*ಸಿದ್ದಗಂಗಾ ಶ್ರೀಗಳ ಬಳಿ ಅಳಲು ತೋಡಿಕೊಂಡ ವಿ.ಸೋಮಣ್ಣ; ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆಯ ಹಿಂದಿನ ರಹಸ್ಯ ಬಿಚ್ಚಿಟ್ಟ ಮಾಜಿ ಸಚಿವ*
ಪ್ರಗತಿವಾಹಿನಿ ಸುದ್ದಿ; ತುಮಕೂರು: ಮಾಜಿ ಸಚಿವ ವಿ.ಸೋಮಣ್ಣ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೂ ಸೋಲನುಭವಿಸಿದ್ದು, ಈ ನೋವಿನಿಂದ ಹೊರಬರಲಾಗದೇ ಬೇಸರದಲ್ಲಿದ್ದು, ಇಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ತೆರಳಿ ಸಿದ್ದಗಂಗಾ ಶ್ರೀಗಳ ಬಳಿ ಅಳಲು ತೋಡಿಕೊಂಡಿದ್ದಾರೆ.
ಸಿದ್ದಗಂಗಾ ಮಠಕ್ಕೆ ಆಗಮಿಸಿ ಸಿದ್ದಗಂಗಾ ಶ್ರೀಗಳನ್ನು ಭೇಟಿಯಾದ ವಿ.ಸೋಮಣ್ಣ, ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವುದರ ಹಿಂದಿನ ರಹಸ್ಯವೇನು? ತಾವು ಇಕ್ಕಟ್ಟಿಗೆ ಸಿಲುಕಿದ್ದದರೂ ಹೇಗೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ನಾನು ಇಲ್ಲಿ ಬಿಟ್ಟು ಅಲ್ಲಿ ಸ್ಪರ್ಧೆ ಮಾಡಿದ್ದೇ ಮಹಾ ಅಪರಾಧವಾಯಿತು. ಅಂದು ಅಮಿತ್ ಶಾ ಅವರು ನನ್ನ ಮನೆಯಲ್ಲಿ ಕುಳಿತು ಜೀವ ತೆಗೆದರು. ಎರಡು ಗಂಟೆ ನಮ್ಮ ಮನೆಯಲ್ಲಿ ಕುಳಿತುಕೊಂಡಿದ್ದರು. ಆದರೂ ಆಗಲ್ಲ ಎಂದು ಹೇಳಿದ್ದೆ. ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಗೆ ಕರೆಸಿ ನೀನು ಸ್ಪರ್ಧೆ ಮಾಡು ಅಂದರು. ಆಗ ಏನ್ಮಾಡಲಿ? ಸ್ಪರ್ಧಿಸಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ಡಿಸೆಂಬರ್ 7, 8, 9, 10ರೊಳಗೆ ದೆಹಲಿಗೆ ತೆರಳಿ ನಮ್ಮ ಭಾವನೆಗಳನ್ನು ವರಿಷ್ಠರ ಬಳಿ ವ್ಯಕ್ತಪಡಿಸುತ್ತೇವೆ. ನಾನು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಲಿಂಬಾವಳಿ, ಅರವಿಂದ್ ಬೆಲ್ಲದ್, ರಮೇಶ್ ಜಾರಕಿಹೊಳಿ ಸೇರಿದಂತೆ ಹಲವರು ದೆಹಲಿಗೆ ತೆರಳುತ್ತೇವೆ. ನಾವೆಲ್ಲರೂ ಹಿರಿಯರು, ನಮ್ಮದೇ ಆದ ಅನುಭವ ಸೇವೆ, ಆಲೋಚನೆಗಳು ಇವೆ. ಎಲ್ಲವನ್ನೂ ಹೈಕಮಾಂಡ್ ಬಳಿ ಹೇಳುತ್ತೇವೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