Kannada NewsKarnataka NewsLatest

*ಮಾನನಷ್ಟ ಮೊಕದ್ದಮೆ ಪ್ರಕರಣ; ದೂರದರ್ಶನ ಉಪನಿರ್ದೇಶಕರಾಗಿದ್ದ ಎನ್.ಕೆ.ಮೋಹನ ರಾಮ್ ಗೆ 1 ವರ್ಷ ಜೈಲು ಶಿಕ್ಷೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು : ದೂರದರ್ಶನದ ಉಪ ಮಹಾ ನಿರ್ದೇಶಕರಾಗಿ 2008-2012ರ ಅವಧಿಯಲ್ಲಿ ದೂರದರ್ಶನದ ಉಪಮಹಾ ನಿರ್ದೇಶಕರಾಗಿ ಡಾ.ಮಹೇಶ ಜೋಶಿಯವರು ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ, ದೂರದರ್ಶನದ ಉಪನಿರ್ದೇಶಕರಾಗಿದ್ದ ಮೋಹನ್ ರಾಮ್ ಡಾ.ಮಹೇಶ ಜೋಶಿಯವರ ವಿರುದ್ಧ ಅವಹೇಳನ ಮತ್ತು ಅಪಪ್ರಚಾರ ಮಾಡಿ, ಮಾನನಷ್ಟ ಉಂಟು ಮಾಡಿದ್ದರೆಂದು ಆರೋಪಿಸಿ ಡಾ.ಮಹೇಶ ಜೋಶಿಯವರು ಭಾರತೀಯ ದಂಡ ಸಂಹಿತೆ 499 ಮತ್ತು 500ರಡಿ ಶಿಕ್ಷಾರ್ಹ ಅಪರಾಧಗಳಿಗೆ ಸಂಬಂಧ ಪಟ್ಟಂತೆ ದಾಖಲಿಸಿದ್ದ ಮಾನನಷ್ಟ ಪ್ರಕರಣದಲ್ಲಿ ಮೋಹನ ರಾಮ್ ಇವರು “ಅಪರಾಧಿ” ಎಂದು 8ನೆಯ ಮೆಟ್ರೋ ಪಾಲಿಟನ್ ಹೆಚ್ಚುವರಿ ನ್ಯಾಯಾಲಯವು ತೀರ್ಮಾನಿಸಿದ್ದು , ಒಂದು ವರ್ಷದ ಜೈಲು ಮತ್ತು ರೂ 10,000 ಗಳ ದಂಡ , ಪಾವತಿ ಮಾಡಲು ವಿಫಲರಾದಲ್ಲಿ, ಮೂರು ತಿಂಗಳ ಹೆಚ್ಚುವರಿ ಜೈಲುವಾಸ ಅನುಭವಿಸಬೇಕೆಂದು ನ್ಯಾಯಾಧೀಶ ನಾಗೇಶಾ ಅವರು ತೀರ್ಪು ನೀಡಿದ್ದಾರೆ.

ಮೋಹನ ರಾಮ್ ಅವರು 2008ರಲ್ಲಿ ಕೊಲ್ಕತ್ತಾ ದೂರದರ್ಶನ ಕೇಂದ್ರದಲ್ಲಿ ಉಪ ನಿರ್ದೇಶಕರಾಗಿದ್ದಾಗ, ಬೆಂಗಳೂರು ಕೇಂದ್ರಕ್ಕೆ ವರ್ಗಾವಣೆ ಆಯಿತು . ಆಗ ಬೆಂಗಳೂರು ಕೇಂದ್ರದಲ್ಲಿ ಉಪ ನಿರ್ದೇಶಕರ ಹುದ್ದೆ ಖಾಲಿ ಇರಲಿಲ್ಲವಾದ್ದರಿಂದ, ಅವರಿಗೆ ಕರ್ತವ್ಯ ನಿರ್ವಹಣೆಗೆ ಅವಕಾಶವಿರಲಿಲ್ಲ. ಹೀಗಾಗಿ ಈ ಕುರಿತ ಸ್ಪಷ್ಟೀಕರಣಕ್ಕಾಗಿ, ಜೋಶಿ ಅವರು ನವದೆಹಲಿಯಲ್ಲಿರುವ ದೂರದರ್ಶನದ ಮಹಾನಿರ್ದೇಶಕರನ್ನು ಕೇಳಲಾಗಿತ್ತು. ಕರ್ತವ್ಯ ನಿರ್ವಹಣೆಗೆ ಸೂಕ್ತ ಸ್ಥಾನವಿರದಿದ್ದ ಕಾರಣ ಕಚೇರಿಗೆ ಬರುವ ಅಗತ್ಯವಿಲ್ಲವೆಂದೂ, ಸೂಕ್ತ ಆದೇಶ ಬಂದ ನಂತರ ತಿಳಿಸಲಾಗುವುದೆಂದೂ ಸ್ಪಷ್ಟವಾಗಿ ಮೋಹನ್ ರಾಮ್ ಗೆ ಹೇಳಲಾಗಿತ್ತು. ಆದರೆ ಇದನ್ನು ಸರಿಯಾದ ರೀತಿಯಲ್ಲಿ ಗ್ರಹಿಸಿಕೊಳ್ಳದ ಮೋಹನರಾಂ, ಡಾ.ಮಹೇಶ ಜೋಶಿಯವರ ಮೇಲೆ ಸೇಡು ತೀರಿಸಿ ಕೊಳ್ಳುವ ರೀತಿಯಲ್ಲಿ, ಮಾನನಷ್ಟ ಮಾಡುವ ರೀತಿಯಲ್ಲಿ ವರ್ತಿಸಲು ಆರಂಭಿಸಿದರು.

