Belagavi NewsBelgaum NewsKannada NewsKarnataka News

ಬಿಜೆಪಿ- ಜೆಡಿಎಸ್‌ನವರು ಅಧಿಕಾರ ಸಿಗಲಿಲ್ಲ ಎಂದು ನರಳುತ್ತಿದ್ದಾರೆ, ರಸ್ತೆಗಳಲ್ಲಿ ಮೈ ಪರಚಿಕೊಳ್ಳುತ್ತಿದ್ದಾರೆ: ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಂಗ್ಯ

ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ (ಬೆಳಗಾವಿ) :  ಬಿಜೆಪಿ- ಜೆಡಿಎಸ್‌ನವರು ಅಧಿಕಾರ ಸಿಗಲಿಲ್ಲ ಎಂದು ಕೈ, ಕೈ ಹಿಸುಕಿಕೊಂಡು ನರಳುತ್ತಿದ್ದಾರೆ. ರಸ್ತೆ, ರಸ್ತೆಗಳಲ್ಲಿ ಮೈ ಪರಚಿಕೊಳ್ಳುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.

ಹುಕ್ಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಬುಧವಾರ ಸಂಜೆ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು “ಬಿಜೆಪಿ- ದಳದವರು ಕಾಂಗ್ರೆಸ್ ಸೋಲಿಸಲೆಂದು ಬೇಕಾದಷ್ಟು ಪ್ರಯತ್ನ ಮಾಡಿ ಅವರೇ ಸೋತರು. ಸೋತ ನಂತರ ಮೈತ್ರಿ ಮಾಡಿಕೊಂಡಿದ್ದಾರೆ, ಈಗ ಏನೇನೊ ಮಾತನಾಡುತ್ತಿದ್ದಾರೆ. ಮಾತನಾಡಿಕೊಳ್ಳಲಿ ನಾವೇನೂ ಬೇಸರ ಮಾಡಿಕೊಳ್ಳುವುದಿಲ್ಲ ಎಂದು ಮಾತಿನ ಚಾಟಿ ಬೀಸಿದರು.

ಬೆಳಗಾವಿ ಕಾಂಗ್ರೆಸ್ ಪಾಲಿನ ಅದೃಷ್ಟದ ಭೂಮಿ. ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ನಾಯಕತ್ವ ತೆಗೆದುಕೊಂಡ ಭೂಮಿ, ಚುನಾವಣೆಗೂ ಮುಂಚಿತವಾಗಿ ಪ್ರಜಾಧ್ವನಿ ಯಾತ್ರೆ ಪ್ರಾರಂಭ ಮಾಡಿ ರಾಜ್ಯ ಪ್ರವಾಸ ಮಾಡಿದೆವು. ರಾಜ್ಯದ ಹಾಗೂ ನಿಮ್ಮ ಹೃದಯ ಗೆಲ್ಲುವ ಕೆಲಸ ಮಾಡಲು ಈ ಭೂಮಿಯೇ ಪ್ರೇರಣೆ ಎಂದರು.

ಇಡೀ ರಾಜ್ಯದಲ್ಲಿ ಮೂರು ವರ್ಷಗಳ ಕಾಲ ಹೋರಾಟ ನಡೆಸಿ, ಭ್ರಷ್ಟ ಬಿಜೆಪಿಯನ್ನು ಅಧಿಕಾರದಿಂದ ಇಳಿಸಿ, ನಿಮ್ಮ ಸೇವೆ ಮಾಡಲು ಬಂದಿದ್ದೇವೆ, ನುಡಿದಂತೆ ನಡೆದಿದ್ದೇವೆ.  ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದ ನಿಮಗೆ ಸನ್ಮಾನ ಮತ್ತು ಅಭಿನಂದನೆ ತಿಳಿಸಲು ಬಂದಿದ್ದೇನೆ. ಕಾರ್ಯಕರ್ತರು ಹಗಲು- ರಾತ್ರಿ ದುಡಿದು ಕೆಲಸ ಮಾಡಿದ ಪರಿಣಾಮ ಇಂದು ಅಧಿಕಾರದಲ್ಲಿ ಇದ್ದೇವೆ. ನೀವುಗಳು ಯಾವುದೇ ಸಮಸ್ಯೆಗಳಿದ್ದರೂ ಹಿಂಜರಿಯದೆ ಸರ್ಕಾರದ ಗಮನಕ್ಕೆ ತರಬೇಕು ಎಂದು ತಿಳಿಸಿದರು.

