Belagavi NewsBelgaum NewsKannada NewsKarnataka News

ಬೆಳಗಾವಿ ಜಿಲ್ಲೆಯಲ್ಲಿ 2.78 ಲಕ್ಷ ಹೆಕ್ಟೇರ್ ಬೆಳೆಹಾನಿ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾಹಿತಿ

ಕೇಂದ್ರ ಬರ ಅಧ್ಯಯನ ತಂಡದಿಂದ ಪರಿಶೀಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಎದುರಾಗಿರುವ ತೀವ್ರ ಬರ ಪರಿಸ್ಥಿತಿಯನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ಐದು ಜನ ಅಧಿಕಾರಿಗಳ ತಂಡವು ಇಂದು ಪರಿಶೀಲಿಸಿತು.

ನಗರದ ಪ್ರವಾಸಿಮಂದಿರದಲ್ಲಿ ಶುಕ್ರವಾರ (ಅ‌.6) ಬೆಳಿಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಜತರ ಚರ್ಚಿಸಿದ ಬಳಿಕ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.

ಮೊದಲಿಗೆ ಬೈಲಹೊಂಗಲ ತಾಲ್ಲೂಕಿನ ನೇಸರಗಿ ಬಳಿಯ ನಾಗಪ್ಪ ಹಬಿ ಅವರ ಜಮೀನಿನಲ್ಲಿ ಸೋಯಾಬಿನ್ ಹಾಗೂ ರಾಜು ಹೊಂಗಲ್ ಹಾಗೂ ಬಸಪ್ಪ ಕುಂಟಿಗೇರಿ ಅವರ ಜಮೀನಿನಲ್ಲಿ ಕ್ಯಾರೆಟ್ ಬೆಳೆಹಾನಿಯನ್ನು ವೀಕ್ಷಿಸಿದರು.

ಎಕರೆಗೆ 52 ಸಾವಿರ ಎರಡು ಎಕರೆಗೆ ಒಂದು‌ ಲಕ್ಷಕ್ಕೂ ಅಧಿಕ ಖರ್ಚು ಮಾಡಲಾಗಿದೆ. ಬೀಜ-ಗೊಬ್ಬರಕ್ಕಾಗಿ ಒಂದು ಎಕರೆಗೆ 25 ಸಾವಿರ ಖರ್ಚಾಗಿದೆ ಎಂದು ಬಸಪ್ಪ ಕುಂಟಿಗೇರಿ ಅಳಲು ತೋಡಿಕೊಂಡರು.

ನೇಸರಗಿ ಭಾಗದಲ್ಲಿಯೇ 295 ಹೆಕ್ಟೇರ್ ಕ್ಯಾರೇಟ್ ಬಿತ್ತನೆ ಮಾಡಲಾಗಿದೆ. ಇಳುವರಿ ಸಂಪೂರ್ಣ ಹಾಳಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.

ಪ್ರತಿಯೊಬ್ಬ ರೈತರು ಐದಾರು ಎಕರೆ ಕ್ಯಾರೇಟ್ ಬಿತ್ತನೆ ಮಾಡಿದ್ದು, ಬಳೆಹಾನಿಯಾಗಿರುವುದರಿಂದ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ರೈತರು ಸಮಸ್ಯೆ ವಿವರಿಸಿದರು.

ತಂಡದ ಮುಖ್ಯಸ್ಥರು ಹಾಗೂ ಸದಸ್ಯರು ಸ್ವತಃ ರೈತರೊಂದಿಗೆ ಚರ್ಚಿಸಿ, ಬೆಳೆಹಾನಿಯ ಕುರಿತು ಮಾಹಿತಿ ಸಂಗ್ರಹಿಸಿದರು.

ಇದಾದ ಬಳಿಕ ಮೀರಪ್ಪ ಹುಕ್ಕೇರಿ ಅವರ ಹನ್ನೆರಡು ಎಕರೆ ಸೋಯಾಬಿನ್ ಬೆಳೆಹಾನಿ ಪರಿಶೀಲಿಸಿದರು.

