Kannada NewsKarnataka NewsLatest

*ಸಂಕ್ರಾಂತಿ ಹಬ್ಬದ ದಿನವೇ ಸಾಲು ಸಾಲು ಅಪಘಾತ; 14 ಜನರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಸಂಕ್ರಮಣ ಹಬ್ಬದ ದಿನವೇ ರಾಜ್ಯದಲ್ಲಿ ಸಾಲು ಸಾಲು ಅಪಘಾತಗಳು ಸಂಭವಿಸಿದ್ದು, ಒಂದೇ ದಿನದಲ್ಲಿ 14 ಜನರು ಭೀಕರ ಅಪಘಾತದಲ್ಲಿ ಬಲಿಯಾಗಿದ್ದಾರೆ.

ವಿಜಯನಗರ, ಚಾಮರಾಜನಗರ, ಬೆಂಗಳೂರು, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸಾಲು ಸಾಲು ಸರಣಿ ಅಪಘಾತಗಳು ಸಂಭವಿಸಿದ್ದು ಒಟ್ಟು 14 ಜನರು ಸಾವನ್ನಪ್ಪಿದ್ದಾರೆ.

ದಾವಣಗೆರೆಯಲ್ಲಿ ಹಸು ಅಡ್ಡ ಬಂತೆಂದು ತಪ್ಪಿಸಲು ಹೋಗಿ ಬೊಲೆರೊ ವಾಹನ ಪಲ್ಟಿಯಾಗಿ ಬಿದ್ದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಡಿಕೆ ಕೊಯ್ಲು ಮುಗಿಸಿ ವಾಪಾಸ್ ಆಗುತ್ತಿದ್ದಾಗ ಬೊಲೆರೊ ವಾಹನ ಪಲ್ಟಿಯಾಗಿ ಬಿದ್ದು ಈ ದುರಂತ ಸಂಭವಿಸಿದೆ.

ಮೃತರನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಚಂದನಕೆರೆಯ ನಾಗರಾಜ್ (38), ಗೌತಮ್ (17) ಹಾಗೂ ಮಂಜುನಾಥ್ (45) ಎಂದು ಗುರುತಿಸಲಾಗಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಜಿನಕನಹಳ್ಳಿ ಗ್ರಾಮದಲ್ಲಿ ಭತ್ತ ಕಟಾವು ಮಾಡುವ ಯಂತ್ರದ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.

ಬಂಡೀಪುರ ಉದ್ಯಾನವನಕ್ಕೆ ಸಫಾರಿ ನೋಡಲೆಂದು ಪತಿ-ಪತ್ನಿ ಇಬ್ಬರು ಮಕ್ಕಳೊಂದಿಗೆ ಬೈಕ್ ನಲ್ಲಿ ಹೊರಟಿದ್ದರು. ಈ ವೇಳೆ ಜಿನಕನಹಳ್ಳಿ ಬಳಿ ಬೈಕ್ ಭತ್ತ ಕಟಾವ್ ಮಾಡುವ ಯಂತ್ರದ ಲಾರಿಗೆ ಡಿಕ್ಕಿ ಹೊಡೆದಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಓರ್ವ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

ಮೃತರನ್ನು ಪಾಳ್ಯ ಗ್ರಾಮದ ಸಂತೋಷ್ (32), ಪತ್ನಿ ಸೌಮ್ಯ (27), ಮಗಳು ನಿತ್ಯಸಾಕ್ಷಿ (4) ಮೃತರು . 9 ವರ್ಷದ ಬಾಲಕ ಅಭಿ ಗಂಭೀರವಾಗಿ ಗಾಯಗೊಂಡಿದ್ದ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬಾಲಕ ಕೂಡ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ವಿಜಯನಗರದಲ್ಲಿ ಲಾರಿ ಹರಿದು 4 ವರ್ಷದ ಮಗು ಸಾವನ್ನಪ್ಪಿದೆ. ಚಿಕ್ಕಬಳ್ಳಾಪುರದ ಪೆರಮಾಚನಹಳ್ಳಿ ಬಳಿ ಸರ್ಕಾರಿ ಬಸ್ ಅಪಘಾತಕ್ಕೀಡಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಮಾಡಿಕೆರೆ ಕ್ರಾಸ್ ಬಳಿ ಕಾರು ಪಲ್ಟಿಯಾಗಿ ಓರ್ವ ಸಾವನ್ನಪ್ಪಿದ್ದಾನೆ.

ಬೆಂಗಳೂರಿನಲ್ಲಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಕಾಂಪೌಂಡ್ ಗೆ ಗುದ್ದಿದ ಪರಿಣಾಮ ಕಾರಿನಲ್ಲಿದ್ದ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಾವೇರಿಯಲ್ಲಿ ನಡೆದ ಅಪಘಾತಲ್ಲಿ ಓರ್ವ ಬಲಿಯಾಗಿದ್ದು, ತುಮಕೂರಿನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಒಟ್ಟಾರೆ ಮಕರ ಸಂಕ್ರಮಣದ ಹಬ್ಬದ ದಿನವೇ ರಾಜ್ಯದಲ್ಲಿ ಸಾಲು ಸಾಲು ಅಪಘಾತ ಸಂಭವಿಸಿದ್ದು, ಸಾವು ನೋವುಗಳು ಸಂಭವಿಸಿವೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button