*ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್; ಜನರ ಅಹವಾಲು ಆಲಿಸಲು ಮನೆ ಬಾಗಿಲಿಗೆ ಬಂತು ಸರ್ಕಾರ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು : ಬೆಂಗಳೂರಿನ ನಾಗರೀಕರು ತಮ್ಮ ಅಹವಾಲುಗಳನ್ನು ನಮ್ಮ ಮನೆವರೆಗೂ ತರುವುದನ್ನು ತಪ್ಪಿಸಿ, ಸರ್ಕಾರವೇ ಅವರ ಬಳಿಗೆ ಹೋಗಿ ಅವರ ಸಮಸ್ಯೆ ಆಲಿಸಲು ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕಾರ್ಯಕ್ರಮದ ಪೂರ್ವಭಾವಿ ಸಭೆ ನಂತರ ಬಿಬಿಎಂಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ತಿಂಗಳು 3 ರಿಂದ ತಿಂಗಳಾಂತ್ಯದವರೆಗೂ 10 ದಿನಗಳ ಕಾಲ ಜನಸಂಖ್ಯೆಗೆ ಅನುಗುಣವಾಗಿ ಎರಡು ಮೂರು ವಿಧಾನಸಭಾ ಕ್ಷೇತ್ರಗಳ ಜನರ ಅಹವಾಲು ಆಲಿಸಲಾಗುವುದು.
ಬಿಬಿಎಂಪಿ, ಬಿಡಿಎ, ಬೆಸ್ಕಾಂ, ಬಿಎಂಟಿಸಿ, ಕಂದಾಯ ಇಲಾಖೆಯ ಖಾತೆ ಸಮಸ್ಯೆ, ನಮ್ಮ ಇಲಾಖೆ ಹಾಗೂ ಸರ್ಕಾರದ ಐದು ಗ್ಯಾರಂಟಿ ಸೇರಿದಂತೆ ಜನರ ಸಮಸ್ಯೆಗಳ ವಿಚಾರವಾಗಿ ಸಾರ್ವಜನಿಕರ ಕುಂದುಕೊರತೆ ಆಲಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲಾ ನಾಗರೀಗರು ತಮ್ಮ ಅಹವಾಲು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಜನರು ನನ್ನ ಬಳಿ, ಮುಖ್ಯಮಂತ್ರಿಗಳು ಹಾಗೂ ಇತರ ಸಚಿವರುಗಳ ಬಳಿ ಪ್ರತಿನಿತ್ಯ ನೂರಾರು ಅರ್ಜಿಗಳನ್ನು ತರುತ್ತಾರೆ. ಇದನ್ನು ಕಡಿಮೆ ಮಾಡಲು ಈ ಕಾರ್ಯಕ್ರಮ ರೂಪಿಸಿದ್ದೇವೆ.
ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಜನರ ಅಹವಾಲು ಸ್ವೀಕಾರ ಮಾಡಲು ಜನಸ್ಪಂದನ ಕಾರ್ಯಕ್ರಮ ನಡೆಸುವಂತೆ ಸರ್ಕಾರ ಸಚಿವರುಗಳಿಗೆ ಆದೇಶ ನೀಡಿದೆ.
ನಾನು ಈಗಾಗಲೇ ಕನಕಪುರ ಹಾಗೂ ಆನೇಕಲ್ ನಲ್ಲಿ ಇಂತಹ ಕಾರ್ಯಕ್ರಮ ಮಾಡಿದ್ದು, ಬೆಂಗಳೂರು ನಗರದಲ್ಲಿ ಮಾಡುತ್ತಿದ್ದೇನೆ. ಈ ಅವಕಾಶವನ್ನು ಎಲ್ಲರೂ ಬಳಸಿಕೊಳ್ಳಬೇಕು ಎಂದು ಆಹ್ವಾನ ನೀಡುತ್ತಿದ್ದೇವೆ.
