಥೆಯಿಂದ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಕೋಟ್ಯಂತರ ಹಣ ಬಂದಿತು.
ಅವರು ಅಧಿಕಾರ ಅವಧಿ ಮುಗಿಯುವ ಮುನ್ನ ಚುನಾವಣೆಗೆ ಹೋಗುವ ವಿಚಾರವಾಗಿ ನಾನು ಬಹಳ ಜಗಳ ಆಡಿದ್ದೆ. ಆದರೂ ಅವರು ತೀರ್ಮಾನ ಮಾಡಿ ಆರು ತಿಂಗಳು ಮುಂಚಿತವಾಗಿ ಚುನಾವಣೆ ಮಾಡಿದರು. ನಾವು ಸೋತ ನಂತರ ಅವರ ಮನೆಗೆ ಹೋದಾಗ, ನಾನು ಈ ವಿಚಾರದಲ್ಲಿ ನಿನ್ನ ಮಾತು ಕೇಳಬೇಕಾಗಿತ್ತು ಎಂದು ಹೇಳಿದರು. ಈಗ ಇದೆಲ್ಲವೂ ಇತಿಹಾಸ. ಇತ್ತೀಚೆಗೆ ನಾವು ಕಾವೇರಿ ವಿಚಾರವಾಗಿ ಚರ್ಚೆ ಮಾಡುವಾಗ ಕೃಷ್ಣ ಅವರು ರಾಜ್ಯದ ಹಿತಕ್ಕೆ ಅಧಿಕಾರ ತ್ಯಾಗಕ್ಕೆ ಮುಂದಾಗಿದ್ದನ್ನು ಸ್ಮರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