ಡಾ.ಮಹೇಶ ಜೋಶಿಯವರು ಅಮೆರಿಕಾ ಮತ್ತು ಇಂಗ್ಲೇಡ್ ಗಳಲ್ಲಿ ಕೇಂದ್ರ ಸ್ಥಾನವನ್ನು ಹೊಂದಿರುವ, “ಗೋಲ್ಡನ್ ಸ್ಟೇಟ್ ಯೂನಿವರ್ಸಿಟಿ”ಯಿಂದ “ಮಾಧ್ಯಮ ಮತ್ತು ಮಾನವ ಹಕ್ಕುಗಳು” ವಿಷಯದ ಮೇಲೆ ಪಿ.ಎಚ್.ಡಿ ಪದವಿಯನ್ನು ಪಡೆಯಲು, ನವದೆಹಲಿ ದೂರದರ್ಶನದ ಮಹಾ ನಿರ್ದೇಶಕರಿಂದ ಸೂಕ್ತ ಅನುಮತಿಯನ್ನು ಪಡೆದಿದ್ದರು.

ಆದರೆ ಈ ಕುರಿತು ಯಾವುದೇ ಸಂಬಂಧವನ್ನು ಹೊಂದಿಲ್ಲದಿದ್ದರೂ ಮೋಹನ್ ರಾಮ್, ಈ ಕುರಿತು ದೂರದರ್ಶನದ ಸಿಬ್ಬಂದಿಗಳಲ್ಲಿ ದುರುದ್ದೇಶದಿಂದ ಮಾನನಷ್ಟ ಮಾಡುವ ಉದ್ದೇಶದಿಂದ, ತಪ್ಪು ಮಾಹಿತಿಗಳನ್ನು ಹರಡುವಲ್ಲಿ ನಿರತರಾಗಿದ್ದರು. ಈ ಮಧ್ಯದಲ್ಲಿಯೇ ಡಾ.ಮಹೇಶ ಜೋಶಿಯವರು ‘ಮಾನವ ಹಕ್ಕುಗಳ ಮನ್ನಣೆ, ಪ್ರಸಾರ, ಉತ್ತೇಜನ ಮತ್ತು ರಕ್ಷಣೆಗಳಲ್ಲಿ ಮಾಧ್ಯಮದ ಪಾತ್ರ’ (Role of Media in the recognition, propagation, promotion and protection of Human rights ) ಎಂಬ ವಿಷಯದಲ್ಲಿ ವಿಶ್ವವಿದ್ಯಾಲಯದ ನಿಯಮಗಳಿಗೆ ಅನುಗುಣವಾಗಿ 2006ರ ನವಂಬರ್ 15ರಂದು ಡಾಕ್ಟರೇಟ್ ಪದವಿಯನ್ನು ಪಡೆದರು.

ನಂತರ ಕೂಡ, ಮೋಹನ್ ರಾಮ್ ಅವರು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಬಾರದಿದ್ದರೂ ಕೂಡ ಇದು ಯು.ಜಿ.ಸಿ ಅಂಗೀಕೃತ ವಿಶ್ವವಿದ್ಯಾಲಯ ಅಲ್ಲವೆಂದೂ, ” ಡಾ” ಎಂಬ ಉಪಾಧಿಯನ್ನು ಬಳಸಬಾರದೆಂದು ಎಂದು ಅಪಪ್ರಚಾರವನ್ನು ನಡೆಸಿ, ದೂರದರ್ಶನದ ಸಿಬ್ಬಂದಿಗಳಿಗೆ ಅನಧಿಕೃತ ಪ್ರಕಟಣೆಗಳನ್ನು ನೀಡುವ ಮೂಲಕ ಮಾನನಷ್ಟ ಹಾಗೂ ಚಾರಿತ್ರ್ಯವದೆ ಮಾಡಿದರು .