ನಮ್ಮ ಲೆಕ್ಕಾಚಾರದ ತಪ್ಪಿನಿಂದ ಜಿಲ್ಲೆಯಲ್ಲಿ ಒಂದೆರಡು ಸ್ಥಾನಗಳಲ್ಲಿ ಸೋಲಾಯಿತು. ಆದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೋರಾಟ ನಡೆಸೋಣ. ಕಾರ್ಯಕರ್ತರಿಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತೇವೆ, ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಉಳುವವನೆ ಭೂಮಿಯ ಒಡೆಯ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದು ಬಲಿಷ್ಠ ರಾಷ್ಟ್ರವನ್ನಾಗಿ ಭಾರತವನ್ನು ರೂಪಿಸಿದ್ದೇವೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗಗಳು ಅಧಿಕಾರಕ್ಕೆ ಬಂದಂತೆ ಎಂದರು.

ಐದು ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕು ಯೋಜನೆಗಳನ್ನು ಜಾರಿಗೆ ತಂದಿದ್ದು, ಬಸವಣ್ಣನವರ ನುಡಿದಂತೆ ನಡೆ ಎನ್ನುವ ಮಾತಿನಂತೆ ನಿಮ್ಮ ಕಾಂಗ್ರೆಸ್ ಸರ್ಕಾರ ನಡೆಯುತ್ತಿದೆ. ಕೇಂದ್ರ ಸರ್ಕಾರ ಅಕ್ಕಿ ಕೊಡದ ಕಾರಣ ಅಕ್ಕಿಯ ಬದಲು ಹಣ ನೀಡುತ್ತಿದ್ದೇವೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರ ನೇತೃತ್ವದಲ್ಲಿ ಗೃಹಲಕ್ಮೀ ಯೋಜನೆ ಸೇರಿದಂತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಜನಪರ ಯೋಜನೆಗಳು ಮನೆ ಬಾಗಿಲಿಗೆ ಬಂದಿವೆ. ಈ ಯೋಜನೆಗಳನ್ನು ಯಡಿಯೂರಪ್ಪ, ಬೊಮ್ಮಾಯಿ ಅವರು ನೀಡಿದ್ದರೆ ಎಂದು ಪ್ರಶ್ನಿಸಿದರು.

ರೈತರಿಗೆ ಸಂಬಳ, ವರ್ಗಾವಣೆ, ಪ್ರಮೋಷನ್, ಲಂಚ, ನಿವೃತ್ತಿ ಹೀಗೆ ಯಾವುದೂ ಇಲ್ಲ. ರೈತರಿಗೆ ನಾವು ಸಹಾಯ ಮಾಡಲೇಬೇಕು. ಆದ ಕಾರಣ ಹುಕ್ಕೇರಿ ಕ್ಷೇತ್ರದಲ್ಲಿ ನೀರಾವರಿಗೆ ಪ್ರಮುಖ ಆದ್ಯತೆ ನೀಡುತ್ತೇವೆ. ಬೆಳಗಾವಿ ಜಿಲ್ಲೆಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಾಕಿ ನೀರಾವರಿ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ಆಶ್ವಾಸನೆ ನೀಡಿದರು.

ಇಲ್ಲಿಗೆ ಬಂದ ತಕ್ಷಣ ತಾಯಂದಿರು, ಹೆಣ್ಣು ಮಕ್ಕಳು ಅತ್ಯಂತ ಆತ್ಮೀಯವಾಗಿ ಸ್ವಾಗತ ಮಾಡಿದ್ದೀರಿ. ನಾನು ಇಲ್ಲಿಂದ ಶಾಲು, ಹಾರ- ತುರಾಯಿಗಳನ್ನು ತೆಗೆದುಕೊಂಡು ಹೋಗುವುದಿಲ್ಲ, ಬದಲಾಗಿ ನಿಮ್ಮೆಲ್ಲರ ಆಶೀರ್ವಾದವನ್ನು ತೆಗೆದುಕೊಂಡು ಹೋಗುತ್ತೇನೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button