ಎಕರೆಗೆ ಹತ್ತೆನ್ನರಡು ಎಕರೆ ಇಳುವರಿ ಬರಬೇಕಿತ್ತು. ಮಳೆಕೊರತೆಯಿಂದ ಸಂಪೂರ್ಣ ಹಾನಿಯಾಗಿದೆ. ಸ್ಚಲ್ಪ ಮಳೆಯಾಹಿರುವುದರಿಂದ ಹಸಿರು ಕಾಣಿಸುತ್ತಿದೆ. ಆದರೆ ಇಳುವರಿ ಇಲ್ಲ ಎಂದು ರೈತ ಮಹಿಳೆ ಕಮಲವ್ವ ನಡಹಟ್ಟಿ ವಿವರಿಸಿದರು.

ಚಚಡಿಯಲ್ಲಿ ವೀರಭದ್ರಪ್ಪ ಹೊಸಮನಿಯವರ ಒಂದೂವರೆ ಎಕರೆ ಸೂರ್ಯಕಾಂತಿ ಬೆಳೆಹಾನಿ ವೀಕ್ಷಿಸಿದರು.

ಈಗಾಗಲೇ 20 ಸಾವಿರ ಖರ್ಚು ಮಾಡಲಾಗಿದೆ ಎಂದು ರೈತರು ವಿವರಿಸಿದರು.

ಕೇಂದ್ರ ಅಧ್ಯಯನ ತಂಡದ ಮುಖ್ಯಸ್ಥರಾದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ಅವರು, ಬೆಳೆವಿಮೆ ಪಾವತಿ, ಬೀಜ-ಗೊಬ್ಬರ, ಕೃಷಿ ಕೂಲಿಕಾರರ ಖರ್ಚು-ವೆಚ್ಚಗಳ ಬಗ್ಗೆ ಸ್ವತಃ ರೈತರಿಂದಲೇ ಮಾಹಿತಿಯನ್ನು ಪಡೆದುಕೊಂಡರು.

ಜಿಲ್ಲೆಯಲ್ಲಿ 2.78 ಲಕ್ಷ ಹೆಕ್ಟೇರ್ ಬೆಳೆಹಾನಿ: 

