Belagavi NewsBelgaum NewsKannada NewsKarnataka News

ಭಗವದ್ಗೀತೆ ಅಭಿಯಾನ ಯಶಸ್ವಿಗೊಳಿಸಲು ಸ್ವರ್ಣವಲ್ಲೀ ಶ್ರೀ ಕರೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯನ್ನು ಕೇಂದ್ರವಾಗಿರಿಸಿಕೊಂಡು ನಡೆಸಲಾಗುತ್ತಿರುವ ಈ ವರ್ಷದ ರಾಜ್ಯ ಮಟ್ಟದ ಭಗವದ್ಗೀತೆ ಅಭಿಯಾನವನ್ನು ಯಶಸ್ವಿಗೊಳಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಠದ ಮಠಾಧೀಶ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಕರೆ ನೀಡಿದ್ದಾರೆ.

ಭಗವದ್ಗೀತೆ ಅಭಿಯಾನ ಸಿದ್ಧತೆಗಳ ಕುರಿತು ಗುರುವಾರ ಮತ್ತು ಶುಕ್ರವಾರ ಬೆಳಗಾವಿಯಲ್ಲಿ ಸರಣಿ ಸಭೆಗಳನ್ನು ನಡೆಸಿದ ಸ್ವಾಮಿಗಳು, ಜನರನ್ನು ಮಾನಸಿಕವಾಗಿ ಸದೃಢಗೊಳಿಸುವ ಉದ್ದೇಶ ಭಗವದ್ಗೀತೆ ಅಭಿಯಾನದ ಹಿಂದಿದೆ. ಜಾತಿ, ಮತ ಬೇಧವಿಲ್ಲದೆ, ಎಲ್ಲರನ್ನೂ ತಲುಪಬೇಕು. ಎಲ್ಲರನ್ನೂ ಒಳಗೊಂಡ ಸಮಿತಿಗಳನ್ನು ರಚಿಸುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಅವರು ತಿಳಿಸಿದರು. 

ನವೆಂಬರ್ 21ರಂದು ಭಗವದ್ಗೀತೆ ಅಭಿಯಾನದ ರಾಜ್ಯಮಟ್ಟದ ಕಾರ್ಯಕ್ರಮದ ಉದ್ಘಾಟನೆ ಹಾಗೂ ಡಿಸೆಂಬರ್ 23ರಂದು ಮಹಾಸಮರ್ಪಣೆ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಜಿಲ್ಲಾ ಸಮಿತಿ, ತಾಲೂಕು ಸಮಿತಿಗಳು, ಪ್ರಶಿಕ್ಷಣ ಸಮಿತಿ, ಪ್ರವಚನ ಸಮಿತಿ, ಸಂಪರ್ಕ ಸಮಿತಿ ಮೊದಲಾದವುಗಳನ್ನು ರಚಿಸುವ ಕಾರ್ಯ ನಡೆಯುತ್ತಿದೆ. ಒಂದು ತಿಂಗಳ ಕಾಲ ಶಾಲೆ – ಕಾಲೇಜುಗಳಲ್ಲಿ, ದೇವಸ್ಥಾನಗಳಲ್ಲಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಭಗವದ್ಗೀತೆಯ 10ನೇ ಅಧ್ಯಾಯದ ಪಠಣ ನಡೆಯಲಿದೆ ಎಂದು ಶ್ರೀಗಳು ತಿಳಿಸಿದರು.

ಕಳೆದ 17 ವರ್ಷಗಳಿಂದ ಭಗವದ್ಗೀತೆ ಅಭಿಯಾನ ನಡೆಸಿಕೊಂಡು ಬರಲಾಗುತ್ತಿದ್ದು, ಈಗ ಭಗವದ್ಗೀತೆ ಎಲ್ಲರ ಮನಸ್ಸಿಗೆ ಬಂದಿದೆ. ಎಲ್ಲರಲ್ಲೂ ಶೃದ್ಧೆ ಬಂದಿದೆ. ಈ ಬಾರಿಯದ್ದು ಹಿಂದಿನ ಅಭಿಯಾನಗಳಿಗಿಂತ ಯಶಸ್ವಿ ಅಭಿಯಾನವಾಗಬೇಕು. ಕಾರ್ಯಕರ್ತರ ಸಂಖ್ಯೆ ಹಾಗೂ ಪ್ರಶಿಕ್ಷಕರ ಸಂಖ್ಯೆ ಸಾಧ್ಯವಾದಷ್ಟು ಹೆಚ್ಚಾಗಬೇಕು. ಎಲ್ಲರನ್ನೂ ಸೇರಿಸಿಕೊಂಡು ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಅವರು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button