ಇಷ್ಟಕ್ಕೇ ನಿಲ್ಲಿಸದೆ ಮೋಹನ ರಾಮ್ ಅವರು ಇದೇ ನ್ಯಾಯಾಲಯದಲ್ಲಿ 14037/2010 ರ ಅನ್ವಯ ಖಾಸಗಿ ದೂರನ್ನು ದಾಖಲಿಸಿ ಡಾ ಉಪಾಧಿಯನ್ನು ಬಳಸಬಾರದೆಂದು ನಿರ್ದೇಶನ ನೀಡುವಂತೆ ಕೇಳಿದ್ದರು. ಘನ ನ್ಯಾಯಾಲಯವು ಇದನ್ನು ಪರಿಶೀಲಿಸಿ, ಇದೊಂದು ದುರುದ್ದೇಶಕೂಡಿತ ಪ್ರಕರಣ, ಇದರಲ್ಲಿ ಯಾವುದೇ ಹುರುಳಿಲ್ಲವೆಂದು ತಳ್ಳಿ ಹಾಕಿದ್ದು ಮಾತ್ರವಲ್ಲದೆ, ನ್ಯಾಯಾಲಯದ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಿದ್ದಕ್ಕಾಗಿ ರೂ 5,000 ದಂಡವನ್ನು ಕೂಡ ವಿಧಿಸಿತ್ತು.

ಡಾ.ಮಹೇಶ ಜೋಶಿಯವರಿಗೆ ಯಾವುದೇ ವಿಶ್ವ ವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಬಾರದು ಎಂಬ ಇನ್ನೊಂದು ನೆಲೆಯ ಅಪಪ್ರಚಾರವನ್ನು ಮೋಹನ ರಾಮ್ ಅವರು ಮಾಡಿದ್ದು, ಈ ಕುರಿತು ರಾಜ್ಯಪಾಲರಿಗೆ ಹಾಗೂ ವಿವಿಧ ವಿಶ್ವವಿದ್ಯಾಲಯಗಳ ಉಪಕುಲಪತಿಗಳಿಗೆ ದೂರನ್ನು ಸಲ್ಲಿಸಿದರು ಹಾಗೂ ದೂರುಗಳ ಪ್ರತಿಗಳನ್ನು ಮಾಧ್ಯಮದವರಿಗೆ ಹಂಚಿದ್ದರು. ಗುಲ್ಬಾರ್ಗ ವಿಶ್ವವಿದ್ಯಾಲಯವು 14-02-2011ರಲ್ಲಿ ಡಾ.ಮಹೇಶ ಜೋಶಿಯವರಿಗೆ ಗೌರವ ಡಾಕ್ಟರೇಟ್ ನೀಡಿದಾಗ, ಅದನ್ನು ಹಿಂದೆ ಪಡೆಯುವಂತೆ ರಾಜ್ಯಪಾಲರಿಗೆ ಪತ್ರವನ್ನು ಬರೆದು ಅಲ್ಲಿಯೂ ಮಾನನಷ್ಟ ಉಂಟಾಗುವಂತಹ ಭಾಷೆಯನ್ನುಬಳಿಸಿ ಅದರ ಪ್ರತಿಗಳನ್ನು ಮಾಧ್ಯಮದವರಿಗೆ ಹಂಚಿದ್ದರು .

ಡಾ.ಮಹೇಶ ಜೋಶಿಯವರು ಕರ್ನಾಟಕ ಮಾಹಿತಿ ಅಯೋಗದ ಸದಸ್ಯರಾಗುತ್ತಾರೆ ಎಂಬ ಸುದ್ದಿಯ ಕೆಲವು ದಿನ ಪತ್ರಿಕೆಗಳಲ್ಲಿ ಪ್ರಕಟವಾದ ಹಿನ್ನೆಲೆಯಲ್ಲಿ, ಆಗಿನ ರಾಜ್ಯ ಪಾಲರಿಗೆ ಮತ್ತು ಕರ್ನಾಟಕ ರಾಜ್ಯದ ವಿರೋಧ ಪಕ್ಷದ ನಾಯಕರಿಗೆ ತಪ್ಪು ಮಾಹಿತಿಗಳನ್ನು ಒಳಗೊಂಡ ಪತ್ರಗಳನ್ನು ಬರೆದಿರುತ್ತಾರೆ, ಅಲ್ಲದೆ ಅದನ್ನು ದೂರದರ್ಶನದ ಸಿಬ್ಬಂದಿಗಳಿಗೆ ಮತ್ತು ಮಾಧ್ಯಮಕ್ಕೆ ತಪ್ಪು ಮಾಹಿತಿಯನ್ನು ವ್ಯಾಪಕವಾಗಿ ಹಂಚಿರುತ್ತಾರೆ.

