Kannada NewsKarnataka NewsLatestPolitics

*ಖರ್ಗೆ ಬದಲು ರಾಹುಲ್ ಗಾಂಧಿ ಪ್ರಧಾನಿ ಆಗಲಿ ಎಂದ ಸಿದ್ದರಾಮಯ್ಯ*

ರಾಜ್ಯದ ದಲಿತರು ಈ ಹೇಳಿಕೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದ ಹೆಚ್.ಡಿ.ಕುಮಾರಸ್ವಾಮಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮೈತ್ರಿಕೂಟದ ಪಕ್ಷಗಳು ಮಲ್ಲಿಕಾರ್ಜುನ ಖರ್ಗೆ ಅವರೇ ಪ್ರಧಾನಿ ಅಭ್ಯರ್ಥಿ ಆಗಲಿ ಎಂದು ಹೇಳುತ್ತಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ರಾಹುಲ್ ಗಾಂಧಿ ಪ್ರಧಾನಿಯಾಗಲಿ ಎಂದು ಹೇಳುತ್ತಿದ್ದಾರೆ. ಇದನ್ನು ರಾಜ್ಯದ ದಲಿತರು ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಬೆಂಗಳೂರಿನ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಸಿಎಂ ಅರವಿಂದ ಕೇಜ್ರೀವಾಲ್ ಸೇರಿದಂತೆ ಮೈತ್ರಿಕೂಟದ 16 ಪಕ್ಷಗಳ ನಾಯಕರು ಖರ್ಗೆ ಪ್ರಧಾನಿ ಅಭ್ಯರ್ಥಿ ಆಗಲಿ ಎನ್ನುತ್ತಿದ್ದಾರೆ. ಆದರೆ, ಸಿದ್ದರಾಮಣ್ಣ ಮಾತ್ರ ರಾಹುಲ್ ಗಾಂಧಿ ಪಿಎಂ ಆಗಬೇಕು ಅಂತಾರೆ. ಅಂದರೆ, ರಾಹುಲ್ ಗಾಂಧಿ ಋಣ ತೀರಿಸಬೇಕು ಅವರು. ಅದಕ್ಕೆ ಹೀಗೆ ಹೇಳುತ್ತಿದ್ದಾರೆ ಎಂದು ಟಾಂಗ್ ನೀಡಿದರು.

ಖರ್ಗೆ ಅವರು ಪ್ರಧಾನಿ ಆಗುತ್ತಾರೋ ಬಿಡುತ್ತಾರೋ ಬೇರೆ ಮಾತು. ಅನ್ಯ ರಾಜ್ಯಗಳ ಪಕ್ಷಗಳ ನಾಯಕರು ಖರ್ಗೆ ಪ್ರಧಾನಿ ಅಭ್ಯರ್ಥಿ ಆಗಲಿ ಎಂದು ಹೇಳಿದರೆ, ಇವರು ಕೊನೆಪಕ್ಷ ಸುಮ್ಮನಿರಬಹುದಿತ್ತು. ದಲಿತ ಎನ್ನುವುದರ ಬದಲು ಒಬ್ಬ ಕನ್ನಡಿಗ ಪ್ರಧಾನಮಂತ್ರಿ ಅಭ್ಯರ್ಥಿ ಆಗಲಿ ಎಂದು ಹೇಳುವ ಹೃದಯ ವೈಶಾಲ್ಯತೆ ಮೆರೆಯಬೇಕಿತ್ತು. ಅದನ್ನು ಬಿಟ್ಟು ಸಿದ್ದರಾಮಯ್ಯ ರಾಹುಲ್ ಗಾಂಧಿ ಆಗಬೇಕು ಅಂತಾರೆ. ಇದನ್ನು ದಲಿತ ಸಮಾಜವೇ ತೀರ್ಮಾನ ಮಾಡಲಿ. ನಾನು ಮಾತ್ರ ಮುಂದೆ, ಅಹಿಂದ ಎಲ್ಲಾ ನನ್ನ ಹಿಂದೆ ಎನ್ನುವ ಅವರ ಮನಃಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲಿ ಎಂದು ಅವರು ಹೇಳಿದರು.

ಖರ್ಗೆ ಅವರ ತ್ಯಾಗದಿಂದ ಸಿದ್ದರಾಮಯ್ಯ ಅವರು ಈ ಸ್ಥಾನದಲ್ಲಿ ಇದ್ದಾರೆ. ಹಿಂದೆ ಅವರನ್ನು ಪ್ರತಿಪಕ್ಷ ಸ್ಥಾನದಿಂದ ಒಕ್ಕಲೆಬ್ಬಿಸಿದ್ದವರು ಕೂಡ ಇವರೇ. ಪರಮೇಶ್ವರ ಅವರು ಸಿಎಂ ಆಗದಂತೆ ತಡೆದವರು ಕೂಡ ಇವರೇ. ಆದರೂ ತಾವು ದಲಿತೋದ್ಧಾರಕ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಇದನ್ನು ಆ ಸಮುದಾಯದ ಜನರು ನಂಬುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.

ಆದರೆ; ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಲಿದೆ. ಈ ಮೈತ್ರಿಕೂಟ ಎಲ್ಲಾ ಕ್ಷೇತ್ರಗಳಲ್ಲಿ ಗೆದ್ದು ಪ್ರಧಾನಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಸ್ಥಾನದಲ್ಲಿ ನೋಡಲಿದೆ ಎಂದು ಅವರು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button