ರಾಜಕೀಯಕ್ಕಾಗಿ ಪ್ರಧಾನಿ ಮತ್ತು ಕೇಂದ್ರದ ಮೇಲೆ ಸಿಎಂ ಗೂಬೆ ಕೂರಿಸುತ್ತಿದ್ದಾರೆ
ನವದೆಹಲಿ: ಪ್ರಧಾನಮಂತ್ರಿಗಳನ್ನು ಬಹಿರಂಗ ಚರ್ಚೆಗೆ ಕರೆದಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉದ್ಧಟತನದ ಪರಮಾವಧಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
ನವದೆಹಲಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು; ರಾಜ್ಯ ಕಾಂಗ್ರೆಸ್ ಸರಕಾರ ಹಾಗೂ ಕೇಂದ್ರ ಸರಕಾರದ ನಡುವೆ ವಿಶ್ವಾಸದ ಕೊರತೆ ಎದ್ದು ಕಾಣುತ್ತಿದೆ. ರಾಜ್ಯ ಸರಕಾರ ಪ್ರತಿಯೊಂದಕ್ಕೂ ಕೇಂದ್ರವ ಮತ್ತು ಪ್ರಧಾನಮಂತ್ರಿಗಳನ್ನು ದೂರುವ ಪರಿಪಾಠ ಬೆಳೆಸಿಕೊಂಡಿದೆ. ಇದು ಸರಿಯಲ್ಲ. ಕಾಂಗ್ರೆಸ್ ಸರಕಾರವು ತನ್ನ ಆಡಳಿತ ವೈಫಲ್ಯ, ಗ್ಯಾರಂಟಿಗಳ ವಿಫಲತೆ, ಬರಗಾಲ, ರೈತರ ಸಂಕಷ್ಟದ ಬಗ್ಗೆ ಜನರ ಗಮನವನ್ನು ಬೇರೆಡೆಗೆ ಹೊರಳಿಸುವ ಉದ್ದೇಶದಿಂದ ನಿರಂತರವಾಗಿ ಮೋದಿ ಅವರ ಮೇಲೆ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದೆ ಎಂದು ಹೇಳಿದರು.
ರಾಜ್ಯ ಸರಕಾರದ ಈ ನಡವಳಿಕೆಯ ಬಗ್ಗೆ ಕನ್ನಡಿಗರು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ ಎಂದ ಅವರು; ಜನರ ಸಮಸ್ಯೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸರಕಾರವೇ ಆಲೋಚನೆ ಮಾಡಬೇಕು. ಅದು ಬಿಟ್ಟು ಸುಖಾಸುಮ್ಮನೆ ಕೇಂದ್ರದ ಮೇಲೆ ಗೂಬೆ ಕುರಿಸುವುದು ಸರಿ ಅಲ್ಲ ಎಂದು ನೇರ ಮಾತುಗಳಲ್ಲಿ ಹೇಳಿದರು.
ಲೋಪ ಆಗಿರುವ ಕಡೆ ಗಮನ ಹರಿಸಿ ಸರಿ ಮಾಡಿಕೊಳ್ಳಬೇಕು. ದೆಹಲಿಗೆ ಹೋಗಿ ಚರ್ಚೆ ಮಾಡಬೇಕು. ಆದರೆ; ಮುಖ್ಯಮಂತ್ರಿಯೊಬ್ಬರು ಪ್ರಧಾನಮಂತ್ರಿಗಳನ್ನು ಬಹಿರಂಗ ಚರ್ಚೆಗೆ ಕರೆಯುವುದು ಉದ್ಧಟತನದ ಪರಮಾವಧಿ. ಇದು ಸರಿಯಾದ ನಡವಳಿಕೆ ಅಲ್ಲ. ಪ್ರಧಾನಿಗಳನ್ನು ಚರ್ಚೆಗೆ ಕರೆಯುವ ಮುನ್ನ ತಮ್ಮಿಂದ ಆಗಿರುವ ಲೋಪಗಳನ್ನು ಸರಿ ಪಡಿಸಿಕೊಳ್ಳಬೇಕಿದೆ. ಆ ಸೌಜನ್ಯವನ್ನು ಮುಖ್ಯಮಂತ್ರಿಗಳು ತೋರಿಸಬೇಕಿದೆ. ನಲವತ್ತು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಸರಕಾರ ರಾಜ್ಯದ ನೀರಾವರಿಗೆ ಏನಾದರೂ ಕೊಡುಗೆ ನೀಡಿದೆಯಾ? ಎಂದು ಸಿಎಂ ಸಿದ್ದರಾಮಯ್ಯ ಅವರ ಹೆಸರು ಹೇಳದೆಯೇ ಟಾಂಗ್ ನೀಡಿದರು ಮಾಜಿ ಮುಖ್ಯಮಂತ್ರಿಗಳು.
ಬೀದಿಯಲ್ಲಿ ಚರ್ಚೆ ಮಾಡಬಾರದು:
ಪದೇ ಪದೇ ಕೇಂದ್ರದ ಜತೆ ಸಂಘರ್ಷ ಸರಿ ಅಲ್ಲ. ಇಂತಹ ಸಂಘರ್ಷದಿಂದ ಉಪಯೋಗವೂ ಇಲ್ಲ. ಕೇಂದ್ರದ ನೆರವು ಕಡಿತ ಬಗ್ಗೆ ಬೀದಿಯಲ್ಲಿ ಚರ್ಚೆ ಮಾಡಬಾರದು. ದೋಷಾರೋಪದಿಂದ ಏನಾದರೂ ಲಾಭ ಸಿಗುತ್ತದೆಯೇ? ಸಿಗುವುದಿಲ್ಲ. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಬೇಡ ಎಂದು ಅವರು ಸಿದ್ದರಾಮಯ್ಯ ಅವರಿಗೆ ಕುಮಾರಸ್ವಾಮಿ ಅವರು ಸಲಹೆ ಮಾಡಿದರು.