ಜಿಲ್ಲೆಯಲ್ಲಿ ಮಳೆಕೊರತೆಯಿಂದ 2.78 ಲಕ್ಷ ಹೆಕ್ಟೇರ್ ಬೆಳೆಹಾನಿಯಾಗಿದೆ. ಈ ಕುರಿತು ಸಮಗ್ರ ಮಾಹಿತಿ ಹಾಗೂ ಛಾಯಾಚಿತ್ರಗಳ ಮೂಲಕ ಪ್ರಾತ್ಯಕ್ಷಿಕೆ ನೀಡಲಾಗಿದೆ. ವಾಸ್ತವದಲ್ಲಿ ಕೃಷಿ ಹಾಗೂ ತೋಟಗಾರಿಕೆ ಸೇರಿದಂತೆ ಅಪಾರ ಬೆಳೆಹಾನಿಯಾಗಿದೆ. ಆದರೆ ಎನ್.ಡಿ.ಆರ್.ಎಫ್. ಮಾರ್ಗಸೂಚಿ ಪ್ರಕಾರ 332 ಕೋಟಿ ಆಗಲಿದೆ. ಈ ಕುರಿತು ಈಗಾಗಲೇ ಕೇಂದ್ರ ಸರಕಾರಕ್ಕೆ ಮನವಿತ್ರ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಸೋಯಾಬಿನ್, ಹತ್ತಿ, ಸೂರ್ಯಕಾಂತಿ, ಕ್ಯಾರೇಟ್, ಗೋವಿನಜೋಳ, ಕಬ್ಬು, ಟೊಮ್ಯಾಟೋ, ಬಟಾಣಿ ಸೇರಿದಂತೆ ವಿವಿಧ ಬಗೆಯ ಬೆಳೆಗಳು ಹಾನಿಯಾಗಿರುತ್ತವೆ ಎಂದು ತಿಳಿಸಿದರು.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ತಂಡದಲ್ಲಿ ಎಣ್ಣೆಬೀಜ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ.ಕೆ.ಪೊನ್ನುಸ್ವಾಮಿ, ಕೇಂದ್ರ ಆರ್ಥಿಕ ವೆಚ್ಚ ಇಲಾಖೆಯ ಸಹಾಯಕ ನಿರ್ದೇಶಕರಾದ ಮಹೇಂದ್ರ ಚಂಡೇಲಿಯಾ, ನೀತಿ ಆಯೋಗದ ಸಂಶೋಧನಾ ಅಧಿಕಾರಿ ಶಿವಚರಣ ಮೀನಾ ಹಾಗೂ ಕರ್ನಾಟಕ ರಾಜ್ಯ ಕೃಷಿ ಇಲಾಖೆಯ ಆಯುಕ್ತರಾದ ವೈ.ಎಸ್.ಪಾಟೀಲ ಇದ್ದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ್, ಕೃಷಿ ಇಲಾಖೆಯ ಹಿರಿಯ ಅಧಿಕಾರಿ ಡಾ.ವಿ.ಜೆ.ಪಾಟೀಲ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಉಪ ವಿಭಾಗಾಧಿಕಾರಿ ಶ್ರವಣ್ ನಾಯಕ, ಬೆಳಗಾವಿ ಜಿಲ್ಲೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಉಪ ನಿರ್ದೇಶಕ ಡಾ.ಎಚ್.ಡಿ.ಕೋಳೇಕರ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಹಾಂತೇಶ ಮುರಗೋಡ, ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಉಪ ನಿರ್ದೇಶಕ ಡಾ.ರಾಜೀವ್ ಕೂಲೇರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬೈಲಹೊಂಗಲ ತಾಲ್ಲೂಕಿನ ನೇಸರಗಿ, ಕಲಕುಪ್ಪಿ, ಸವದತ್ತಿ ತಾಲ್ಲೂಕಿನ ಚಚಡಿ, ಹಲಕಿ, ಯರಗಟ್ಟಿ ತಾಲ್ಲೂಕಿನ ಬೂದಿಗೊಪ್ಪ, ಯರಗಣವಿ, ರಾಮದುರ್ಗ ತಾಲ್ಲೂಕಿನ ಕೆ.ಚಂದರಗಿ, ಬೂದನೂರ/ಸಾಲಹಳ್ಳಿ ಮತ್ತಿತರ ಗ್ರಾಮದ ವ್ಯಾಪ್ತಿಯಲ್ಲಿ ಕೇಂದ್ರ ಅಧ್ಯಯನ ತಂಡವು ಭೇಟಿ ನೀಡಿ ಬೆಳೆಹಾನಿ ಪರಿಶೀಲಿಸಿತು.

ಬರ ಪರಿಸ್ಥಿತಿ-ಕೇಂದ್ರ ತಂಡಕ್ಕೆ ಮನವರಿಕೆ:

ಜಿಲ್ಲೆಯ ಬರ ಪರಿಸ್ಥಿತಿಯ ಅಧ್ಯಯನಕ್ಕಾಗಿ ಆಗಮಿಸಿರುವ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ಕೇಂದ್ರ ಬರ ಅಧ್ಯಯನ ತಂಡಕ್ಕೆ ಶುಕ್ರವಾರ(ಅ.6) ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಅಂಕಿ-ಅಂಶಗಳು ಮತ್ತು ಛಾಯಾಚಿತ್ರ ಸಮೇತ ಮಾಹಿತಿಯನ್ನು ಬರಪರಿಸ್ಥಿತಿಯನ್ನು ಮನವರಿಕೆ ಮಾಡಿದರು.

ಜಿಲ್ಲೆಯ ಎಲ್ಲ ಹದಿನೈದು ತಾಲ್ಲೂಕುಗಳಲ್ಲಿ ಬಿತ್ತನೆ ಸಂದರ್ಭದಲ್ಲಿ ಮೂರು ವಾರಕ್ಕಿಂತ ಹೆಚ್ಚು ಅವಧಿಯವರೆಗೆ ಮಳೆಯಾಗಿರಲಿಲ್ಲ. ಆದ್ದರಿಂದ ಬರ‌ ಪರಿಸ್ಥಿತಿ ಎದುರಾಗಿದೆ. 

