*ತುಂಗಭದ್ರಾ ಅಣೆಕಟ್ಟು ಹೂಳಿನ ಸಮಸ್ಯೆ; ಮುಂದಿನ ಬಜೆಟ್ ವೇಳೆಗೆ ಸಮತೋಲಿತ ಅಣೆಕಟ್ಟು ಯೋಜನೆ ಕಾರ್ಯರೂಪಕ್ಕೆ: ಡಿಸಿಎಂ*
ಪ್ರಗತಿವಾಹಿನಿ ಸುದ್ದಿ; ಸಿಂಧನೂರು: ತುಂಗಭದ್ರಾ ಅಣೆಕಟ್ಟಿನಲ್ಲಿ ಹೂಳು ತುಂಬಿದ್ದು, ನವಲಿಯಲ್ಲಿ ಸಮತೋಲಿತ ಅಣೆಕಟ್ಟು ನಿರ್ಮಾಣ ಮಾಡುವ ಯೋಜನೆಯನ್ನು ಸರ್ಕಾರ ಸಿದ್ಧಪಡಿಸಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸಿಂಧನೂರಿನ ತಿಮ್ಮಾಪುರ ಏತನೀರಾವರಿ ಯೋಜನೆ ಉದ್ಘಾಟನೆ ಮತ್ತು ಪದವಿ ಕಾಲೇಜು ಸುವರ್ಣ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತುಂಗಭದ್ರಾ ಅಣೆಕಟ್ಟಿನಲ್ಲಿ ಹೂಳು ತುಂಬಿರುವ ಕಾರಣ, ಸುಮಾರು 30 ಟಿಎಂಸಿಗೂ ಹೆಚ್ಚು ನೀರು ರಾಜ್ಯಕ್ಕೆ ನಷ್ಟವಾಗುತ್ತಿದೆ. ಆದ ಕಾರಣ ನವಲಿಯಲ್ಲಿ ಸಮತೋಲಿತ ಅಣೆಕಟ್ಟು ನಿರ್ಮಾಣದ ಕುರಿತು ಈಗಾಗಲೇ ಮುಖ್ಯಮಂತ್ರಿಗಳ ಬಳಿ ಚರ್ಚೆ ಮಾಡಲಾಗಿದೆ. ಈ ಯೋಜನೆಯಿಂದ ಈ ಭಾಗದ ರೈತರ ನೀರಿನ ಕೊರತೆ ಬಗೆಹರಿದಂತಾಗುತ್ತದೆ. ಈ ಯೋಜನೆ ಸಂಬಂಧ ತೆಲಂಗಾಣ, ಆಂಧ್ರ ಪ್ರದೇಶದ ಸರ್ಕಾರದ ಜೊತೆಗೆ ಮಾತನಾಡಲಾಗುವುದು. ಮೂರು ರಾಜ್ಯಗಳು ಒಟ್ಟಿಗೆ ಸೇರಿ ಈ ಕೆಲಸ ಮಾಡಬೇಕಾಗಿದೆ. ಮುಂದಿನ ಬಜೆಟ್ ವೇಳೆಗೆ ಇದನ್ನು ಕಾರ್ಯರೂಪಕ್ಕೆ ತರಲಾಗುವುದು.
ಸಮತೋಲಿತ ಅಣೆಕಟ್ಟಿನಿಂದ ನಮ್ಮ ರಾಜ್ಯದ ಒಂದಷ್ಟು ಹಳ್ಳಿಗಳು ಮುಳುಗಡೆಯಾಗುತ್ತವೆ. ಈ ವೇಳೆ ಜನರನ್ನು ಸ್ಥಳಾಂತರ ಮಾಡಬೇಕು, ಅವರಿಗೆ ಪರಿಹಾರ ನೀಡಬೇಕಾಗುತ್ತದೆ. ಸಮುದ್ರಕ್ಕೆ ವ್ಯರ್ಥವಾಗಿ ನೀರು ಹರಿಯುವುದನ್ನು ತಪ್ಪಿಸಲು ಮತ್ತು ರೈತರ ಹಿತದೃಷ್ಟಿಯಿಂದ ಈ ಯೋಜನೆಯ ಅನುಷ್ಟಾನಕ್ಕೆ ಸರ್ಕಾರ ಬದ್ದವಾಗಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ಮಾತು ಕೊಟ್ಟಿತ್ತು. ಅಧಿಕಾರಕ್ಕೆ ಬಂದ ತಕ್ಷಣ ನುಡಿದಂತೆ ನಡೆದಿದ್ದೇವೆ. ಐದು ಗ್ಯಾರಂಟಿಗಳನ್ನು ಜಾರಿಗೆ ತಂದು ಇಡೀ ದೇಶಕ್ಕೆ ಮಾದರಿಯಾಗಿದ್ದೇವೆ. ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿನಂತೆ ಯಾವುದೇ ಪಕ್ಷ ನಡೆದುಕೊಳ್ಳುವುದು ಕಷ್ಟದ ಕೆಲಸ. ಆದರೆ ನನ್ನ 40 ವರ್ಷಗಳ ರಾಜಕೀಯ ಜೀವನದ ಅನುಭವದ ಪ್ರಕಾರ ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ.