ಕೆಲ ರಾಜ್ಯಗಳಿಂದ ಇವರು ಪಾಠ ಕಲಿಯಬೇಕಿದೆ. ಒಡಿಶಾ ರಾಜ್ಯದಲ್ಲಿ ನವೀನ್ ಪಟ್ನಾಯಕ್ ಅವರು ಐದು ಅವಧಿಗಳಿಂದ ಸರಕಾರ ನಡೆಸುತ್ತಿದ್ದಾರೆ. ಆ ರಾಜ್ಯದಲ್ಲಿ ನಮ್ಮ ರಾಜ್ಯಕ್ಕಿಂತ ಹೆಚ್ಚು ಬಡತನ ಇದೆ. ಕೇಂದರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರಲಿ ಅಥವಾ ಬಿಜೆಪಿ ಇರಲಿ.. ಅವರೆಂದೂ ಕೇಂದ್ರದ ಜತೆ ಸಂಘರ್ಷಕ್ಕೆ ಇಳಿದಿಲ್ಲ. ಸೌಹಾರ್ದತೆಯಿಂದ ಕೇಂದ್ರದಿಂದ ಸವಲತ್ತುಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇವರು ಕೇವಲ ರಾಜಕೀಯಕ್ಕಾಗಿ ಇದನ್ನೆಲ್ಲಾ ಮಾಡುತ್ತಿದ್ದಾರೆ ಎಂದು ಎಂದು ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.
ನಾನೂ ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದೆ. ಬಿಜೆಪಿ ಜತೆ ಸರಕಾರ ಮಾಡಿದ್ದಾಗ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇತ್ತು. ಕಾಂಗ್ರೆಸ್ ಜತೆ ಸರಕಾರ ಮಾಡಿದ್ದಾಗ ಬಿಜೆಪಿ ಅಧಿಕಾರದಲ್ಲಿ ಇತ್ತು. ೨೦೧೮ರಲ್ಲಿ ನರೇಂದ್ರ ಮೋದಿ ಅವರೇ ಪ್ರಧಾನಿಗಳಾಗಿದ್ದರು. ಅವರ ಜತೆ ನಾನೆಂದೂ ಸಂಘರ್ಷಕ್ಕೆ ಹೋಗಲಿಲ್ಲ. ರಾಜ್ಯಕ್ಕೆ ಆಗಬೇಕಾದ ಎಲ್ಲಾ ಕೆಲಸಗಳು ಆದವು. ನಾನು ಕೇಳಿದಾಕ್ಷಣ ಪ್ರಧಾನಿಗಳ ಕಚೇರಿಯಿಂದ ಭೇಟಿಗೆ ಅವಕಾಶ ದೊರೆಯುತ್ತಿತ್ತು. ಇಲ್ಲಿ ನಾವು ಹೇಗೆ ನಡೆದುಕೊಳ್ಳುತ್ತೇವೆ ಎನ್ನುವುದು ಬಹಳ ಮುಖ್ಯವಾಗುತ್ತದೆ ಎಂದು ಅವರು ಸಿದ್ದರಾಮಯ್ಯ ಅವರ ವಿರುದ್ಧ ಪ್ರಹಾರ ನಡೆಸಿದರು.
ಲೋಕಸಭೆಗೆ ಸ್ಪರ್ಧೆಗೆ ಒತ್ತಡ ಇದೆ:
ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎಂದು ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಒತ್ತಡ ಹೇರುತ್ತಿದ್ದಾರೆ. ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಂಡ್ಯದಿಂದ ಸ್ಪರ್ಧೆ ಮಾಡುವಂತೆ ಕಾರ್ಯಕರ್ತರ ಒತ್ತಡವಿದೆ. ನನ್ನ ಸ್ಪರ್ಧೆಯ ಬಗ್ಗೆ ಸೂಕ್ತ ನಿರ್ಣಯವನ್ನು ಎರಡು ಪಕ್ಷದ ನಾಯಕರು ಕೂತು ತೀರ್ಮಾನ ಮಾಡುತ್ತಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಅಯೋಧ್ಯೆಗೆ ಹೋಗುತ್ತೇನೆ:
ಶ್ರೀರಾಮದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಾನು ಕುಟುಂಬ ಸಮೇತ ಅಯೋಧ್ಯಗೆ ಹೋಗುತ್ತೇನೆ ಎಂದು ಎಂದು ಹೇಳಿದ ಕುಮಾರಸ್ವಾಮಿ ಅವರು; ಇಡೀ ದೇಶವೇ ಹಬ್ಬದ ಸಂಭ್ರಮದಲ್ಲಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕಾತುರನಾಗಿದ್ದೇನೆ. ದೇವೇಗೌಡರು ಕೂಡ ಭಾಗಿಯಾಗುತ್ತಾರೆ. ನಮಗೆಲ್ಲರಿಗೂ ಆಹ್ವಾನ ಬಂದಿದೆ ಎಂದರು.
ಮಾಧ್ಯಮಗೋಷ್ಠಿಯಲ್ಲಿ ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಸಂಸದ ಕುಪೇಂದ್ರ ರೆಡ್ಡಿ ಇತರರು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