Belagavi NewsBelgaum NewsKannada NewsKarnataka News

ಅದ್ಧೂರಿಯಾಗಿ ನಡೆದ ಕರ್ನಾಟಕ ನಾಮಕರಣ ಸುವರ್ಣ ಮಹೋತ್ಸವ; ಸುವರ್ಣಸೌಧದಲ್ಲಿ ಕ್ಯಾಬಿನೆಟ್ ಸಭೆ ನಡೆಸುವ ಬೇಡಿಕೆಯ ಬಗ್ಗೆ ಪರಿಶೀಲನೆ: ಸಿಎಂ ಭರವಸೆ 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸುವರ್ಣ ಸೌಧದ ಆವರಣದಲ್ಲಿ ಮಂಗಳವಾರ ಸಂಜೆ “ಕರ್ನಾಟಕ” ನಾಮಕರಣ ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಯಿತು. 

ಕರ್ನಾಟಕ ವಿಧಾನ ಮಂಡಲ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುವರ್ಣ ಮಹೋತ್ಸವದ ಅಂಗವಾಗಿ ವಿಧಾನ ಮಂಡಲದ ಮಾಜಿ ಸಭಾಪತಿ ಮತ್ತು ಸಭಾಧ್ಯಕ್ಷರುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗಣ್ಯರು ಸನ್ಮಾನಿಸಿದರು. 

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯಪಾಲರಾದ ಥೇವರ್ ಚಂದ್ ಗೆಹ್ಲೋಟ್ ಅವರು ಉದ್ಘಾಟಿಸಿದ ಕಾರ್ಯಕ್ರಮದ ವೇದಿಕೆಯಲ್ಲಿ ಸ್ಪೀಕರ್ ಯು.ಟಿ.ಖಾದರ್, ಸಭಾಪತಿ ಬಸವರಾಜ ಹೊರಟ್ಟಿ, ಉಪ ಸಭಾಧ್ಯಕ್ಷರಾದ ರುದ್ರಪ್ಪ ಲಮಾಣಿ, ಡಿಸಿಎಂ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕ ಆರ್.ಅಶೋಕ್,  ಕಾನೂನು ಸಚಿವರಾದ ಹೆಚ್.ಕೆ.ಪಾಟೀಲ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು. 

ಈ ಸಂದರ್ಭದಲ್ಲಿ ಜಗದೀಶ್ ಶೆಟ್ಟರ್, ಪ್ರೊ.ಬಿ.ಕೆ.ಚಂದ್ರಶೇಖರ್, ವಿ.ಆರ್.ಸುದರ್ಶನ್, ಬಿ.ಎಲ್.ಶಂಕರ್, ಡಿ.ಹೆಚ್.ಶಂಕರಮೂರ್ತಿ, ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿ ಹಲವರನ್ನು ಸನ್ಮಾನಿಸಲಾಯಿತು.

*ಸುವರ್ಣಸೌಧದಲ್ಲಿ ಕ್ಯಾಬಿನೆಟ್ ಸಭೆ ನಡೆಸುವ ಬೇಡಿಕೆಯ ಬಗ್ಗೆ ಪರಿಶೀಲನೆ: ಸಿಎಂ ಭರವಸೆ* 

ತ್ಯಾಗ ಮತ್ತು ಬಲಿದಾನದ ಮೂಲಕ ನಾಡು ಏಕೀಕರಣಗೊಂಡು ಕನ್ನಡ ನಾಡು ಉದಯವಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುನರುಚ್ಛರಿಸಿದರು. 

 ಸುವರ್ಣ ಸೌಧದ ವೈಭವದ ಹೊರ ಆವರಣದಲ್ಲಿ ನಡೆದ “ಕರ್ನಾಟಕ” ನಾಮಕರಣ ಸುವರ್ಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತ್ಯಾಗ ಮತ್ತು ಬಲಿದಾನಗಳ ಮೂಲಕ ಕನ್ನಡ ನಾಡು ರಚನೆಯಾಗಿದ್ದು ಇದಕ್ಕೆ ಕಾರಣರಾದ ಎಲ್ಲರನ್ನೂ ಸ್ಮರಿಸುತ್ತೇನೆ. ಕನ್ನಡ ನೆಲ-ಜಲ-ಭಾಷೆ-ಗಡಿ ರಕ್ಷಣೆಗೆ ನಾವು ಬದ್ಧರಾಗಿರುವುದೇ, ಕನ್ನಡ ವಾತಾವರಣ ನಿರ್ಮಾಣ ಮಾಡಿ ಇದನ್ನು ವಿಸ್ತರಿಸುವುದೇ ತ್ಯಾಗ ಬಲಿದಾನಗೈದ ಎಲ್ಲರಿಗೂ ನಾವು ಕೊಡುವ ಗೌರವ ಎಂದರು. 

ನಾನು ಮೊದಲ ಕನ್ನಡ ಕಾವಲು ಸಮಿತಿಯ ಅಧ್ಯಕ್ಷ ಆಗಿದ್ದೆ. ಕನ್ನಡ ಆಡಳಿತ ಭಾಷೆ ಆಗಿಸುವುದಕ್ಕೆ ಶ್ರಮಿಸಿದ್ದೇವೆ. ಸಮಸ್ತ ಕನ್ನಡಿಗರು ಮಾತೃಭಾಷೆ ಮೇಲಿನ ಅಭಿಮಾನವನ್ನು ಹೆಚ್ವಿಸಿಕೊಂಡಾಗ ಮಾತ್ರ ಕನ್ನಡದ ಬದುಕು ಇನ್ನಷ್ಟು ವಿಸ್ತರಿಸುತ್ತದೆ ಎಂದರು. 

ಸುವರ್ಣಸೌಧದಲ್ಲಿ ಕ್ಯಾಬಿನೆಟ್ ಸಭೆಗಳನ್ನು ನಡೆಸಬೇಕು ಎನ್ನುವುದೂ ಸೇರಿ ಬಿ.ಎಲ್.ಶಂಕರ್ ಅವರು ನೀಡಿದ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು ಆ ಬಗ್ಗೆ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು. 

ಕರ್ನಾಟಕ ವಿಧಾನ ಮಂಡಲ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುವರ್ಣ ಮಹೋತ್ಸವದ ಅಂಗವಾಗಿ ವಿಧಾನ ಮಂಡಲದ ಮಾಜಿ ಸಭಾಪತಿ ಮತ್ತು ಸಭಾಧ್ಯಕ್ಷರುಗಳನ್ನು ಮುಖ್ಯಮಂತ್ರಿಗಳು ಸನ್ಮಾನಿಸಿದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button