ಈ ಹಿಂದಿನ ಬಿಜೆಪಿ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ. ಎಲ್ಲರ ಖಾತೆಗೆ 15 ಲಕ್ಷ, 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದು ಹೇಳಿ ಈ ದೇಶದ ಜನರಿಗೆ ಮೋಸ ಮಾಡಿತು. ಕೇಂದ್ರ ಸರ್ಕಾರ ಅಕ್ಕಿ ಕೊಡದೆ ಮೋಸ ಮಾಡಿತು. ಆದರೆ ನಾವು ಅಕ್ಕಿಯ ಬದಲು ಹಣವನ್ನು ಕೊಟ್ಟಿದ್ದೇವೆ. ಎಲ್ಲರ ಮನೆ ಬೆಳಗಬೇಕು ಎಂಬುದು ಕಾಂಗ್ರೆಸ್ ಪಕ್ಷದ ಆಶಯ.
ನಾಲ್ಕು ಗ್ಯಾರಂಟಿಗಳು ಯಶಸ್ವಿಯಾಗಿ ಜನರನ್ನು ತಲುಪಿವೆ. ಐದನೇ ಗ್ಯಾರಂಟಿ ಯೋಜನೆ ಯುವನಿಧಿಯ ಹಣ ಮುಂದಿನ ಜನವರಿ ತಿಂಗಳಿನಲ್ಲಿ ಯುವಕ- ಯುವತಿಯರ ಖಾತೆಗೆ ಜಮೆಯಾಗಲಿದೆ. ಬರಗಾಲದ ಸಮಯದಲ್ಲೂ ಜನರ ಬದುಕಿನಲ್ಲಿ ಬದಲಾವಣೆ ತರಬೇಕು ಎಂದು ಗ್ಯಾರಂಟಿ ಯೋಜನೆಗಳಿಗೆ ಸುಮಾರು 60 ಸಾವಿರ ಕೋಟಿಯಷ್ಟು ಹಣ ಖರ್ಚು ಮಾಡಲಾಗಿದೆ.
ನಮ್ಮ ತಾಲ್ಲೂಕಿಗಿಂತ ಸಿಂಧನೂರು ಸಮೃದ್ದವಾಗಿದೆ
ಸಿಂದನೂರಿನವರು ಹಿಂದುಳಿದಿಲ್ಲ, 3 ಲಕ್ಷ ಎಕರೆಗೂ ಹೆಚ್ಚು ನೀರಾವರಿ ಪ್ರದೇಶವಿದೆ. ಕಲ್ಯಾಣ ಕರ್ನಾಟಕ ಹಿಂದುಳಿದಿದೆ ಎಂದು ಅನೇಕರು ಹೇಳುತ್ತಿದ್ದರು. ಆದರೆ ಸಿಂಧನೂರು ನಮ್ಮ ತಾಲ್ಲೂಕಿಗಿಂತ ಅತ್ಯಂತ ಹೆಚ್ಚು ಸಮೃದ್ದವಾಗಿದೆ ಮತ್ತು ದೊಡ್ಡದಾದ ಪದವಿ ಕಾಲೇಜು ಹೊಂದಿದೆ ಎನ್ನುವುದೇ ತಿಳಿದಿರಲಿಲ್ಲ. ಸಿಂಧನೂರಿನ ರೈತರು ದೇಶಕ್ಕೆ ಮಾದರಿ ಹಾಗೂ ವೀರ ಸೈನಿಕರ ನಾಡು ಎಂದು ಹೆಸರುವಾಸಿಯಾಗಿದೆ. ಸಿಂಧನೂರಿನ ಯುವಶಕ್ತಿಯನ್ನು ನೋಡಿದರೆ ನಮ್ಮ ಸ್ಫೂರ್ತಿಯೂ ಹೆಚ್ಚಾಗುತ್ತದೆ. ರಾಯಚೂರು ಜಿಲ್ಲೆಗೆ ಸಿಂಧನೂರು ಮಾದರಿ ಕ್ಷೇತ್ರವಾಗಿದೆ ಎಂದರು.
ಡಿಸಿಎಂ ಗ್ಯಾರಂಟಿ ಕವನಕ್ಕೆ ಪ್ರೇಕ್ಷಕರ ಚಪ್ಪಾಳೆ, ಶಿಳ್ಳೆಗಳ ಸುರಿಮಳೆ
ಐದು ಬೆರಳು ಸೇರಿ ಒಂದು ಮುಷ್ಟಿಯಾಯಿತು,
ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು,
ಅರಳಿದ ಕಮಲದ ಹೂವು ಇದನ್ನು ನೋಡಿ ಉದುರಿ ಹೋಯಿತು,
ಐದು ಗ್ಯಾರಂಟಿ ನೋಡಿ ಮಹಿಳೆ ತಾನು ಹೊತ್ತ ತೆನೆಯ ಎಸೆದು ಹೋದಳು,
ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು,
ಕರ್ನಾಟಕ ಸಮೃದ್ಧವಾಯಿತು,
ಕರ್ನಾಟಕ ಪ್ರಬುದ್ಧವಾಯಿತು ಎಂದು ಕವನ ವಾಚಿಸಿದರು. ಡಿಸಿಎಂ ಕವನಕ್ಕೆ ಸಭಿಕರು ಶಿಳ್ಳೆಹಾಕಿ ಚಪ್ಪಳೆ ಹೊಡೆದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