ರೈಲು ಹಳಿ ಪಕ್ಕದಲ್ಲಿ ಭೂ ಕುಸಿತ: ರೈಲುಗಳ ಸಂಚಾರದಲ್ಲಿ ವಿಳಂಬ
ಪ್ರಗತಿವಾಹಿನಿ ಸುದ್ದಿ, ಖಾನಾಪುರ:
ತಾಲೂಕಿನ ಲೋಂಡಾ ರೈಲು ನಿಲ್ದಾಣದಿಂದ ಗೋವಾದತ್ತ ಸಾಗುವ ರೈಲ್ವೆ ಹಳಿಯ ಪಕ್ಕದಲ್ಲಿ ಭೂ ಕುಸಿತ ಉಂಟಾದ ಪರಿಣಾಮ ರಾಜ್ಯದಿಂದ ಗೋವಾ ರಾಜ್ಯದತ್ತ ಹೋಗುವ ಮತ್ತು ಬರುವ ಎಲ್ಲ ರೈಲುಗಳ ಸಂಚಾರದಲ್ಲಿ ವಿಳಂಬವಾಗಿದೆ.
ಘಟನೆಯಿಂದ ಪ್ರಯಾಣಿಕರು ಪರದಾಡಿದ್ದು, ಇಲಾಖೆಯ ನುರಿತ ತಂತ್ರಜ್ಞರು ಮತ್ತು ಸಿಬ್ಬಂದಿಯ ನೆರವಿನೊಂದಿಗೆ ಭಾನುವಾರ ಸಂಜೆಯ ವೇಳೆಗೆ ಈ ಮಾರ್ಗವನ್ನು ದುರಸ್ತಿಗೊಳಿಸಲಾಗಿದೆ.
ಘಟನೆಯ ವಿವರ
ಲೋಂಡಾ ನಿಲ್ದಾಣದಿಂದ 2 ಕಿಮೀ ದೂರದ ತಿನೈಘಾಟ್, ಕ್ಯಾಸಲರಾಕ್ ನಿಲ್ದಾಣಗಳ ಮೂಲಕ ಗೋವಾ ರಾಜ್ಯದತ್ತ ಸಾಗುವ ರೈಲ್ವೆ ಮಾರ್ಗದಲ್ಲಿ ಲೋಂಡಾ ಮಸೀದಿ ಬಳಿ ರೈಲು ಹಳಿಗಳ ಪಕ್ಕದ ಭೂಮಿಯಲ್ಲಿ ಮಣ್ಣು ಕುಸಿದಿತ್ತು.
ಲೋಂಡಾ ಸುತ್ತಮುತ್ತ ಕಳೆದ ಹಲವು ದಿನಗಳಿಂದ ಸುರಿದ ಭಾರೀ ಮಳೆಯಿಂದ ಈ ಭಾಗದಲ್ಲಿ ತೇವಾಂಶ ಹೆಚ್ಚಾಗಿ ಭೂಮಿ ಕುಸಿದಿತ್ತು. ಇದನ್ನು ಗಮನಿಸಿದ ಸ್ಥಳೀಯರು ಲೋಂಡಾ ನಿಲ್ದಾಣಕ್ಕೆ ತಿಳಿಸಿದರು. ಸುದ್ದಿ ತಿಳಿದ ರೈಲ್ವೆ ಇಲಾಖೆಯ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಭೂಮಿ ಕುಸಿದಿದ್ದ ಮಾರ್ಗದಲ್ಲಿ ಸಂಚರಿಸುವ ಎಲ್ಲ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಿದ್ದರು.
ಇದನ್ನೂ ಓದಿ – ಖಾನಾಪುರಕ್ಕೆ ಎರಡೇ ಮಾರ್ಗ; ರೈಲು ಮಾರ್ಗವೂ ಡೇಂಜರ್
ಬಳಿಕ ಮೇಲಧಿಕಾರಿಗಳಿಗೆ ಸುದ್ದಿ ತಿಳಿಸಿದ್ದರಿಂದ ಮಧ್ಯಾಹ್ನ ಜೆಸಿಬಿ ಯಂತ್ರ ಮತ್ತು ಆಧುನಿಕ ಸಲಕರಣೆಗಳ ಸಮೇತ ಇಲಾಖೆಯ ಕುಶಲಕರ್ಮಿಗಳು ಸ್ಥಳಕ್ಕಾಗಮಿಸಿ ಹಳಿಗಳ ಪಕ್ಕದ ಕುಸಿದ ಪ್ರದೇಶದಲ್ಲಿ ಒಡ್ಡುಗಳನ್ನು ನಿರ್ಮಿಸಿ ರೈಲು ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಈ ಘಟನೆಯಿಂದಾಗಿ ವಾಸ್ಕೋ ಡ ಗಾಮಾ ಹಜರತ್ ನಿಜಾಮುದ್ದೀನ್ ನಿಲ್ದಾಣಗಳ ನಡುವೆ ಸಂಚರಿಸುವ ಗೋವಾ ಎಕ್ಸಪ್ರೆಸ್ ಸೇರಿದಂತೆ ಹಲವು ರೈಲುಗಳ ಸಂಚಾರದಲ್ಲಿ ವಿಳಂಬವಾಗಿದೆ ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ – ರೈಲ್ವೆ ಕಾಮಗಾರಿಗಳಿಗೆ ವೇಗ -ಸಚಿವ ಸುರೇಶ ಅಂಗಡಿ ಭರವಸೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