Kannada NewsKarnataka NewsLatestPolitics

ಕುಡಿಯುವ ನೀರಿನ ಸಮಸ್ಯೆ ಬರದಂತೆ ಕ್ರಮಕ್ಕೆ ಸೂಚನೆ

ಆಯವ್ಯಯದಲ್ಲಿ ಘೋಷಣೆಯಾದ ಯೋಜನೆಗಳಿಗೆ ಹಣದ ಕೊರತೆ ಇಲ್ಲ; ಸಿಎಂ ಸ್ಪಷ್ಟನೆ

ಪ್ರಗತಿವಾಹಿನಿ ಸುದ್ದಿ; ಕೋಲಾರ: ಮುಂದಿನ ಬಜೆಟ್ ನಲ್ಲಿ ಉಳಿದ ಹೋಬಳಿಗಳಿಗೆ ಮೊರಾರ್ಜಿ ವಸತಿ ಶಾಲೆಗಳನ್ನು ಮಂಜೂರು ಮಾಡಲಾಗುವುದು ಹಾಗೂ ಮೊರಾರ್ಜಿ ವಸತಿ ಶಾಲೆಗಳು ಸೇರಿದಂತೆ ವಿವಿಧ ಹಾಸ್ಟೆಲ್ ಗಳ ಮೇಲುಸ್ತುವಾರಿ ಮಾಡಲು ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಪ್ರಗತಿ ಪರಿಸೀಲನಾ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಕುಡಿಯುವ ನೀರಿನ ಸಮಸ್ಯೆ ಬರದಂತೆ ಕ್ರಮಕ್ಕೆ ಸೂಚನೆ:

ಇಂದು ಮೊದಲ ಬಾರಿಗೆ ಕೋಲಾರಕ್ಕೆ ಭೇಟಿ ನೀಡಿದ್ದು, ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಕೈಗೊಳ್ಳಲಾಗಿದೆ. ಕಂದಾಯ, ಸಮಾಜ ಕಲ್ಯಾಣ, ಕಾನೂನು, ಕುಡಿಯುವ ನೀರು, ಬರಗಾಲ ಹೀಗೆ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಕೋಲಾರ ಜಿಲ್ಲೆಯ 6 ತಾಲ್ಲೂಕುಗಳನ್ನು ಬರಗಾಲ ಪೀಡಿತ ಎಂದು ಘೋಷಿಸಲಾಗಿದೆ. ಟ್ಯಾಂಕರ್ ಮೂಲಕ ನೀರು ನೀಡುವ ಪರಿಸ್ಥಿತಿ ಇನ್ನೂ ಉದ್ಭವಿಸಿಲ್ಲ. ಕುಡಿಯುವ ನೀರಿನ ಸಮಸ್ಯೆ ಇಡೀ ಜಿಲ್ಲೆಯಲ್ಲಿ ಇಲ್ಲ. ಕುಡಿಯುವ ನೀರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಹಾಗೂ ಸಿಇಓ ಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅದಕ್ಕೆ ಬೇಕಾಗುವ ಅನುದಾನವನ್ನು ಸರ್ಕಾರ ಪೂರೈಸಲಿದೆ. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಹೊಸ ಬೋರ್ ವೆಲ್ ಗಳನ್ನು ಕೊರೆಸಬಹುದೆಂದು ಸೂಚಿಸಲಾಗಿದೆ ಎಂದರು.

ನರೇಗಾದಡಿ 150 ಮಾನವ ದಿನಗಳ ಹೆಚ್ಚಳಕ್ಕೆ ಕೇಂದ್ರದ ಅನುಮತಿ ದೊರೆತಿಲ್ಲ:

ಕೆಸಿವ್ಯಾಲಿ ನಂತರ ಕೆರೆಗಳಿಗೆ ನೀರು ತುಂಬಿ, ಭೂಮಿಯ ಅಂತರ್ಜಲ ಮಟ್ಟ ಸುಧಾರಿಸಿದೆ. ಇದರಿಂದ ವ್ಯವಸಾಯ, ಕುಡಿಯುವ ನೀರಿಗೆ ಅನುಕೂಲವಾಗಿದೆ. ಮೇವಿನ ಕೊರತೆ ಇಲ್ಲ. 18 ವಾರಗಳಿಗೆ ಪೂರೈಸಬಹುದಾದಷ್ಟು ಮೇವಿನ ಲಭ್ಯತೆ ಇದೆ. ಮೇವು ಕಿಟ್ ಖರೀದಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ನರೇಗಾ ಯೋಜನೆಯಡಿ ಮಾನವ ದಿನಗಳನ್ನು 100 ರಿಂದ 150 ದಿನಗಳಿಗೆ ಹೆಚ್ಚಿಸಲು ಕೇಂದ್ರ ಸರ್ಕಾರದ ಅನುಮತಿ ಬೇಕಿರುತ್ತದೆ. ರಾಜ್ಯಸರ್ಕಾರ ಮನವಿ ಸಲ್ಲಿಸಿ ಮೂರು ತಿಂಗಳು ಕಳೆದರೂ , ಈ ಬಗ್ಗೆ ಕೇಂದ್ರದಿಂದ ಸ್ಪಂದನೆ ದೊರೆತಿಲ್ಲ. ಜನರ ಗುಳೆ ಹೋಗುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಈ ಮನವಿಯನ್ನು ಮಾಡಿತ್ತು ಎಂದರು.

