Kannada NewsKarnataka NewsLatestPolitics

*ನಕಲಿ ಪತ್ರ ಇಟ್ಟುಕೊಂಡು ಪತ್ರಿಕಾಗೋಷ್ಠಿ ನಡೆಸಿ ಸೋಲೋಪ್ಪಿಕೊಂಡ ಕೆಸಿಆರ್: ಡಿಸಿಎಂ ಡಿ.ಕೆ. ಶಿವಕುಮಾರ್*

ನನ್ನ ಎಲೆಕ್ಟ್ರಾನಿಕ್ ಸಹಿ ದುರ್ಬಳಕೆಯಾಗಿದೆ; ಪೊಲೀಸರಿಗೆ ದೂರು ನೀಡಿತ್ತೇನೆ ಎಂದ ಡಿಸಿಎಂ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ನಕಲಿ ಪತ್ರ ಇಟ್ಟುಕೊಂಡು ಪತ್ರಿಕಾಗೋಷ್ಠಿ ಮಾಡುವಷ್ಟು ಹೀನಾಯ ಸ್ಥಿತಿಗೆ ತಲುಪಿದ್ದು, ಈ ಮೂಲಕ ಮುಂಬರುವ ತೆಲಂಗಾಣ ವಿಧಾನಸಭೆಯ ಚುನಾವಣೆಯ ಸೋಲನ್ನು ಈಗಲೇ ಒಪ್ಪಿಕೊಂಡಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ತಮ್ಮ ಹೆಸರಿನಲ್ಲಿ ಆಪಲ್ ಏರ್ಪಾಡ್ ಉತ್ಪಾದನಾ ಘಟಕ ಸ್ಥಳಾಂತರ ವಿಚಾರವಾಗಿ ಫಾಕ್ಸ್ ಕಾನ್ ಸಂಸ್ಥೆಗೆ ಬರೆದಿರುವಂತೆ ಸೃಷ್ಟಿಸಲಾದ ನಕಲಿ ಪತ್ರ ಇಟ್ಟುಕೊಂಡು ತೆಲಂಗಾಣ ಮುಖ್ಯಮಂತ್ರಿಗಳು ಪತ್ರಿಕಾಗೋಷ್ಠಿ ನಡೆಸಿರುವ ವಿಚಾರವಾಗಿ ಶಿವಕುಮಾರ್ ಅವರು ಕುಮಾರಕೃಪದಲ್ಲಿ ಶನಿವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

“ನನ್ನ ಲೆಟರ್ ಹೆಡ್ ವಿನ್ಯಾಸ, ಬಣ್ಣ ಬೇರೆ ಇದೆ. ನನ್ನ ಲೆಟರ್ ಹೆಡ್ ಪ್ರತಿ ಪುಟಕ್ಕೆ ಸಂಖ್ಯೆಗಳಿರುತ್ತವೆ. ನನ್ನ ಲೆಟರ್ ಹೆಡ್ ಹಸಿರು ಬಣ್ಣದಲ್ಲಿ ಇಲ್ಲ. 15 ವರ್ಷಗಳ ಹಿಂದೆ ಶಾಸಕರುಗಳು ಹಸಿರು ಬಣ್ಣದ ಲೆಟರ್ ಹೆಡ್ ಬಳಸುತ್ತಿದ್ದರು. ಈಗ ಆ ಬಣ್ಣದ ಲೆಟರ್ ಹೆಡ್ ಅನ್ನು ಯಾರೂ ಬಳಸುವುದಿಲ್ಲ.

ನನ್ನ ಎಲೆಕ್ಟ್ರಾನಿಕ್ ಸಹಿಯನ್ನು ದುರ್ಬಳಕೆ ಮಾಡಿಕೊಂಡು ನಕಲಿ ಪತ್ರ ತಯಾರಿಸಲಾಗಿದ್ದು,.ಈ ವಿಚಾರವಾಗಿ ವಿಧಾನಸೌಧ ಪೊಲೀಸರಿಗೆ ದೂರು ನೀಡುವಂತೆ ನನ್ನ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದೇನೆ. ಈ ರೀತಿ ನಕಲಿ ಪತ್ರ ಬಂದಿರುವುದು ದುರಾದೃಷ್ಟಕರ. ಈ ನಕಲಿ ಪತ್ರದ ಕುರಿತು ತನಿಖೆ ನಡೆಯಲಿದೆ ಎಂದರು.

ನಮ್ಮ ಸರ್ಕಾರ ಅನೇಕ ಬಂಡವಾಳ ಹೂಡಿಕೆದಾರರ ಜತೆ ಉತ್ತಮ ಬಾಂಧವ್ಯ ಹೊಂದಿದ್ದೇವೆ. ಈಗಷ್ಟೇ ಟೊಯೋಟಾ ಕಂಪನಿ ಜೊತೆ ಮಾತನಾಡಿದ್ದು, ಅವರು ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಿಕೆ ವಿಸ್ತರಣೆ ಮಾಡಲಿದ್ದಾರೆ. ನಮ್ಮ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಎಂ.ಬಿ ಪಾಟೀಲ್ ಅವರು ಅಮೆರಿಕಕ್ಕೆ ತೆರಳಿ ಬಂಡವಾಳ ಹೂಡಿಕೆದಾರರನ್ನು ಸಂಪರ್ಕಿಸಿದ್ದಾರೆ. ನಮ್ಮ ಸರ್ಕಾರದ ಕಾರ್ಯವೈಖರಿ ಗಮನಿಸಿ ಅನೇಕ ಅಮೆರಿಕ ಕಂಪನಿಗಳು ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ತೋರಿದ್ದಾರೆ” ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button