ಬೆಂಗಳೂರಿನ ಒಂದು ಸ್ಥಳದಲ್ಲಿ ಈ ಕಾರ್ಯಕ್ರಮ ಆಯೋಜಿಸುವುದು ಬೇಡ ಎಂದು ನಾವು ವಿಧಾನಸಭಾ ಕ್ಷೇತ್ರಗಳನ್ನು ವಿಭಾಗಿಸಿ ಆಯಾ ವಲಯದಲ್ಲಿ ಒಂದೊಂದು ದಿನ ಮೀಸಲಿಡಲಾಗಿದೆ. ಕಾರ್ಯಕ್ರಮ ನಡೆಯುವ ಸ್ಥಳಗಳನ್ನು ನಿಗದಿ ಮಾಡಲಾಗಿದ್ದು, ಅದರ ಮಾಹಿತಿಯನ್ನು ಜಾಹೀರಾತುಗಳ ಮೂಲಕ ಪ್ರಕಟಿಸಲಾಗುವುದು. ಅಹವಾಲು ನೀಡಲು ಬರುವ ಜನರಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು.”
ಈ ಕಾರ್ಯಕ್ರಮದ ಪ್ರಕ್ರಿಯೆ ಹೇಗಿರುತ್ತದೆ ಎಂದು ಕೇಳಿದ ಪ್ರಶ್ನೆಗೆ, “ಅಹವಾಲು ನೀಡಲು ಬರುವವರ ಹೆಸರು ನೋಂದಣಿ ಮಾಡುತ್ತೇವೆ. ನಂತರ ಅವರ ಅಹವಾಲುಗಳನ್ನು ಸ್ವೀಕರಿಸುತ್ತೇವೆ. ಜನರ ಸಮಸ್ಯೆಗೆ ಪರಿಹಾರ ನೀಡಲು ನೂರಾರು ಅಧಿಕಾರಿಗಳು ಸ್ಥಳದಲ್ಲಿ ಉಪಸ್ಥಿತರಿರುತ್ತಾರೆ. ಜನರು ಯಾವುದೇ ದೂರು, ಅಹವಾಲು ಇದ್ದರೂ ಅದನ್ನು ನಮ್ಮ ಬಳಿಗೆ ತರಬಹುದು. ಕಾನೂನು ಚೌಕಟ್ಟಿನಲ್ಲಿ ಅವರಿಗೆ ಪರಿಹಾರ ನೀಡುವ ಪ್ರಯತ್ನ ಮಾಡಲಾಗುವುದು. ನಿಯಮ ಉಲ್ಲಂಘನೆ ದೂರುಗಳಿದ್ದರೆ ಅವುಗಳನ್ನು ಪರಿಹರಿಸಲು ಬೇರೆ ವ್ಯವಸ್ಥೆ ಮಾಡುತ್ತಿದ್ದೇವೆ. ಸ್ವಯಂ ಘೋಷಣೆ ವ್ಯವಸ್ಥೆಯಲ್ಲಿ ಸರಿಯಾಗಿ ಪಾವತಿ ಮಾಡುತ್ತಾರೆ ಎಂದು ಭಾವಿಸಿದ್ದೆವು. ಈಗ ನಾವು ಎಲ್ಲಾ ದಾಖಲೆ ಪರಿಶೀಲನೆ ಮಾಡುತ್ತಿದ್ದೇವೆ. ನಮ್ಮದೇ ಆದ ರೀತಿಯಲ್ಲಿ ಪ್ರತಿ ಮನೆ ಅಳತೆ ಮಾಡುತ್ತಿದ್ದೇವೆ. ಆನಂತರ ಆಸ್ತಿ ಮಾಲೀಕರು ತಮ್ಮ ಆಸ್ತಿಗೆ ತಕ್ಕಂತೆ ತೆರಿಗೆ ಪಾವತಿ ಮಾಡಬೇಕು. ತೆರಿಗೆ ಕಟ್ಟದವರಿಗೆ ಬೀಗ ಹಾಕುವ ಪ್ರಕ್ರಿಯೆ ಆರಂಭವಾಗಿದೆ. ನಾನು ಟ್ರಸ್ಟಿಯಾಗಿದ್ದ ಶಾಲೆಗೂ ಬೀಗ ಹಾಕಿದ್ದಾರೆ” ಎಂದು ತಿಳಿಸಿದರು.
