ಬೆಳಗಾವಿಯಲ್ಲಿ ಶೆಫರ್ಡ್ ಇಂಡಿಯಾ ಬೃಹತ್ ಸಮಾವೇಶ: ಸಿಎಂ ಸಿದ್ದರಾಮಯ್ಯಗೆ ರಾಷ್ಟ್ರೀಯ ಸಮ್ಮಾನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯಲ್ಲಿಮಂಗಳವಾರ ನಡೆಯಲಿರುವ ಶೆಫರ್ಡ್ ಇಂಡಿಯಾ ಇಂಟರ್ ನ್ಯಾಶನಲ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಷ್ಟ್ರೀಯ ಸನ್ಮಾನ ಮಾಡಲಾಗುವುದು ಎಂದು ಶೆಫರ್ಡ್ ಇಂಡಿಯಾ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ, ಬಿಜೆಪಿ ಎಂಎಲ್ಸಿ ಎಚ್.ವಿಶ್ವನಾಥ ತಿಳಿಸಿದರು.
ಬೆಳಗಾವಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾವೇಶದಲ್ಲಿ 2 ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ಸಮಾವೇಶದ ಮಂಟಪಕ್ಕೆ ಕಿತ್ತೂರು ರಾಣಿ ಚನ್ನಮ್ಮ ಹೆಸರು ಹಾಗೂ ವೇದಿಕೆಗೆ ಸಂಗೊಳ್ಳಿ ರಾಯಣ್ಣ ಹೆಸರಿಡಲಾಗಿದೆ ಎಂದು ತಿಳಿಸಿದರು.
ಮಾಜಿ ಸಚಿವ, ಶೆಫರ್ಡ್ ಇಂಡಿಯಾ ರಾಷ್ಟ್ರೀಯ ಉಪಾಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, ಸಮಾವೇಶದಲ್ಲಿ ಮೀಸಲಾತಿ, ಹಿಂದುಳಿದ ವರ್ಗದ ಮಹಿಳೆಗೆ ರಾಜಕೀಯ ಮೀಸಲಾತಿ ಸೇರಿದಂತೆ 10 ವಿವಿಧ ಬೇಡಿಕೆಗಳನ್ನು ಮಂಡಿಸಲಾಗುವುದು. ವಿವಿಧ ರಾಜ್ಯಗಳಿಂದ ಮಂತ್ರಿಗಳು, ಶಾಸಕರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲೇ ಅತೀ ಹೆಚ್ಚು ಕುರುಬರಿರುವ ಬೆಳಗಾವಿಯಲ್ಲಿ ಕುರುಬರಿಗೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಹಾಗಾಗಿ ಇಲ್ಲಿ ಸಮಾವೇಶ ನಡೆಸಲಾಗುತ್ತಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲೂ ಕುರುಬರಿಗೆ ಟಿಕೆಟ್ ಕೇಳಲಾಗುವುದು ಎಂದು ಅವರು ಹೇಳಿದರು.
ಸಚಿವ ಸತೀಶ್ ಜಾರಕಿಹೊಳಿ ಅಧ್ಯಕ್ಷತೆ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗೌರವಾಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚಿಸಲಾಗಿದೆ.
ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ, ವಿವೇಕರಾವ್ ಪಾಟೀಲ, ಲಕ್ಷ್ಮಣರಾವ್ ಚಿಂಗಳೆ, ರಾಜೇಂದ್ರ ಸಣ್ಣಕ್ಕಿ ಮೊದಲಾದವರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