*ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ವಿಸ್ಮಯ: ಕೌತುಕದ ಬಗ್ಗೆ ಪ್ರಧಾನ ಅರ್ಚಕರು ನೀಡಿದ ವಿಶ್ಲೇಷಣೆಯೇನು?*
ಪ್ರಗತಿವಾಹಿನಿ ಸುದ್ದಿ: ಮಕರ ಸಂಕ್ರಮಣದ ಸಂದರ್ಭದಲ್ಲಿ ಬೆಂಗಳೂರಿನ ಗವಿಪುರಂನಲ್ಲಿರುವ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಚಮತ್ಕಾರವೊಂದು ನಡೆದಿದ್ದು, ಸೂರ್ಯ ದೇವನು ಶಿವಲಿಂಗಕ್ಕೆ ನಮಸ್ಕರಿಸುವ ಮೂಲಕ ತನ್ನ ಪಥವನ್ನು ಬದಲಿಸಿದ್ದಾನೆ.
ಪ್ರತಿ ವರ್ಷದಂತೆ ಈವರ್ಷವೂ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಮಕರ ಸಂಕ್ರಾಂತಿಯಂದು ಜರುಗುವ ಈ ವಿಸ್ಮಯವನ್ನು ಸಾವಿರಾರು ಜನರು ಭಕ್ತಿಭಾವದಿಂದ ಕಣ್ತುಂಬಿಕೊಂಡು ಪುನೀತರಾದರು.
ಸೂರ್ಯ ದೇವರು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ತನ್ನ ಪಥ ಬದಲಿಸುವ ವೇಳೆ ಸಂಜೆ 5:16ರಿಂದ 5:30ರ ಸಂದರ್ಭದಲ್ಲಿ ಸೂರ್ಯ ಕಿರಣಗಳು ದೇವಾಲಯದ ನಂದಿ ವಿಗ್ರಹದ ಮೂಲಕ ಹಾದು ಶಿವಲಿಂಗದ ಪಾದಸ್ಪರ್ಶ ಮಾಡಿತು. ಈ ವೇಳೆ ದೇವಾಲಯದ ಗರ್ಭಗುಡಿಯಲ್ಲಿನ ಕಗ್ಗತ್ತಲು ಮಾಯವಾಗಿ ಪ್ರಕಾಶಮಾನವಾಗಿ ಬೆಳಕು ಆವರಿದ್ದು ಸಾವಿರಾರು ಜನರು ಈ ಕೌತಕಕ್ಕೆ ಸಾಕ್ಷಿಯಾದರು. ಕೆಲಹೊತ್ತು ಶಿವಲಿಂಗದ ಮೇಲೆ ಪ್ರಖರವಾಗಿ ಸೂರ್ಯನ ಕಿರ್ಣಗಳು ಇದ್ದವು. ಈಮೂಲಕ ಸೂರ್ಯ ದೇವರು ಶಿವನಿಗೆ ಅಭಿಷೇಕ ಮಾಡಿದಂತಹ ಆಧ್ಯಾತ್ಮಿಕ ಭಾವ ಕಂಡು ಬಂತು. ಬಳಿಕ ಶಿವಲಿಂಗದ ಶಿಖರವನ್ನು ಸ್ಪರ್ಶಿಸಿದ ಕಿರಣಗಳು ಹಾಗೆಯೇ ಮರೆಯಾದವು.
ಈ ಐತಿಹಾಸಿಕ ಕ್ಷಣವನ್ನು ಕಂಡ ಭಕ್ತರು ಪುನೀತರಾದರು. ಈ ವೇಳೆ ದೇವಸ್ಥನದ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ್ ಅವರ ನೇತೃತ್ವದಲ್ಲಿ ಪೂರ್ಣಕುಂಭ ಅಭಿಷೇಕ ನೆರವೇರಿತು.
ಇನ್ನು ಈ ಐತಿಹಾಸಿಕ ಕ್ಷಣವನ್ನು ವಿಶ್ಲೇಷಿಸಿದ ಸೀಮದುಂದರ ದೀಕ್ಷಿತ್ ಅವರು, ಸೂರ್ಯನ ಕಿರಣಗಳು ಶಿವಲಿಂಗದ ಮೇಲೆ 46 ಸೆಕೆಂಡುಗಳು ಇದ್ದವು. ಆದರೆ ಗಂಗೆಯ ದರ್ಶನ ಮಾಡಿಲ್ಲ. ಗಂಗೆ ಕುಪಿತಗೊಂಡಿದ್ದಾಳೆ. ಹೀಗಾಗಿ ಜಲಕಂಟಕವಾಗಬಹುದು. ರುದ್ರಾಭಿಷೇಕ ಮಂತ್ರದ ಮೂಲಕ ಗಂಗೆಯನ್ನು ಸಮಾಧಾನಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