ಇವೆಲ್ಲವೂ ಮೋಹನ ರಾಮ್ ಅವರು ನಿರಂತರವಾಗಿ ಡಾ.ಮಹೇಶ ಜೋಶಿಯವರ ಗೌರವ ಹಾಗೂ ಘನತೆಗೆ ಧಕ್ಕೆ ತರುವ ಪ್ರಯತ್ನ ಮಾಡಿದ್ದಕ್ಕೆ ಸಾಕ್ಷಿಗಳಾಗಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆ 500ರ ವಿಧಿಯಂತೆ 2011ರ ಏಪ್ರಿಲ್ 20ರಂದು ದೂರು ದಾಖಲಾಗಿದ್ದು 2019ರ ಸೆಪ್ಟಂಬರ್ 10ರಿಂದ 2023ರ ನವಂಬರ್ 10ರವರೆಗೂ ವಿಚಾರಣೆ ಸಂದರ್ಭದಲ್ಲಿ ಡಾ.ಮಹೇಶ ಜೋಶಿಯವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವುದನ್ನು ಘನ ನ್ಯಾಯಾಲಯವು ಗಮನಿಸಿತ್ತು.

ವಿಚಾರಣೆ ನಡೆದು 2023ರ ನವಂಬರ್ 10ರಂದು ತೀರ್ಪು ಪ್ರಕಟವಾಗಿದೆ. ಡಾ.ಮಹೇಶ ಜೋಶಿಯವರು ಡಾಕ್ಟರೇಟ್ ಪದವಿಗಾಗಿ ಅಧ್ಯಯನವನ್ನು ತಮ್ಮ ಸ್ವಂತ ಖರ್ಚಿನಲ್ಲಿ ಮಾಡಿದ್ದು, ಈ ಕುರಿತು ಎಲ್ಲಾ ನಿಯಮಾವಳಿಗಳನ್ನೂ ಪಾಲಿಸಿರುವುದನ್ನೂ ಗುರುತಿಸಿದೆ. ದೂರದರ್ಶನ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ, ರವೀಂದ್ರ ರಾವ್ ಅವರ ಸಾಕ್ಷಿಯನ್ನು ಪರಿಗಣಿಸಿ, ನ್ಯಾಯಾಲಯ ಡಾ.ಮಹೇಶ ಜೋಶಿಯವರು ಹೂಡಿದ ಮಾನನಷ್ಟ ಮೊಕದ್ದಮೆಯಲ್ಲಿ ಸತ್ಯಾಂಶವಿರುವುದನ್ನು ಗುರುತಿಸಿದೆ.

