Belagavi NewsBelgaum NewsKannada NewsKarnataka News

ಹಂಗಾಮು‌ ಆರಂಭಿಸುವ ಮುಂಚೆ ದರ ಘೋಷಿಸಬೇಕು: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಕಟ್ಟುನಿಟ್ಟಿನ ಸೂಚನೆ

ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳ ಸಭೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಜಿಲ್ಲೆಯ ಅನೇಕ‌ ಕಾರ್ಖಾನೆಗಳು ದರ ಘೋಷಣೆ ಮಾಡದೇ ಕಬ್ಬು ನುರಿಸುವ ಹಂಗಾಮು ಆರಂಭಿಸಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ಸಭೆಯಲ್ಲಿ ತಮಗೆ ಕಟ್ಟು ನಿಟ್ಟಾಗಿ ನಿರ್ದೇಶನ ಸಹ ನೀಡಲಾಗಿತ್ತು. ಈಗಾಗಲೇ ಕಾರ್ಖಾನೆಯವರು  ಕಬ್ಬು ಹಂಗಾಮು‌ ಆರಂಭಿಸಿರುವ ಮತ್ತು‌ ಇನ್ನು ಮುಂದೆ ಹಂಗಾಮು ಆರಂಭಿಸುವ ಕಾರ್ಖಾನೆಗಳು ತಕ್ಷಣವೇ ಕಡ್ಡಾಯವಾಗಿ ರೈತರಿಗೆ ಪ್ರತಿ ಟನ್ನ ಕಬ್ಬಿಗೆ ನೀಡಬೇಕಾದ ದರ ಘೋಷಣೆ‌ ಮಾಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು ಪ್ರಾರಂಭಿಸುವ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ(ಅ.31) ನಡೆದ ಜಿಲ್ಲೆಯ‌ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ನವೆಂಬರ್ 1 ರ ಬಳಿಕ ಹಂಗಾಮು‌ ಆರಂಭಿಸಲು ತಿಳಿಸಲಾಗಿತ್ತು. ಆದರೆ ಸರಕಾರದ ಅನುಮತಿಯ ಪ್ರಕಾರ ಕೆಲವು ಕಾರ್ಖಾನೆಗಳು ಈಗಾಗಲೇ ಕಬ್ಬು ನುರಿಸುವ ಹಂಗಾಮು ಆರಂಭಿಸಿವೆ. ಆದರೆ ಅನೇಕ ಕಾರ್ಖಾನೆಗಳು ಇದುವರೆಗೆ ಎಫ್ ಆರ್ ಪಿ ದರದಲ್ಲಿ ರೈತರಿಗೆ  ನೀಡುವ ಮೊತ್ತ ಹಾಗೂ H&T ಮೊತ್ತವನ್ನು ಘೋಷಿಸಿರುವುದಿಲ್ಲ ಎಂದು ತಿಳಿಸಿದರು.

ಹಿಂದಿನ ಸಾಲಿನ ಕಬ್ಬು ನುರಿಸಿದ ಕಾರ್ಖಾನೆಗಳು ಎಫ್.ಅರ್.ಪಿ. ಮೇಲೆ ಘೋಷಿಸಿರುವ ಹೆಚ್ಚುವರಿ ದರವನ್ನು ಕಡ್ಡಾಯವಾಗಿ ಪಾವತಿಸಬೇಕು. ಕೆಲ‌ ಕಾರ್ಖಾನೆಗಳು ಕಳೆದ ವರ್ಷ ಪ್ರಕಟಿಸಿರುವ ಹೆಚ್ಚುವರಿ ಮೊತ್ತವನ್ನು ೨ ನೇ ಕಂತಾಗಿ ಇದುವರೆಗೆ ಪಾವತಿಸಿರುವುದಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದರು.

ಹಂಗಾಮು‌ ಆರಂಭಿಸುವ ಮೊದಲು ಕಾರ್ಖಾನೆಯ ಆಡಳಿತ ಮಂಡಳಿ ಸಭೆಯಲ್ಲಿ ಎಫ್.ಆರ್.ಪಿ. ದರದಲ್ಲಿ ರೈತರಿಗೆ ನೀಡುವ ಮೊತ್ತ ಪ್ರತಿ ಟನ್ನಿಗೆ  ಘೋಷಣೆ ಮಾಡಲು ಅನುಮೋದನೆ‌ ಪಡೆದುಕೊಂಡು ಅದನ್ನು ರೈತರಿಗೆ ಮುಂಚಿತವಾಗಿಯೇ ತಿಳಿಸಿದ ಬಳಿಕವೇ ಹಂಗಾಮು ಆರಂಭಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಮುಂದುವರೆದು ಕಬ್ಬು ನಿಯಂತ್ರಣ ಆದೇಶ ಪ್ರಕಾರ ರೈತರಿಗೆ ಕಬ್ಬು ಸರಬರಾಜು ಮಾಡಿದ ಹದಿನೈದು ದಿನಗಳಲ್ಲಿ ಬಿಲ್ ಪಾವತಿಸಲು ಸೂಚನೆ:

ಕಬ್ಬು ಕಟಾವು ಮಾಡಿದ‌ ಹದಿನೈದು‌ ದಿನಗಳಲ್ಲಿ ರೈತರಿಗೆ ನಿಯಮಾನುಸಾರ ಕಬ್ಬಿನ  ಹಣ ಪಾವತಿಸಬೇಕು. ಅಳತೆ ಮತ್ತು ತೂಕ ವ್ಯವಸ್ಥೆ ಪಾರದರ್ಶಕವಾಗಿರಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ತೂಕ ಮತ್ತು ಅಳತೆಯ ಬಗ್ಗೆ ಕಬ್ಬು ಪೂರೈಕೆದಾರ ರೈತರಿಗೆ ವಿಶ್ವಾಸ ಮೂಡಿಸಬೇಕು. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಅನೀರಿಕ್ಷಿತ ಭೇಟಿ‌ ನೀಡಿ ಪರಿಶೀಲನೆ ಕೈಗೊಳ್ಳಬೇಕು.

ಪ್ರತಿ ಕಾರ್ಖಾನೆಯ ತೂಕ ಮತ್ತು ಅಳತೆ ವ್ಯವಸ್ಥೆಯನ್ನು ಪರಿಶೀಲಿಸಲು ಅನುಕೂಲವಾಗುವಂತೆ ಕಂದಾಯ, ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ತಾಲ್ಲೂಕು ಮಟ್ಟದಲ್ಲಿ ತಂಡಗಳನ್ನು ರಚಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ್, ಇತ್ತೀಚೆಗೆ ನಡೆದ ಕಾರ್ಖಾನೆ ಮಾಲೀಕರ ಸಭೆಯಲ್ಲಿ ನಿರ್ಧರಿಸಿದಂತೆ ಹಂಗಾಮು‌ ಆರಂಭಿಸುವ ಮುಂಚೆ ದರ ಘೋಷಣೆ ಮಾಡಬೇಕಿತ್ತು. ಆದರೆ ಕೆಲವರು ದರ ಘೋಷಿಸದೇ ಹಂಗಾಮು‌ ಆರಂಭಿಸಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ್ ಕಂಕಣವಾಡಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ತೂಕ‌ ಮತ್ತು ಅಳತೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲೆಯ ಎಲ್ಲ ಕಾರ್ಖಾನೆಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button