*ಮಂದಿರ ಉದ್ಘಾಟನೆ ಸಮಯದಲ್ಲಿ ಕಾಂಗ್ರೆಸ್ನಿಂದ ಬೆದರಿಕೆ ಯತ್ನ: ವಿಪಕ್ಷ ನಾಯಕ ಆರ್.ಅಶೋಕ ಆರೋಪ*
ದೇಶದ್ರೋಹಿ ಸಂಘಟನೆಗಳ ಪ್ರಕರಣ ಮರುಪರಿಶೀಲಿಸಲಿ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹಳೆಯ ಪ್ರಕರಣಗಳನ್ನು ಮರು ಪರಿಶೀಲಿಸುವ ಮೂಲಕ ಕಾಂಗ್ರೆಸ್ ಸರ್ಕಾರ ರಾಮಭಕ್ತರಲ್ಲಿ ಭಯ ಹುಟ್ಟುಹಾಕುವ ಪ್ರಯತ್ನ ಮಾಡುತ್ತಿದೆ. ಆದರೆ ರಾಮಭಕ್ತರ ನೆರವಿಗೆ ಬಿಜೆಪಿ ನಿಲ್ಲಲಿದೆ, ಇದಕ್ಕೆ ಯಾರೂ ಅಂಜಬೇಕಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಜನ್ಮಭೂಮಿ ಹೋರಾಟದಲ್ಲಿ ನಾನು ಕೂಡ ಪಾಲ್ಗೊಂಡಿದ್ದೇನೆ. ಕರಸೇವೆಗೆ ಯಾರು ಹೋಗಿದ್ದಾರೆ ಎಂದು ಈಗ ಪೊಲೀಸರು ಹುಡುಕುತ್ತಿದ್ದಾರೆ. ಈ ಮೂಲಕ ರಾಮಭಕ್ತರಿಗೆ ಸಂದೇಶ ನೀಡುತ್ತಿದ್ದಾರೆ. ರಾಮಮಂದಿರ ಉದ್ಘಾಟಿಸುವ ಸಮಯದಲ್ಲೇ ಹಳೆ ಪ್ರಕರಣ ಪರಿಶೀಲನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಈ ರೀತಿ ಹಿಂದೂಗಳ ಮೇಲೆ ದಾಳಿ ನಡೆಯುತ್ತಿದೆ. ಆದರೆ ರಾಮಭಕ್ತರಿಗೆ ಕಷ್ಟ ಬರದಂತೆ ಬಿಜೆಪಿ ಅವರ ನೆರವಿಗೆ ನಿಲ್ಲಲಿದೆ ಎಂದು ತಿಳಿಸಿದರು.
ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆಯಾಗಲು ಇಪ್ಪತ್ತು ದಿನ ಬಾಕಿ ಇದೆ. ಪ್ರತಿ ಮನೆಗಳಲ್ಲಿ ದೀಪ ಹಚ್ಚಿ, ಮಂತ್ರಾಕ್ಷತೆ ವಿತರಿಸಿ ಸಂಭ್ರಮಾಚರಣೆಯಾಗುತ್ತಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದು, ರಾಜ್ಯದಲ್ಲಿ ಕೋಟ್ಯಂತರ ಜನರು ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಬಗ್ಗೆ ಹೇಳಿ, ಏನೋ ಅಪರಾಧ ಮಾಡುತ್ತಿದ್ದೇವೆ ಎಂಬಂತೆ ಮಾತಾಡುತ್ತಿದ್ದಾರೆ. ರಾಜ್ಯದಲ್ಲಿ ದೊಡ್ಡ ಆಚರಣೆ ಆಗುತ್ತಿದೆ ಎಂದು ಕಾಂಗ್ರೆಸ್ ನಾಯಕರಿಗೆ ಭಯ ಬಂದಿದೆ. ಇದು ಲೋಕಸಭೆ ಚುನಾವಣೆಗೆ ಅಡ್ಡಿಯಾಗಬಹುದೆಂಬ ಅಭಿಪ್ರಾಯ ಅವರಿಗೆ ಬಂದಿದೆ ಎಂದರು.