ಇದರ ಜೊತೆಗೆ ಎನ್.ಕೆ.ಮೋಹನ ರಾಂ ಅವರು ಡಾ.ಮಹೇಶ ಜೋಶಿಯವರು 1990ರಲ್ಲಿ ದೂರದರ್ಶನದಲ್ಲಿ ಸೇವೆಗೆ ಸೇರುವ ಮೊದಲೇ, 1986ರಲ್ಲಿ ಇಲಾಖೆಯ ವಿಚಾರಣೆಯನ್ನು ಎದುರಿಸಿದ್ದು , ಅವರ ಕಾರ್ಯಕ್ಷೇತ್ರದಲ್ಲಿ ಅಶಿಸ್ತು, ಹಿರಿಯ ಅಧಿಕಾರಿಗಳನ್ನು ವಿನಾಕಾರಣ ಪ್ರಶ್ನಿಸುವ ಮನೋಭಾವ, ಸಹೋದ್ಯೋಗಿಗಳ ಮೇಲೆ ಸೇಡು ತೀರಿಸುವ ಗುಣ ಎಲ್ಲವನ್ನೂ ಗಮನಿಸಿ ಸರ್ಕಾರಿ ನೌಕರಿ ಮಾಡಲು ಸೂಕ್ತವಲ್ಲವೆಂದು , ವಿಚಾರಣೆ ವರದಿ ಸಲ್ಲಿಸಿದ್ದು, ವಾರ್ತಾ ಮತ್ತು ಪ್ರಸಾರ ಮಂತ್ರಾಲಯ ಹಾಗೂ ದೂರದರ್ಶನ ಮಹಾ ನಿರ್ದೇಶನಾಲಯ ಬೆಂಗಳೂರು ಮತ್ತು ಕೊಲ್ಕತ್ತ ದೂರದರ್ಶನ ಕೇಂದ್ರ ನಿರ್ದೇಶಕರಿಗೆ ಪತ್ರವನ್ನು ಬರೆದು, ಮೋಹನ್ ರಾಮ್ ಗೆ ಯಾವುದೇ ಸೂಕ್ಷ್ಮ ಕೆಲಸ ಕೊಡಬಾರದೆಂದು ನಿರ್ದೇಶಿಸಿತ್ತು. ಮೋಹನ್ ರಾಮ್ ನಿರಂತರವಾಗಿ ಕಟ್ಟು ಕತೆಗಳ ಮೂಲಕ ಡಾ.ಮಹೇಶ ಜೋಶಿಯವರ ಚಾರಿತ್ರ್ಯವಧೆ ಮಾಡಲು ಪ್ರಯತ್ನ ಮಾಡಿರುವದನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿತು.

ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಮೋಹನ ರಾಮ್ ಅವರನ್ನು ಅಪರಾಧಿ ಎಂದು ತೀರ್ಮಾನಿಸಿರುವ ಘನ ನ್ಯಾಯಾಲಯವು ಭಾರತೀಯ ದಂಡ ಸಂಹಿತೆ 499 ಮತ್ತು 500ರ ಶಿಕ್ಷಾರ್ಹ ಅಪರಾಧಗಳ ಅಪರಾಧಿ ಎಂದು ಪರಿಗಣಿಸಿ ಅಪರಾಧಿ ದಂಡ ಸಂಹಿತೆ 255(2)ರ ಅವಕಾಶದಡಿ ಒಂದು ವರ್ಷಗಳ ಜೈಲು ಮತ್ತು ರೂ 10,000ಗಳ ದಂಡ ಪಾವತಿಸುವ ಶಿಕ್ಷೆ ವಿಧಿಸಿದೆ. ಒಂದು ವೇಳೆ ದಂಡ ಪಾವತಿ ಮಾಡಲು ವಿಫಲರಾದರೆ ಇನ್ನೂ ಮೂರು ತಿಂಗಳ ಹೆಚ್ಚಿನ ಜೈಲುವಾಸದ ಶಿಕ್ಷೆಯನ್ನು ಅನುಭವಿಸಬೇಕೆಂದು ನ್ಯಾಯಾಲಯವು ಆದೇಶಿಸಿದೆ.

ಈ ಕುರಿತ ತೀರ್ಪಿನ ಪ್ರತಿಯನ್ನು KABC030152462011 ಈ ಸಂಖ್ಯೆ ಮೂಲಕ ಪಡೆಯಬಹುದು. ಈ ಶಿಕ್ಷೆಯು ಸಮಾಜದಲ್ಲಿ ಸುಳ್ಳು ಸುದ್ದಿಗಳನ್ನು ಹರಡಿ ಕುತ್ಸಿತ ಮನೋಭಾವದಿಂದ ದ್ವೇಷವನ್ನು ಸಾಧಿಸುವವರಿಗೆ ಒಂದು ಪಾಠವಾಗಲಿದೆ ಎಂದು ನ್ಯಾಯಾಂಗ ಪರಿಣಿತರು ವ್ಯಾಖ್ಯಾನಿಸಿದ್ದು ಶಿಕ್ಷೆಗೆ ಗುರಿಯಾದ ಅಪರಾಧಿಯು ಪೆನ್ ಷನ್ ಸೇರಿದಂತೆ ಸರ್ಕಾರಿ ಸೌಲಭ್ಯವನ್ನು ಪಡೆಯಲಾಗದು ಎಂದು ವಿಶ್ಲೇಷಿಸಿದ್ದಾರೆ. ಡಾ.ಮಹೇಶ ಜೋಶಿಯವರ ಪರವಾಗಿ ವಕೀಲರಾದ ಸಿ.ವಿ.ಸುಧೀಂದ್ರ ಅವರು ಯಶಸ್ವಿಯಾಗಿ ವಾದವನ್ನು ಮಂಡಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button