ಮಾಲ್ ಗಳೇ ತೆರಿಗೆ ಕಟ್ಟಿಲ್ಲ ಎಂದು ಕೇಳಿದಾಗ, “ದೊಡ್ಡ ದೊಡ್ಡವರನ್ನು ಮೊದಲು ಹುಡುಕಿ ಕ್ರಮ ಕೈಗೊಳ್ಳುತ್ತಿದ್ದೇವೆ. ನಾವು ತೆರಿಗೆ ಹಣದಿಂದಲೇ ನಗರದ ಮೂಲ ಸೌಕರ್ಯ ವ್ಯವಸ್ಥೆ ಕಲ್ಪಿಸಬೇಕು. ನಾವು ಯಾರನ್ನೂ ಬಿಡುವುದಿಲ್ಲ. ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ. ಒಂದುವೇಳೆ ಯಾರಾದರೂ ಹೆಚ್ಚಿನ ತೆರಿಗೆ ಪಾವತಿ ಮಾಡಿದ್ದರೆ, ಅವರಿಗೆ ಸೂಕ್ತ ಪರಿಹಾರ ನೀಡಲಾಗುವುದು” ಎಂದು ತಿಳಿಸಿದರು.
ಬ್ರ್ಯಾಂಡ್ ಬೆಂಗಳೂರು ವಿಚಾರವಾಗಿ ಯಾವ ಯೋಜನೆ ಮೊದಲು ಕೈಗೆತ್ತಿಕೊಳ್ಳುತ್ತೀರಿ ಎಂದು ಕೇಳಿದಾಗ, “ನಮ್ಮ ಸ್ವತ್ತು ಮೂಲಕ ಮೊದಲು ಎಲ್ಲರ ಮನೆಗಳ ಖಾತೆ ದಾಖಲೆ ನೀಡುತ್ತೇವೆ” ಎಂದು ತಿಳಿಸಿದರು.
ಕರವೇ ಕಾರ್ಯಕರ್ತರ ಪ್ರತಿಭಟನೆ ಬಗ್ಗೆ ಕೇಳಿದಾಗ, “ನಮಗೂ ಕನ್ನಡ ಹೋರಾಟಗಾರರ ಮೇಲೆ ಪ್ರೀತಿ ಅಭಿಮಾನ ಇದೆ. ಅವರನ್ನು ನಮ್ಮ ಕುಟುಂಬ ಸದಸ್ಯರು ಎಂದು ಭಾವಿಸಿದ್ದೇವೆ. ಯಾರೋ ಕಾನೂನು ಕೈಗೆತ್ತಿಕೊಳ್ಳ ಬಾರದು. ಕನ್ನಡಿಗರು ಹಾಗೂ ರಾಜ್ಯದ ಘನತೆ ಹಾಳಾಗಬಾರದು. ನಿಮ್ಮ ಹೋರಾಟ ಹಾಗೂ ಧ್ವನಿಗೆ ನಾವು ಸ್ಪಂದಿಸುತ್ತೇವೆ. ಹಾಗೆಂದು ಆಸ್ತಿಪಾಸ್ತಿ ಹಾನಿ ಮಾಡುವಂತಿಲ್ಲ. ಸರ್ಕಾರ ಪೊಲೀಸರ ಕಾರ್ಯವೈಖರಿಯಲ್ಲಿ ಹೆಚ್ಚು ಹಸ್ತಕ್ಷೇಪ ಮಾಡಲು ಆಗುವುದಿಲ್ಲ” ಎಂದು ತಿಳಿಸಿದರು.
ಮಧು ಬಂಗಾರಪ್ಪ ಅವರ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ಬಗ್ಗೆ ಕೇಳಿದಾಗ, “ವ್ಯಾಪಾರ, ವ್ಯವಹಾರ, ಸಾಲ ಪಡೆದಿರುತ್ತೇವೆ ಅದನ್ನು ಪಾವತಿ ಮಾಡದಿದ್ದಾಗ ಚೆಕ್ ಬೌನ್ಸ್ ಆಗುತ್ತವೆ. ಅದು ಅವರ ವೈಯಕ್ತಿಕ ವ್ಯವಹಾರ. ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ” ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