ಜಿಲ್ಲೆಯ ಹದಿನೈದು ತಾಲ್ಲೂಕುಗಳ ಪೈಕಿ ಬೆಳಗಾವಿ ಮತ್ತು ಖಾನಾಪುರ ಹೊರತುಪಡಿಸಿ 13 ತಾಲ್ಲೂಕುಗಳನ್ನು ಬರಪೀಡಿತ ಎಂದು ಸರಕಾರ ಘೋಷಿಸಿದೆ.

ಜೂನ್ ಮಾಹೆಯಲ್ಲಿ ಮಳೆ ಬಾರದಿರುವುದರಿಂದ ಯಾವುದೇ ರೀತಿಯ ಬಿತ್ತನೆಕಾರ್ಯ ಆರಂಭಗೊಳ್ಳಲಿಲ್ಲ.

ಜುಲೈ ಮೊದಲ ಮೂರು ವಾರ ಮಳೆ ಬಂದಿರಲಿಲ್ಲ; ಕೊನೆಯ ವಾರದಲ್ಲಿ ಮಾತ್ರ ಮಳೆಯಾಗಿದ್ದರಿಂದ ಆಗ ಬಿತ್ತನೆಕಾರ್ಯ ಆರಂಭಗೊಂಡಿತು. 

ಆಗಸ್ಟ್ ಮಾಹೆಯಲ್ಲೂ ಮಳೆಕೊರತೆಯಾಗಿದ್ದರಿಂದ ರಾಜ್ಯ ಸರಕಾರವು ಬರ ಪರಿಸ್ಥಿತಿಯನ್ನು ಘೋಷಣೆ ಮಾಡಿತು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ವಿವರಿಸಿದರು.

ಎಲ್ಲ ಹದಿಮೂರು ತಾಲ್ಲೂಕುಗಳಲ್ಲಿ ಮಳೆಕೊರತೆಯಿಂದ ತೀವ್ರ ಬರ ಪರಿಸ್ಥಿತಿ ಎದುರಾಗಿದ್ದು, ಬೆಳೆಹಾನಿಯಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಸಭೆಯಲ್ಲಿ ಮಾಹಿತಿಯನ್ನು ನೀಡಿದರು.

ಬೆಳೆಹಾನಿ, ಕುಡಿಯುವ ನೀರಿನ ಕೊರತೆ, ಮೇವು ಕೊರತೆ ಹಾಗೂ ಸಮಸ್ಯೆ ಪರಿಹಾರಕ್ಕೆ ಕೈಗೊಂಡ ಕ್ರಮಗಳ ಕುರಿತು ಮಾಹಿತಿಯನ್ನು ನೀಡಿದರು.

ಕರ್ನಾಟಕ ರಾಜ್ಯ ಕೃಷಿ ಇಲಾಖೆಯ ಆಯುಕ್ತರಾದ ವೈ.ಎಸ್.ಪಾಟೀಲ ಅವರು, ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಮಳೆಕೊರತೆಯಿಂದಾಗಿ ಅನೇಕ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿತ್ತು ಎಂದು ತಿಳಿಸಿದರು.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ತಂಡವು ಜಿಲ್ಲೆಗೆ ಭೇಟಿ ನೀಡಿದ್ದು, ವಿವಿಧ ತಾಲ್ಲೂಕುಗಳಲ್ಲಿ ಸಂಚರಿಸಿ ಬೆಳೆಹಾನಿಯನ್ನು ವೀಕ್ಷಿಸುವ ಮುಂಚೆ ಪ್ರವಾಸಿಮಂದಿರದಲ್ಲಿ ಅಧಿಕಾರಿಗಳ ಜತೆ ಚರ್ಚೆ ನಡೆಸಿತು.

ಇದಾದ ಬಳಿಕ ಜಿಲ್ಲೆಯ ಬರ ಪರಿಸ್ಥಿತಿಯನ್ನು ಪ್ರತಿಬಿಂಬಿಸುವ ಛಾಯಾಚಿತ್ರಗಳನ್ನು ಕೇಂದ್ರ ಅಧ್ಯಯನ ತಂಡವು ವೀಕ್ಷಿಸಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button