ಅಧಿಕಾರಿಗಳು ಜನರನ್ನು ಭೇಟಿಯಾಗಲು ಸಮಯ ನೀಡಬೇಕು:

ಎಲ್ಲಾ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರರಿಗೆ ಬಾಕಿಯಿರುವ ಕೇಸುಗಳನ್ನು ವಿಲೇವಾರಿ ಮಾಡಲು ಸೂಚಿಸಲಾಗಿದೆ. ಅಸಿಸ್ಟೆಂಟ್ ಕಮೀಷನರ್ ನ ಬಳಿ 3995 ಕೇಸುಗಳು ಬಾಕಿಯಿದ್ದು, ಅಭಿಯಾನದ ರೀತಿಯಲ್ಲಿ ಕಾರ್ಯನಿರ್ವಹಿಸಿ , ಕೇಸುಗಳನ್ನು ಮುಗಿಸಲು ಸೂಚಿಸಲಾಗಿದೆ. ಖಾತೆ, ಸರ್ವೆ, ಪೋಡಿ ಗಳು ಸರಿಯಾಗಿ ಆಗದಿರುವ ಕಾರಣ ಸಹಾಯಕ ಆಯುಕ್ತರು, ತಹಶೀಲ್ದಾರರ ಬಳಿ ಪ್ರಕರಣಗಳು ಬಾಕಿ ಉಳಿದಿರುತ್ತವೆ. ಆದ್ದರಿಂದ ಗ್ರಾಮ ಲೆಕ್ಕಿಗರು, ಕಂದಾಯ ಅದಿಕಾರಿಗಳು, ತಹಶೀಲ್ದಾರರು, ಸಹಾಯಕ ಆಯುಕ್ತರು ತಮ್ಮ ತಮ್ಮ ಹಂತದಲ್ಲಿ ಕೆಲಸವನ್ನು ಮಾಡಬೇಕು. ಜನರ ಕೈಗೆ ಅಧಿಕಾರಿಗಳು ಸಿಗದಿರುವುದು ಸಮಸ್ಯೆಯಾಗಿದ್ದು, ಜನರ ಭೇಟಿಗೆ ಸಮಯ ನಿಗದಿಪಡಿಸಬೇಕು ಎಂದರು.

ಕಂದಾಯ ಹಾಗೂ ಅರಣ್ಯ ಇಲಾಖೆಯ ಜಂಟಿ ಸರ್ವೆಗೆ ಸೂಚನೆ:

ತಹಶೀಲ್ದಾರರ ಕಚೇರಿಯಲ್ಲಿ ತಾಲ್ಲೂಕುವಾರು ಸರ್ಕಾರಿ ಜಮೀನು, ಒತ್ತುವರಿ ಆಗಿರುವ ಬಗ್ಗೆ ಒತ್ತುವರಿ ತೆರವುಗೊಳಿಸಿರುವ ಬಗ್ಗೆ ಮಾಹಿತಿಯನ್ನು ನೀಡಬೇಕು. ಎಷ್ಟೇ ಪ್ರಭಾವಿಗಳಿದ್ದರೂ, ಅವರಿಂದ ಒತ್ತುವರಿಯಾಗಿರುವ ಕೆರೆ ಮತ್ತು ಸರ್ಕಾರಿ ಭೂಮಿಯನ್ನು ತೆರವುಗೊಳಿಸಲು ಸೂಚಿಸಲಾಗಿದೆ. ಅರಣ್ಯ ಇಲಾಖೆಯವರೊಂದಿಗೆ ಸಂಯೋಜಿಸಿ ಸರ್ಕಾರಿ ಭೂಮಿ ಮತ್ತು ಅರಣ್ಯ ಭೂಮಿಯ ಯಾವುವು ಎಂಬ ಬಗ್ಗೆ ಜಂಟಿ ಸರ್ವೇ ನಡೆಸಿ, ವರದಿ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಎತ್ತಿನಹೊಳೆ ಯೋಜನೆ ತ್ವರಿತಗೊಳಿಸಲು ಸೂಚನೆ:

ಕೆಸಿವ್ಯಾಲಿ ಮೂರನೇ ಹಂತದ ಶುದ್ಧಿಕರಣ ಯೋಜನೆ ಇನ್ನೂ ಚರ್ಚೆಯ ಹಂತದಲ್ಲಿದೆ. ಎರಡನೇ ಹಂತ ಶುದ್ಧಿಕರಣ ಮಾಡಲಾಗುತ್ತಿದ್ದು, ಕೆರೆ ತುಂಬಿಸಲು ನೀರು ಬಳಸಲಾಗುವುದು. ಎತ್ತಿನಹೊಳೆ ಯೋಜನೆ ಕುಡಿಯುವ ನೀರಿನ ಯೋಜನೆಯಾಗಿದ್ದು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು , ಅರಸೀಕರೆಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತದೆ. ಕಾಮಗಾರಿಗಳನ್ನು ತ್ವರಿತಗೊಳಿಸಲು ಸೂಚನೆ ನೀಡಲಾಗಿದೆ ಎಂದರು.

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ:

ಅಪ್ರಾಪ್ತ ಹೆಣ್ಣುಮಕ್ಕಳ ಮದುವೆ ತಪ್ಪಿಸಬೇಕು, ಇಂತಹ ಪ್ರಕರಣಗಳು ನಿಲ್ಲದೇ ಹೋದರೆ ಸಂಬಂಧಪಟ್ಟವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು. ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣ ಇಲಾಖೆ ಜವಾಬ್ದಾರಿಯಾಗಿದೆ. ತಪ್ಪಿತಸ್ಥರ ವಿರುದ್ಧ ಎಫ್ ಐ ಆರ್ ದಾಖಲಿಸಲು ಹಾಗೂ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button