*ರಾಜ್ಯ ಪ್ರತ್ಯೇಕತೆ ಪರಿಹಾರವಲ್ಲ; ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಎಲ್ಲರಲ್ಲೂ ಇಚ್ಛಾಶಕ್ತಿ ಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅನೇಕ ಹೋರಾಟಗಾರರ ತ್ಯಾಗ, ಬಲಿದಾನದ ಪ್ರತಿಫಲವಾಗಿ ಕರ್ನಾಟಕ ರಾಜ್ಯ ಏಕೀಕೃತವಾಗಿದೆ. ಅಭಿವೃದ್ಧಿಯ ಹಿನ್ನಡೆಯಲ್ಲಿ ರಾಜ್ಯ ಪ್ರತ್ಯೇಕತೆ ಬಗ್ಗೆ ಮಾತನಾಡುವುದು ಅಂತಹ ಮಹನೀಯರಿಗೆ ಅಪಮಾನ ಮಾಡಿದಂತೆ. ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಎಲ್ಲರಲ್ಲೂ ಇಚ್ಛಾಶಕ್ತಿ ಬೇಕು. ರಾಜ್ಯ ಸರ್ಕಾರವು ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿದಂತೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಇಂದು ವಿಧಾನಸಭೆಯಲ್ಲಿ ಜರುಗಿದ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ಚರ್ಚೆಯ ಕೊನೆಗೆ ಉತ್ತರಿಸಿ, ಮಾತನಾಡಿದರು. ಕರ್ನಾಟಕ ರಾಜ್ಯದ ಕನ್ನಡಿಗರು ಏಕೀಕರಣ ಪೂರ್ವದಲ್ಲಿ ವಿವಿಧ ಪ್ರಾಂತಗಳಲ್ಲಿ ಹಂಚಿ ಹೋಗಿದ್ದರು. ಕರ್ನಾಟಕ ಒಂದಾಗಬೇಕು. ಕನ್ನಡಿಗರು ಒಟ್ಟಾಗಬೇಕು ಎಂದು ಬಯಸಿ ಉತ್ತರ, ದಕ್ಷಿಣ ಭಾಗದ ಅನೇಕ ನಾಯಕರು ನಿರಂತರ ಹೋರಾಟ ಮಾಡಿ ರಾಜ್ಯ ಒಗ್ಗೂಡಿಸಿದರು. ಉತ್ತರ ಕರ್ನಾಟಕ ಸೇರಿದಂತೆ ಈ ಭಾಗಗಳು ಅಬಿವೃದ್ಧಿಯಲ್ಲಿ ಹಿಂದೆ ಉಳಿಯಲು ಅನೇಕ ಐತಿಹಾಸಿಕ ಕಾರಣಗಳು ಇವೆ ಎಂದು ವಿವರಿಸಿದ ಸಿಎಂ ಅವರು ಏಕೀಕರಣಕ್ಕಿಂತ ಮುಂಚೆ ವಿವಿಧೆಡೆ ಹಂಚಿಹೋಗಿದ್ದ ಕರ್ನಾಟಕದ ಪ್ರದೇಶಗಳ ಸ್ಥಿತಿಗತಿ ಬಗ್ಗೆ ಸದನದಲ್ಲಿ ವಿವರಿಸಿದರು.
ಕರ್ನಾಟಕದ ಅಭಿವೃದ್ಧಿಗೆ ಪ್ರೊ. ಡಿ.ಎಂ. ನಂಜುಂಡಪ್ಪ ವರದಿ ಸೇರಿದಂತೆ ವಿವಿಧ ಶಿಫಾರಸ್ಸುಗಳ ಆಧಾರದ ಮೇಲೆ ಕ್ರಮಕೈಗೊಳ್ಳಲಾಗಿದೆ. ನಮ್ಮ ಸರ್ಕಾರವು ಈ ಭಾಗದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಿದೆ ಎಂದು ಹೇಳಿದ ಮುಖ್ಯಮಂತ್ರಿಗಳು ಅಭಿವೃದ್ಧಿಯ ಅಷ್ಟಸೂತ್ರಗಳನ್ನು ಸಭೆಯಲ್ಲಿ ಪ್ರಕಟಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