Kannada NewsKarnataka NewsLatestPolitics

*ಇಂದಿನಿಂದ ‘ಸ್ವಾಭಿಮಾನಿ ಕನ್ನಡಿಗರ ಪ್ರಶ್ನೆ’ ಅಭಿಯಾನ ಆರಂಭ*

ಕನ್ನಡಿಗರಿಗೆ ಕೇಂದ್ರ ಸರ್ಕಾರ ಮಾಡುತ್ತಿರುವ ಸಾಲು ಸಾಲು ದ್ರೋಹ ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇಂದಿನಿಂದ ಸಾಮಾಜಿಕ ಜಾಲತಾಣದಲ್ಲಿ ಸ್ವಾಭಿಮಾನಿ ಕನ್ನಡಿಗರ ಪ್ರಶ್ನೆ ಎಂಬ ಅಭಿಯಾನ ಆರಂಭವಾಗಿದ್ದು, ಅಭಿಯಾನದ ಯಶಸ್ಸಿಗೆ ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ನಮ್ಮ ನಾಡು ಕರ್ನಾಟಕ ಎಂದು ಮರುನಾಮಕರಣಗೊಂಡು 50 ವಸಂತಗಳು ತುಂಬುತ್ತಿರುವ ಹೊತ್ತಿನಲ್ಲಿ ಕರ್ನಾಟಕವು ಸಾಗಿಬಂದ ಹಾದಿಯನ್ನು ಸ್ಮರಿಸಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ.

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನ್ಯಾಯಬದ್ಧವಾಗಿ ಸಿಗಬೇಕಾಗಿರುವ ಅನುದಾನ, ತೆರಿಗೆಯಲ್ಲಿ ಪಾಲು, ಬರ ಮತ್ತು ಜಿಎಸ್‌ಟಿ ಪರಿಹಾರ ಪೂರ್ಣಪ್ರಮಾಣದಲ್ಲಿ ಬಂದಿಲ್ಲ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಹುದ್ದೆಗಳು ಮತ್ತು ಐಬಿಪಿಎಸ್‌ ನೇಮಕಾತಿಗಳಲ್ಲಿ ಕನ್ನಡದಲ್ಲಿ ಪರೀಕ್ಷೆ ಎದುರಿಸಲು ಅವಕಾಶ ನೀಡದೆ ಲಕ್ಷಾಂತರ ಯುವ ಕನ್ನಡಿಗರಿಗೆ ಅನ್ಯಾಯ ಮಾಡಲಾಗುತ್ತಿದೆ.

ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಮಾಡಲು ಪ್ರಯತ್ನಿಸಿ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಲಾಗುತ್ತಿದೆ. ನಾಡಿನ ರೈತರ ಜೀವನಾಧಾರವಾಗಿರುವ ಕಾವೇರಿ, ಮಹದಾಯಿ, ಕೃಷ್ಣಾ, ಭದ್ರಾಮೇಲ್ದಂಡೆ ಮೊದಲಾದ ನದಿಗಳ ನೀರಾವರಿ ಯೋಜನೆಗಳಿಗೆ ಬೆಂಬಲ ನೀಡದೆ, ಅನ್ನದಾತನನ್ನು ಸಂಕಷ್ಟಕ್ಕೆ ನೂಕಲಾಗಿದೆ.

ಕನ್ನಡಿಗರೇ ಬೆವರು-ರಕ್ತ ಸುರಿಸಿ ಕಟ್ಟಿ ಬೆಳೆಸಿದ ಕರ್ನಾಟಕದ ಹೆಮ್ಮೆಯ ವಿಜಯಾ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌, ಕಾರ್ಪೊರೇಷನ್‌ ಬ್ಯಾಂಕ್‌ ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಮೊದಲಾದ ಲಾಭದಲ್ಲಿದ್ದ ಬ್ಯಾಂಕುಗಳನ್ನು ನಷ್ಟದಲ್ಲಿದ್ದ ಬ್ಯಾಂಕುಗಳ ಜೊತೆ ವಿಲೀನ ಮಾಡಿ ಕನ್ನಡಿಗರಿಗೆ ದ್ರೋಹ ಎಸಗಲಾಗಿದೆ ಎಂದು ಸಿಎಂ ಕಿಡಿಕಾರಿದ್ದಾರೆ

-ಹೀಗೆ ಕರ್ನಾಟಕದ ವಿರುದ್ಧ ಕೇಂದ್ರದ ಬಿಜೆಪಿ ಸರ್ಕಾರ‌ ನಡೆಸುತ್ತಿರುವ ಅನ್ಯಾಯದ ಸರಮಾಲೆ ಮುಂದುವರೆದಿದೆ, ನಿರಂತರವಾಗಿ ಸ್ವಾಭಿಮಾನಿ ಕನ್ನಡಿಗರನ್ನು ನಿರ್ಲಕ್ಷಿಸಿ ಅವಮಾನಿಸಲಾಗುತ್ತಿದೆ.

ಕೇಂದ್ರ ಬಿಜೆಪಿ ಸರ್ಕಾರದ ಈ ನಡವಳಿಕೆಗಳು ಒಕ್ಕೂಟ ವ್ಯವಸ್ಥೆಯ ಮೂಲ ಆಶಯಕ್ಕೆ ವಿರುದ್ಧವಾಗಿರುವುದರಿಂದ ಅದರ ವಿರುದ್ಧ ಧ್ವನಿಯೆತ್ತುವುದು ಅನಿವಾರ್ಯವೆಂದು ಭಾವಿಸಿ, ಇಂದಿನಿಂದ #ಸ್ವಾಭಿಮಾನಿ_ಕನ್ನಡಿಗರಪ್ರಶ್ನೆ ಎಂಬ ಹ್ಯಾಷ್‌ಟ್ಯಾಗ್ ಅಡಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button