ಇದು 31 ವರ್ಷದ ಹಳೆಯ ಪ್ರಕರಣ. ಇದರಲ್ಲಿ ಮೂರ್ನಾಲ್ಕು ಜನರು ಮೃತಪಟ್ಟಿದ್ದಾರೆ. ಇಷ್ಟಿದ್ದರೂ ನೋಟಿಸ್ ಕೂಡ ನೀಡದೆ ಕರಸೇವಕರನ್ನು ಬಂಧಿಸಿದ್ದಾರೆ. ಒಬ್ಬ ಆಟೋರಿಕ್ಷಾ ಚಾಲಕ ವರ್ಷಪೂರ್ತಿ ಅಲ್ಲೇ ಆಟೋ ಚಲಾಯಿಸಿಕೊಂಡು ದುಡಿಯುತ್ತಿದ್ದಾನೆ. ಅವನನ್ನು ತಲೆಮರೆಸಿಕೊಂಡಿದ್ದಾನೆ ಎಂಬ ನೆಪ ಹೇಳಿರುವ ಮಾನ ಮರ್ಯಾದೆ ಇಲ್ಲದ ಸರ್ಕಾರ ಆತನನ್ನು ಬಂಧಿಸಿದೆ. ರಾಮಮಂದಿರ ಉದ್ಘಾಟನೆಗೆ ಯಾರೂ ಹೋಗಬಾರದು ಎಂಬಂತಹ ಸ್ಥಿತಿ ನಿರ್ಮಿಸಲಾಗುತ್ತಿದೆ. ರಾಮನ ಪೂಜೆ ಮಾಡಬಾರದು ಎಂದು ಬೆದರಿಕೆ ಹಾಕುವಂತಿದೆ ಎಂದರು.
ಹಳೆ ಪ್ರಕರಣ ಎಂದಮೇಲೆ ಡಿಜೆ ಹಳ್ಳಿ, ಕೆಜಿ ಹಳ್ಳಿಯ ಪ್ರಕರಣ, ಪಾಪ್ಯುಲರ್ ಫ್ರಂಟ್ ಮೊದಲಾದ ದೇಶದ್ರೋಹಿ ಸಂಘಟನೆಗಳ ಪ್ರಕರಣಗಳನ್ನು ಕೂಡ ಪೊಲೀಸರು ಈಗ ಪರಿಶೀಲಿಸಬೇಕಿತ್ತು. ಮುಚ್ಚಿ ಹಾಕಿದ ಪ್ರಕರಣಗಳನ್ನು ಮತ್ತೆ ತೆಗೆದಿದ್ದರೆ ಯಾರು ತಪ್ಪಿತಸ್ಥರು ಎಂದು ಗೊತ್ತಾಗುತ್ತಿತ್ತು. ರಾಮಭಕ್ತರು ಯಾರೂ ದೇಶದ್ರೋಹಿ ಸಂಘಟನೆಗಳ ರೀತಿಯಲ್ಲಿ ಪಾಕಿಸ್ತಾನದಿಂದ ಹಣ ಪಡೆದು ಚಟುವಟಿಕೆ ನಡೆಸಿಲ್ಲ. ಸರ್ಕಾರ ದೇಶದ್ರೋಹಿಗಳ ಹಳೆ ಪ್ರಕರಣ ಪರಿಶೀಲನೆ ಮಾಡುವುದಿಲ್ಲ. ಅವರನ್ನು ಕಂಡರೆ ಕಾಂಗ್ರೆಸ್ ನಾಯಕರು ಭಯಕ್ಕೊಳಗಾಗುತ್ತಾರೆ. ಆದರೆ ಹಿಂದೂಗಳನ್ನು ಮಾತ್ರ ಜೈಲಿಗೆ ಹಾಕುತ್ತಾರೆ ಎಂದು ಆಕ್ರೋಶ ಹೊರಹಾಕಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